ಕೋವಿಡ್ 2ನೇ ಲಸಿಕೆ ಬಳಿಕ ಬೂಸ್ಟರ್ ಡೋಸ್ ನಡುವಿನ ಅಂತರ 9 ತಿಂಗಳ ಬದಲು 6 ತಿಂಗಳಿಗೆ ಇಳಿಕೆ ಸಂಭವ

JANANUDI.COM NETWORK

ನವದೆಹಲಿ: ಕೋವಿಡ್ 4ನೇ ಅಲೆ ಆತಂಕದ ನಡುವೆ ಕೋವಿಡ್ ಲಸಿಕೆಯ ಎರಡನೇ ಮತ್ತು ಬೂಸ್ಟರ್ ಡೋಸ್ ನಡುವಿನ ಸಮಯದ ಅಂತರವನ್ನು 9 ತಿಂಗಳಿಂದ 6 ತಿಂಗಳಿಗೆ ಇಳಿಸುವ ಸಾಧ್ಯತೆ ಇದೆ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ 
ಇದೇ 29ರಂದು ಸಭೆ ನಡೆಸಲಿರುವ ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ಸಲಹಾ ಸಮಿತಿಯು(ಎನ್‌ಟಿಎಜಿಐ) ಈ ಬಗ್ಗೆ ಶಿಫಾರಸು ಮಾಡುವ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಐಸಿಎಂಆರ್ ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿನ ಅಧ್ಯಯನಗಳು, ಲಸಿಕೆ ಪಡೆದ ಸುಮಾರು ಆರು ತಿಂಗಳ ನಂತರ ಪ್ರತಿಕಾಯ ಮಟ್ಟವು ಕ್ಷೀಣಿಸುತ್ತದೆ ಮತ್ತು ಎರಡೂ ಡೋಸ್‌ಗಳೊಂದಿಗೆ ಬೂಸ್ಟರ್‌ ಅನ್ನು ನೀಡುವುದರಿಂದ ಪ್ರತಿರಕ್ಷಣಾ ಮಟ್ಟ ಹೆಚ್ಚಾಗುತ್ತದೆ ಎಂದು ಸೂಚಿಸಿವೆ.
ಎರಡನೇ ಡೋಸ್ ಲಸಿಕೆ ಪಡೆದು ಒಂಬತ್ತು ತಿಂಗಳು ಪೂರೈಸಿದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರು ಎಂಬುದು ಸದ್ಯದ ನಿಯಮವಾಗಿದೆ. ಭಾರತ ಮತ್ತು ವಿದೇಶಗಳಲ್ಲಿ ನಡೆಸಿರುವ ಅಧ್ಯಯನಗಳ ವೈಜ್ಞಾನಿಕ ಪುರಾವೆಗಳು ಮತ್ತು ಸಂಶೋಧನೆಗಳನ್ನು ಗಣನೆಗೆ ತೆಗೆದುಕೊಂಡು ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ನಡುವಿನ ಅಂತರವನ್ನು ಒಂಬತ್ತು ತಿಂಗಳಿಂದ ಆರು ತಿಂಗಳಿಗೆ ಕಡಿಮೆಗೊಳಿಸಲಾಗುವುದು.
ಈ ಬಗ್ಗೆ ಅಂತಿಮ ನಿರ್ಧಾರ ಶುಕ್ರವಾರ ಸಭೆ ಸೇರಲಿರುವ ಎನ್‌ಟಿಎಜಿಐ ಶಿಫಾರಸುಗಳ ಆಧಾರದ ಮೇಲೆ ತೆಗೆದುಕೊಳ್ಳಲಾಗುವುದು. ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