ದೆಹಲಿಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಸಾಂಸ್ಕೃತಿಕ ಉತ್ಸವದ ಸಮಾರೋಪ – ನಾಟಕ ಪ್ರದರ್ಶಿಸಿ ದೆಹಲಿ ಕನ್ನಡಿಗರ ಹೃದಯ ಗೆದ್ದ ಮಾಲೂರಿನ ರಂಗವಿಜಯ ತಂಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನಗಳ ಮೂಲಕ ಸಮರ ಗೆದ್ದರೆ ಕಲಾವಿದರು ಅವರ ನೆನಪು ಮರುಕಳಿಸುವಂತಹ ನಾಟಕ ಮಾಡಿ ದೆಹಲಿ ಕನ್ನಡಿಗರ ಮನಸ್ಸನ್ನು ಗೆಲ್ಲುವುದರೊಂದಿಗೆ ಜಿಲ್ಲೆಯ ಮಾಲೂರಿನ ರಂಗ ವಿಜಯ ತಂಡ ಗೆದ್ದಿದೆ ಎಂದು ಮಾಜಿ ಸಚಿವ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಸಿಟಿ ರವಿ ನುಡಿದರು.
ದೆಹಲಿ ಕರ್ನಾಟಕ ಸಂಘದ 75ನೇ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಎರಡು ದಿನಗಳ ಸಾಂಸ್ಕೃತಿಕ ಉತ್ಸವಗಳಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಖ್ಯಾತ ನಿರ್ದೇಶಕ
ಟಿ.ಎಸ್ ನಾಗಾಭರಣ ಉದ್ಘಾಟನೆ ಮಾಡಿ ಮಾತನಾಡಿ, ಕಲೆ ಮನಸ್ಸುಗಳನ್ನು ಅರಳಿಸುತ್ತದೆ. ಜೊತೆಗೆ ಜೀವನ್ಮುಖಿಯಾಗಿ ಬದುಕನ್ನು ಹಸನ್ಮುಖಿ ಯಾಗಿಸುವುದು ಅಂತಹ ಕಲೆಗಳನ್ನು ದೂರದ ಕರ್ನಾಟಕದಿಂದ ಬಂದು ದೆಹಲಿಯ ಕನ್ನಡ ಮನಸ್ಸುಗಳಿಗೆ ಸ್ಪೂರ್ತಿ ತುಂಬುವ ಜೊತೆಗೆ ದೇಶ ಪ್ರೇಮವನ್ನು ಮತ್ತಷ್ಟು ಹೆಚ್ಚು ಮಾಡುವ ನಿಟ್ಟಿನಲ್ಲಿ ರಂಗ ವಿಜಯದ ಸ್ವಾತಂತ್ರ ಸಮರ ಕರುನಾಡು ಅಮರ ನಾಟಕವು ಪ್ರತಿಯೊಬ್ಬ ದೇಶಿಗನ ಮನಸ್ಸಿನಲ್ಲಿ ಅಮರವಾಗಿ ನಿಲ್ಲುವುದು ಎಂದರು.
ಮೊಬೈಲ್ ಯುಗವು ವಿಕಸಿತ ಮನಸ್ಸನ್ನು ಕುಬ್ಜಗೊಳಿಸಿ ಏಕಾಂತಕ್ಕೆ ದೂಡುತ್ತದೆ. ಸಾಂಸ್ಕೃತಿಕ ಹಾಗೂ ಜಾನಪದ ಕಲೆಗಳು ಮನುಷ್ಯನನ್ನು ಬಹುಮುಖಿಯಾಗುವಂತೆ ಮಾಡಿ ಜಗತ್ತು ವಿಸ್ಮಯಗಳ ಸಾಗರ ಆನಂದವೇ ಜೀವನ ಎನ್ನುವಂತೆ ಮಾಡುತ್ತದೆ ಎಂದರು.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ್ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಾಂಸ್ಕೃತಿಕ ಕಲೆಗಳ ತವರಾಗಿದ್ದು ದೆಹಲಿ ಅಮೃತ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಉದ್ಘಾಟನೆ ಮಾಡಿಸಿದೆ. ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಜಿಲ್ಲಾ ಉತ್ಸವಗಳನ್ನು ಮಾಡಿಸಿ ಸಮಾರೋಪ ಸಮಾರಂಭವನ್ನು ಪ್ರಧಾನಿಗಳ ಸಮ್ಮುಖದಲ್ಲಿ ಮಾಡುವ ಉದ್ದೇಶವಿದೆ ಎಂದರು.
ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಬಾಬು ಮಾತನಾಡಿ, ರಂಗ ವಿಜಯ ಸ್ವಾತಂತ್ರ್ಯ ಸಮರ ಕರುನಾಡು ಅಮರ ನಾಟಕದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರಯೋಧರನ್ನು ನಾವು ಮರೆತು ಹೋಗುತ್ತಿರುವ ಸಮಯದಲ್ಲಿ ಅದನ್ನು ನೆನಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಈ ನಾಟಕವನ್ನು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅದರಲ್ಲೂ ಯುವಜನರು ಹೆಚ್ಚು ಇರುವ ಸ್ಥಳಗಳಲ್ಲಿ ಪ್ರದರ್ಶನ ಮಾಡಿಸುವ ಪ್ರಯತ್ನದಲ್ಲಿ ಸರ್ಕಾರಿ ನೌಕರರ ಸಂಘವು ರಂಗವಿಜಯದ ಜೊತೆಗೆ ದುಡಿಯಲು ಸದಾ ಸಿದ್ಧ ಎಂದರು.
