4 ವರ್ಷ ವಯಸ್ಸಿನ ಪುಟಾಣಿ ಎನ್.ವರ್ಷಿತ ಗೌಡ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಕೇವಲ 4 ವರ್ಷ ವಯಸ್ಸಿನ ಪುಟಾಣಿ, ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ವೇಣುಗೋಪಾಲಪುರ ಗ್ರಾಮದ ಎನ್.ವರ್ಷಿತ ಗೌಡ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ಸ್ಥಾನ ಪಡೆಯುವ ಮೂಲಕ ಹೊಸ ದಾಖಲೆ ಬರೆದು ಆಶ್ಚರ್ಯ ಸೃಷ್ಟಿಸಿದ್ದಾಳೆ.
ಇತ್ತೀಚಿಗೆ ನಡೆದ ಸ್ಪರ್ಧೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಂಸ್ಥೆ ಎನ್.ವರ್ಷಿತ ಗೌಡ ಪ್ರತಿಭೆ ಗುರುತಿಸಿದ್ದು ಪ್ರಮಾಣ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದೆ.
ವೇಣುಗೋಪಾಲಪುರ ಗ್ರಾಮದ ವಿ.ನಾಗೇಶ್ ಹಾಗೂ ಎಸ್.ಅಶ್ವಿನಿ ದಂಪತಿಯ ಪುತ್ರಿಯಾಗಿರುವ ವರ್ಷಿತಗೌಡ ಕೇವಲ ನಾಲ್ಕು ವರ್ಷ ವಯಸ್ಸಿನ ಮಗುವಿನೊಳಗಿನ ಪ್ರತಿಭೆ ಕಂಡು ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ಸಿಬ್ಬಂದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ರಾಜಧಾನಿಗಳ ಹೆಸರು ವರ್ಷಿತಗಳ ನೆನಪಿನ ಅಂಗಳದಲ್ಲಿವೆ. 1 ರಿಂದ 15ರವರೆಗಿನ ಗುಣಾತ್ಮಕ ಕೋಷ್ಠಕಗಳನ್ನು ನಿರರ್ಗಳವಾಗಿ ಹೇಳುವುದು. ಇಲ್ಲಿಯವರೆಗಿನ ದೇಶದಲ್ಲಿ ಪ್ರಧಾನಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ 16 ಮಂದಿ ಹೆರಸಗಳನ್ನು ಹೇಳುವ ಮೂಲಕ ತನ್ನಲ್ಲಿನ ಪ್ರತಿಭೆಯನ್ನು ಅನಾವಣಗೊಳಿಸಿದ್ದಾಳೆ.
ಅಷ್ಟೆಯಲ್ಲದೆ ಇಲ್ಲಿಯವರೆಗಿನ 14 ಮಂದಿ ರಾಷ್ಟ್ರಪತಿಗಳ ಹೆಸರು, ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಗಳಾದ ಭಾರತ ರತ್ನ, ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀಗಳ ಹೆಸರು ನೆನಪಿನಲ್ಲಿದೆ.
ಅಪರೂಪದ 10 ಪ್ರಾಣಿ, 6 ಪಕ್ಷಿ , 7 ಹೂವು, 12 ಹಣ್ಣುಗಳು, 9 ತರಕಾರಿಗಳ ಹೆಸರು ನಾಲಿಗೆಯ ಮೇಲೆ ನಳನಳಿಸುತ್ತದೆ.
50 ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡುತ್ತಾಳೆ. ಕರ್ನಾಟಕ ರಾಜ್ಯದಲ್ಲಿನ 31 ಜಿಲ್ಲೆಗಳು ಹಾಗೂ ಕೋಲಾರ ಜಿಲ್ಲೆಯ ಐದು ತಾಲ್ಲೂಕುಗಳು, ರಾಜ್ಯದಲ್ಲಿ ಇದುವರೆಗು ಆಡಳಿತ ನಡೆಸಿರುವ 23 ಮುಖ್ಯಮಂತ್ರಿಗಳ ಹೆಸರನ್ನು ಹೇಳುತ್ತಾಳೆ.
ಯಾವುದೇ ಒಂದು ವಿಷಯದ ಬಗ್ಗೆ ಒಂದು ಬಾರಿ ಹೇಳಿಕೊಟ್ಟರೆ ಸಾಕು, ಆಕೆ ಅದನ್ನು ಎಂದಿಗೂ ಮರೆಯುವುದಿಲ್ಲ. ಬಹಳ ಸಣ್ಣವಯಸ್ಸಿಗೆ ದೊಡ್ಡ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. 2022ರ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ವರ್ಷಿತ ಗೌಡ ವಿವರ ಪ್ರಕಟಗೊಳ್ಳಲಿದೆ. ನಮ್ಮ ಮಗುವಿನ ಸಾಧನೆ ಕಂಡು ಮನಸ್ಸು ತುಂಬ ಸಂತೋಷವಾಗಿದೆ. ಎಲ್ಲರ ಆಶೀರ್ವಾದದಿಂದ ಮಗಳು ಸಾಧನೆ ಮಾಡಿದ್ದಾಳೆ ಎಂದು ಪೋಷಕರು ಸಂತಸವ್ಯಕ್ತಪಡಿಸಿದ್ದಾರೆ.