ಪಟ್ಟಣದಲ್ಲಿ ನಡೆಯಲಿರುವ ತಾಲ್ಲೂಕು ಮಟ್ಟದ ಆರೋಗ್ಯ ಮೇಳದ ಯಶಸ್ಸಗೆ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಶ್ರಮಿಸಬೇಕು : ಶಿರಿನ್ ತಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಏ.25 ರಂದು ನಡೆಯಲಿರುವ ತಾಲ್ಲೂಕು ಮಟ್ಟದ ಆರೋಗ್ಯ ಮೇಳದ ಯಶಸ್ಸಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಕ್ಷೇಮ ಕೇಂದ್ರಗಳನ್ನು ಬಲಪಡಿಸಲು. ಜನರಲ್ಲಿ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅರಿವು ಮೂಡಿಸಲು, ಪ್ರಾಥಮಿಕ ಹಂತದಲ್ಲಿ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಉದ್ದೇಶದಿಂದ ಆರೋಗ್ಯ ಮೇಳ ಏರ್ಪಡಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕು ಮಟ್ಟದಲ್ಲಿ ನಡೆಯುವ ಈ ಆರೋಗ್ಯ ಮೇಳಕ್ಕೆ ಹೆಚ್ಚಿನ ಮಹತ್ವವಿದೆ. ಈ ಮೇಳದಲ್ಲಿ ತಜ್ಞ ವೈದ್ಯರು ಹಾಗೂ ತಂತ್ರಜ್ಞರು ಭಾಗವಹಿಸುವುದರಿಂದ ಜನ ಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಸಿಬ್ಬಂದಿ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಆರೋಗ್ಯ ಮೇಳದಲ್ಲಿ ಯಾವುದೇ ಕುಂದು ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಡಾ. ಉಮಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ಪುರಸಭೆ ಆರೋಗ್ಯ ನಿರೀಕ್ಷಕಿ ಫಾತಿಮಾ, ಎಂ.ಎಸ್.ಚಂದ್ರಶೇಖರ್, ಹರೀಶ್, ನವೀನ್, ಸುರೇಶ್ ಇದ್ದರು.