ಕಂದಾಯ ಗ್ರಾಮಲೆಕ್ಕಿಗರ ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ಅಜಯ್ ಕುಮಾರ್ ಮಾತನಾಡಿ ನಾಡಿನ ಪ್ರತಿ ತಾಲೂಕಿನಲ್ಲಿ ನಮ್ಮ ಸಂಘ ಅಸ್ತಿತ್ವದಲ್ಲಿದ್ದು ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸುವ ಈ ನಾಟಕವನ್ನು ಪ್ರದರ್ಶನ ಮಾಡಲು ನಮ್ಮ ಸಹಕಾರ ಇರುತ್ತದೆ ಎಂದರು.
ಭೂಮಾಪನ ಇಲಾಖೆಯ ಎಂ ಸಂದೀಪ್ ಮಾತನಾಡಿ ಕಲೆಯ ತವರೂರಾದ ಕೋಲಾರದ ಈ ಅದ್ಭುತ ನಾಟಕವನ್ನು ರಂಗಕ್ಕೇರಿಸುವ ಮೂಲಕ ಸ್ವಾತಂತ್ರ್ಯ ಸಮರವನ್ನು ಮತ್ತೆ ನೆನಪಾಗುವಂತೆ ಮಾಡಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಕೈಗಾರಿಕೋದ್ಯಮಿ ನಾರಾಯಣಸ್ವಾಮಿ ಮಾತನಾಡುತ್ತಾ ಪ್ರತಿ ಭಾರತೀಯನ ಮನಸ್ಸನ್ನು ಗೆಲ್ಲುವುದರ ಜೊತೆಗೆ ನಾವು ಭಾರತೀಯರು ಎಂಬ ಹೆಮ್ಮೆ ಮೂಡಿಸುವ ನಿಟ್ಟಿನಲ್ಲಿ ಈ ನಾಟಕ ಗೆದ್ದಿದೆ ಎಂದು ಶ್ಲಾಘಿಸಿದರು.
ಕೋಲಾರ ಜಿಲ್ಲೆಯ ಕಸಾಪ ಅಧ್ಯಕ್ಷ ಗೋಪಾಲಗೌಡ ಮಾತನಾಡಿ ಸಾಹಿತ್ಯ ಪರಿಷತ್ತು ಕನ್ನಡ ಕಟ್ಟುವ ಕೆಲಸ ಮಾಡಿದರೆ ರಂಗ ವಿಜಯ ದೇಶ ಹಾಗೂ ದೇಶಪ್ರೇಮವನ್ನು ಬಿತ್ತುವ ನಿಟ್ಟಿನಲ್ಲಿ ದುಡಿಯುತ್ತಿದೆ ಎಂದು ಹೇಳಿದರು.
ರಂಗ ವಿಜಯ ತಂಡದ ಗೌರವಾಧ್ಯಕ್ಷರಾದ ಪಲ್ಲವಿ ಮಣಿ ಮಾತನಾಡಿ ದೆಹಲಿ ಕನ್ನಡ ಸಂಘದ 75ನೇ ಅಮೃತ ಮಹೋತ್ಸವದಲ್ಲಿ ನಮ್ಮ ತಂಡದ ನಾಟಕ ಪ್ರದರ್ಶನ ಮಾಡಿರುವುದು ನಮಗೆ ಹೆಮ್ಮೆ ಅನಿಸಿದೆ ಎಂದರು.
ಖ್ಯಾತ ನಿರ್ದೇಶಕ ಶಂಕರ್ ನಾಗ್ ಪ್ರಶಸ್ತಿ ವಿಜೇತರಾದ ಮಾಲೂರು ವಿಜಿಯ ನಿರ್ದೇಶನದ ನಾಟಕ ಅದ್ಭುತವಾಗಿ ಮೂಡಿ ಬಂತು.
ಖ್ಯಾತ ರಂಗ ಸಂಗೀತ ನಿರ್ದೇಶಕ ಟಿ. ಲಕ್ಷಿ ನಾರಾಯಣ್, ವಿದ್ವಾನ್ ಸಿ ಆರ್ ನಟರಾಜ್, ಜಾನಪದ ಕೋಗಿಲೆ ಎಂ ಸಿ ಜ್ಯೋತಿಯ ಗಾಯನ ಕಾರ್ಯಕ್ರಮ ಜನರ ಮನಗೆದ್ದಿತು. ರಕ್ಷಿತಾ ತಂಡ ಡೊಳ್ಳು ಪ್ರದರ್ಶನ ಮಾಡಿ ಮಿಂಚಿದರೆ ರಘು ರಾಜ ನಂದ ತಂಡ ಕಂಸಾಳೆಯಲ್ಲಿ ಮಿಂಚಿದರು ಕಲಾವಿದರಾಗಿ ಭಾಗವಹಿಸಿದ ಗೀತಾ ರಾಘವೇಂದ್ರ ಸುಧಾರಾಣಿ ಕಲಾಪ್ರಿಯ ರಕ್ಷಿತಾ ಜಿ.ವಿ. ವೆಂಕಟೇಶ್ ಇನ್ನಿತರರು ಭಾಗವಹಿಸಿದ್ದರು.