ಯಾವುದೇ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸಾಂಘಿಕ ಪ್ರಯತ್ನ ಮಾಡಬೇಕು : ಜಿ.ಕೆ.ವೆಂಕಟಶಿವಾರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಾರ್ಯಕರ್ತರು ಪಕ್ಷದ ಸಂಘಟನೆಯನ್ನು ಬಲಪಡಿಸಬೇಕು. ಯಾವುದೇ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸಾಂಘಿಕ ಪ್ರಯತ್ನ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಯರ್ರಂವಾರಿಪಲ್ಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯದ ನದಿಗಳ ನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದದೇಶದಿಂದ ಜೆಡಿಎಸ್ ಜನತಾ ಜಲಧಾರೆ ಯಾತ್ರೆ ಕೈಗೊಂಡಿದೆ ಎಂದು ಹೇಳಿದರು.
ಜನತಾ ಜಲಧಾರೆ ಯಾತ್ರೆ ಏ.25 ರಂದು ತಾಲ್ಲೂಕಿನಲ್ಲಿ ನಡೆಯಲಿದೆ. ಅಂದು ಆಗಮಿಸಲಿರುವ ಜಲ ರಥವನ್ನು ಶ್ರೀನಿವಾಸಪುರದಲ್ಲಿ ಬರಮಾಡಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖಂಡ ಸಿ.ಎಂ.ಇಬ್ರಾಹೀಂ ಭಾಗವಹಿಸಲಿದ್ದಾರೆ. ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಹಾಗೂ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ಮೂಲಕ ಕೇಂದ್ರ ಸರ್ಕಾರ ನೀಡುವ ಬಡ್ಡಿರಹಿತ ಸಾಲವನ್ನು ಇಲ್ಲಿನ ಕೆಲವು ಜನಪ್ರತಿನಿಧಿಗಳು ಮನೆಯಿಂದ ತಂದು ಹಂಚಿದಂತೆ ವರ್ತಿಸುತ್ತಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಸಾಲ ಕೊಡಬೇಕು. ಆದರೆ ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ವಿ.ಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ಶಿವಾರೆಡ್ಡಿ, ಶ್ರೀನಿವಾಸರೆಡ್ಡಿ, ಸುಬ್ರಮಣಿ, ನಾರಾಯಣಸ್ವಾಮಿ, ಮನು, ರಾಮಚಂದ್ರ ಇದ್ದರು.