ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
ಕೋಲಾರ : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ಎಲ್ಲಾ ಸೌಲಭ್ಯಗಳನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ || ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ನಾಗೇಶ್ ಅವರು ತಿಳಿಸಿದರು .
ಇಂದು ಮುಳಬಾಗಿಲು ತಾಲ್ಲೂಕಿನ ಬೈರಕೂರು ಹೋಬಳಿಯ ನಾಗೇನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ” – ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು . ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಲಾಗಿದೆ . ಗ್ರಾಮವಾಸ್ತವ್ಯ ಕಾರ್ಯಕ್ರಮದ ಗುರಿ ಸರ್ಕಾರದ ಎಲ್ಲಾ ಸೌಲಭ್ಯಗಳು ಗ್ರಾಮಸ್ಥರ ಮನೆಬಾಗಿಲಿಗೆ ತಲುಪಿಸುವುದಾಗಿದ್ದು , ಪ್ರತಿ ಮಾಹೆಯ 3 ನೇ ಶನಿವಾರದಂದು ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಅವುಗಳನ್ನು ವಿಲೇ ಮಾಡುವ ವಿಶಿಷ್ಟ ಕಾರ್ಯಕ್ರಮವಾಗಿದೆ . ಕ್ಷೇತ್ರದ ಜನರು ಸರ್ಕಾರದ ಈ ಯೋಜನೆಯ ಸದುಪಯೋಗವನ್ನು ಪಡೆಯಬೇಕು ಎಂದು ತಿಳಿಸಿದರು . ಮುಳಬಾಗಿಲು ತಾಲ್ಲೂಕಿನ ಗುಡಿಪಲ್ಲಿಯಿಂದ ನಾಗೇನಹಳ್ಳಿಯವರೆಗೆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಹಾಗೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು . ಗ್ರಾಮಕ್ಕೆ ಸ್ಮಶಾನ ಬಹುಮುಖ್ಯ ಆದ್ದರಿಂದ ಸ್ಮಶಾನಕ್ಕೆ ಸಾರ್ವಜನಿಕ ಸ್ಥಳವನ್ನು ಗುರುತಿಸಲಾಗುವುದು . ಇಂದು ಪಶುಪಾಲನೆ ಮತ್ತು ಪಶು ಸಂಗೋಪನೆ ಇಲಾಖೆ ವತಿಯಿಂದ ಗೋವು ಮತ್ತು ಕುರಿಗಳಿಗೆ ರೋಗ ನಿರೋಧಕ ಲಸಿಕೆಯನ್ನು ನೀಡಲಾಗಿದೆ . ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಗ್ರಾಮ ಪಂಚಾಯಿತಿಯ ಸದಸ್ಯರು ಹಾಗೂ ಅಧ್ಯಕ್ಷರು ಸೇರಿ ಗ್ರಾಮಸ್ಥರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸುವ ಮೂಲಕ ಸಾರ್ವಜನಿಕರು ಸರ್ಕಾರಿ ಸವಲತ್ತುಗಳನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಪಡೆದುಕೊಳ್ಳಬಹುದಾಗಿದೆ . ನಾಗೇನಹಳ್ಳಿ ಗ್ರಾಮದ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದು ಶೀಘ್ರದಲ್ಲಿ ಶಿಕ್ಷಕರ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು . ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಶುದ್ಧ ಕುಡಿಯುವ ನೀರಿನ ಘಟಕವನ್ನು ಅತಿ ಶೀಘ್ರದಲ್ಲಿ ನಿರ್ಮಿಸಲಾಗುವುದು . ನಾಗೇನಹಳ್ಳಿ ಗ್ರಾಮವನ್ನು ಒಂದು ಮಾದರಿ ಗ್ರಾಮವಾಗಿ ಮಾಡಲು ಶ್ರಮಿಸುತ್ತೇನೆ ಎಂದು ಅವರು ತಿಳಿಸಿದರು . ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮತ್ತು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜಿಲ್ಲೆಯ ಪೂರ್ತಿ ಆಡಳಿತ ಬಂದು ನಿಮ್ಮ ಹಳ್ಳಿಯಲ್ಲಿ ವಾಸ್ತವ್ಯವಿದೆ . ನಿಮ್ಮ ಸಮಸ್ಯೆಗಳು ಏನೇ ಇರಲಿ ಅರ್ಜಿ ಸಲ್ಲಿಸುವ ಮೂಲಕ ಅದನ್ನು ಅತೀ ಶೀಘ್ರದಲ್ಲಿ ಪರಿಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು . ನಿಮ್ಮ ಗ್ರಾಮವನ್ನು ಅಭಿವೃದ್ಧಿ ಪಡಿಸಲು ನೀವು ಕೋರಿರುವ ಎಲ್ಲಾ ಸಮಸ್ಯೆಗಳನ್ನು ಗುರುತಿಸಿದ್ದೇವೆ . ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕ , ಗ್ರಾಮಸ್ಥರು ಹಾಗೂ ಶಾಲಾ – ಕಾಲೇಜು ವಿದ್ಯಾರ್ಥಿಗಳು ಓಡಾಡಲು ಡಾಂಬರೀಕೃತ ರಸ್ತೆ , ಗ್ರಾಮಕ್ಕೆ ನಿರಂತರ ಜ್ಯೋತಿ ಅಡಿಯಲ್ಲಿ ವಿದ್ಯುತ್ ಸರಬರಾಜು ಮುಂತಾದ ಗ್ರಾಮದ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು .
ಎಲ್ಲಾ ಗ್ರಾಮಸ್ಥರು ನೀರನ್ನು ಮಿತವಾಗಿ ಬಳಕೆ ಮಾಡಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಹಾಗೂ ಯಾವುದೇ ಮಗುವು ಶಿಕ್ಷಣದಿಂದ ದೂರ ಉಳಿಯಬಾರದು ಇದರ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು . ಮುಳಬಾಗಿಲು ತಾಲ್ಲೂಕು ತಹಸೀಲ್ದಾರ್ರಾದ ಆರ್.ಶೋಭಿತಾ ಅವರು ಮಾತನಾಡಿ , ಕಳೆದ ಒಂದು ವಾರದಿಂದ ಈ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ ಅವರ ಕುಂದುಕೊರತೆಗಳನ್ನು ಗುರಿತಿಸಿ ಕೆಲವು ಬಗೆಹರಿಸಿದ್ದು , ಮುಂದಿನ ದಿನಗಳಲ್ಲಿ ಉಳಿದ ಎಲ್ಲವನ್ನೂ ಪರಿಹರಿಸಲಾಗುವುದು . ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಿಂದುಳಿದ ಹಾಗೂ ಗಡಿಯಲ್ಲಿರುವ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಇಡೀ ದಿನ ಹಳ್ಳಿಯಲ್ಲಿ ವಾಸ್ತವ್ಯ ವಹಿಸಿ ಗ್ರಾಮದಲ್ಲಿ ಇರುವಂತಹ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಉದ್ದೇಶ . ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಯಿತು ಎಂದು ಅವರು ತಿಳಿಸಿದರು . ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳಲ್ಲಿ ಏನೆಲ್ಲ ಸೌಲಭ್ಯಗಳು ಸಿಗುತ್ತದೆ ಎಂಬುದನ್ನು ಗ್ರಾಮಸ್ಥರಿಗೆ ವಿವರವಾಗಿ ತಿಳಿಸಿದರು . ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮೀ ಬಾಂಡ್ , ವೃದ್ಧಾಪ್ಯ ವೇತನ , ವಿಧವಾ ಪಿಂಚಣಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ್ಗಳನ್ನು ಗ್ರಾಮದ ಫಲಾನುಭವಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಸ್ಥಳದಲ್ಲೇ ವಿತರಿಸಲಾಯಿತು . ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ || ಸ್ನೇಹಾ , ಜಿಲ್ಲಾ ಅಂಧತ್ವಾಧಿಕಾರಿಗಳಾದ ನಾರಾಯಣಸ್ವಾಮಿ , ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಸೋಮಶಂಕರಪ್ಪ , ಮುಳಬಾಗಿಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸರ್ವೇಶ್ , ಮುಳಬಾಗಿಲು ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ || ವರ್ಣ , ಗುಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀ ಮಂಜುನಾಥ್ , ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .