ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ- ಕಾರ್ಮಿಕ ಇಲಾಖೆಯಿಂದ ಸಿಗುವ ಸೌಲಭ್ಯ ಪಡೆಯಿರಿ:ಅನುಪಮ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಕಾರ್ಮಿಕ ಇಲಾಖೆ ನೀಡುವ ಸೌಲಭ್ಯಗಳನ್ನು ಬಳಸಿಕೊಳ್ಳಲು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಪರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಪ್ರಭಾರ ಸದಸ್ಯ ಕಾರ್ಯದರ್ಶಿ ಎನ್.ಅನುಪಮ ಕರೆ ನೀಡಿದರು.
ತಾಲ್ಲೂಕಿನ ಕೋಡಿಕಣ್ಣೂರು ಗ್ರಾಮದಲ್ಲಿ ಕಾರ್ಮಿಕ ಇಲಾಖೆ, ಕಟ್ಟಡ ಕಾರ್ಮಿಕರ ಸಂಘ, ಕಾನೂನು ಸೇವಾ ಪ್ರಾಧಿಕಾರ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶ್ರಮ ಜೀವಿಗಳಿಗೆ ಸಾಮಾಜಿಕ ಭದ್ರತೆ ಓದಗಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ಸ್ಥಾಪಿಸಿದ್ದು, ಇದರಿಂದ ಅವರ ಆರೋಗ್ಯ,ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಮಿಕರು ಈ ದೇಶದ ಶಕ್ತಿಯಾಗಿದ್ದಾರೆ, ಅಸರಲ್ಲೂ ಕಟ್ಟಡ ಕಾರ್ಮಿಕರು ಬೃಹತ್ ಕಟ್ಟಡ, ಡ್ಯಾಂಗಳ ನಿರ್ಮಾಣದ ಮೂಲಕ ಸಮಾಜ,ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಅವರ ಸೇವೆ ಸ್ಮರಣೀಯವಾಗಿದೆ, ಅವರ ಪರಿಶ್ರಮಕ್ಕೆ ತಕ್ಕ ಕೂಲಿ ಸಿಕ್ಕರೂ ಅವರ ಬದುಕಿಗೆ ಭದ್ರತೆಯೂ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮಂತ ಪಾಟೀಲ್ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಬಡ ಕುಟುಂಬಗಳಿಂದ ಬಂದವರಾಗಿದ್ದು ಅವರು ಅನಾರೋಗ್ಯಕ್ಕೆ ತುತ್ತಾಗಿ ಹೈಟೆಕ್ ಆಸ್ಪತ್ರೆಗಳಲ್ಲಿ ಉತ್ತಮ ಗುಣ ಮಟ್ಟದ ಚಿಕಿತ್ಸೆ ಪಡೆಯುವುದು ಸಾಧ್ಯವಿಲ್ಲ, ಈ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ಆರಂಭಿಸಿರುವ ಸ್ಥಳದಲ್ಲಿಯೇ ಆರೋಗ್ಯ ತಪಾಸಣೆ ಶಿಬಿರದ ಲಾಭಪಡೆದುಕೊಳ್ಳಬೇಕೆಂದು ತಿಳಿಸಿದರು.
ಹಿರಿಯ ವಕೀಲ ಕೆ.ಆರ್.ಧನರಾಜ್ ಕಟ್ಟಡ ಕಾರ್ಮಿಕರ ಕಾಯಿದೆ ಕುರಿತು ಮಾಹಿತಿ ನೀಡಿ, ಕಟ್ಟಡ ಕಾರ್ಮಿಕರು ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯ ಪಡೆಯಲು ಮೊದಲು ಗುರುತಿನ ಚೀಟಿ ಪಡೆದುಕೊಳ್ಳಿ, ಆರೋಗ್ಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುವ ಸೌಲಭ್ಯ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆಯ ಅಡಿಯಲ್ಲಿ ಫಲಾನುಭವಿ ಕಾರ್ಮಿಕರು ಸೌಲಭ್ಯಗಳನ್ನು ಪಡೆಯುವ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಲಕ್ಷ್ಮಣರೆಡ್ಡಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಆರ್.ನಾಗರಾಜ್, ಕಾರ್ಮಿಕ ಇಲಾಖೆಯ ಪ್ರಕಾಶ್ ಮತ್ತಿತರರು ಹಾಜರಿದ್ದರು.