ಕುಂದಾಪುರ – ಹದಿನೈದನೇ ಕನ್ನಡ ಸಾಹಿತ್ಯ ಸಮ್ಮೇಳನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕನ್ನಡ ಉಳಿಸಬೇಕು, ಬೆಳೆಸಬೇಕು ಎಂಬ ಕೂಗು ಹೆಚ್ಚಿದೆ. ಆದರೆ, ಅದನ್ನು ಮಾಡುವವರು ಯಾರು ? ಕನ್ನಡ ಶಾಲೆಗಳನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ. ಇಲ್ಲವಾದರೆ ಆಂಗ್ಲ ಮೋಹ ಎಲ್ಲವನ್ನೂ ನುಂಗಿಹಾಕುತ್ತದೆ. ಬೆಂಗಳೂರಿನಲ್ಲಿಂದು ಕನ್ನಡಿಗರ ಸಂಖ್ಯೆ ಶೇ.30. ಕನ್ನಡದ ಉಳಿವಿನ ಕಾರ್ಯದಲ್ಲಿ ಅವರಿವರನ್ನು ದೂಷಿಸಿದರೆ ಫಲವಿಲ್ಲ. ನಾವೇ ಮೊದಲು ಕನ್ನಡದವರಾಗಬೇಕು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕವಿ ಮುದ್ದಣ ವೇದಿಕೆಯಲ್ಲಿ ನಡೆದ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತಿಗಳು ವಿಭಿನ್ನ ವಿಷಯವಾಗಿ ಬರೆಯುತ್ತಾರೆ. ಆದರೆ ಅವನ್ನು ಓದುವವರೆ ಇಲ್ಲವಾಗಿದೆ. ಸರಸ್ವತಿ ಪುತ್ರರಾದ ಸಾಹಿತಿಗಳ ಕೃತಿಗಳನ್ನು ಲಕ್ಷ್ಮೀ ಪುತ್ರರು ಕೊಂಡು ಓದಿ ಬೆಂಬಲಿಸಬೇಕು ಎಂದು ಹೇಳಿದ ಅವರು, ಕನ್ನಡ ಸೇವೆಯನ್ನು ಸರ್ಕಾರದಿಂದ ನಿರೀಕ್ಷಿಸಲು ಆಗದು ಎಂದರು. ಅನುದಾನಿತ ಕನ್ನಡ ಶಾಲೆಗಳಿಗೆ ಅಧ್ಯಾಪಕರನ್ನು ಸರ್ಕಾರ ನೇಮಿಸುತ್ತಿಲ್ಲ. ಕನ್ನಡದ ಉಳಿವು ಬೆಳೆಯುವಿಕೆಗೆ ಸರ್ಕಾರದ ಪ್ರೋತ್ಸಾಹ ತಕ್ಕಷ್ಟಿಲ್ಲ. ಸಾಹಿತ್ಯ ಸಮ್ಮೇಳನಗಳಿಗೆ ಕೋಟಿಗಟ್ಟಲೆ ಕೊಟ್ಟರೂ ಅದು ಸಾಹಿತಿಗಳಿಗೆ, ಕನ್ನಡದ ಕೆಲಸಗಳಿಗೆ ಲಭ್ಯವಾಗುತ್ತಿಲ್ಲ. ಸಾಹಿತಿಗಳನ್ನು, ಕನ್ನಡಾಭಿಮಾನಿಗಳನ್ನು ಒಟ್ಟುಗೂಡಿಸಿ ಕನ್ನಡದ ಕೆಲಸಗಳನ್ನು ನಡೆಸುವ ಕಾರ್ಯ ಇಂದು ಸಾಹಿತ್ಯ ಪರಿಷತ್ ನಿಂದ ಆಗುತ್ತಿದೆ ಎಂದವರು ಹೇಳಿದರು. 30 ವರ್ಷಗಳ ಹಿಂದೆ ಕುಂದಾಪುರದಲ್ಲಿ ನಡೆದಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೈಭವವನ್ನು ಅವರು ಸ್ಮರಿಸಿಕೊಂಡರು.
ನಿಕಟಪೂರ್ವ ಜಿಲ್ಲಾ ಸಮ್ಮೇಳನಾಧ್ಯಕ್ಷೆ, ಹಿರಿಯ ಸಾಹಿತಿ ವೈದೇಹಿಯವರ ಭಾಷಣದ ವಿಡಿಯೋ ಪ್ರದರ್ಶಿಸಲಾಯಿತು.
ಡಾ. ಗಾಯತ್ರೀ ನಾವಡ ವಿವಿಧ ಲೇಖಕರ ನೂತನ ಕೃತಿಗಳನ್ನು ಅನಾವರಣಗೊಳಿಸಿದರು. ಪುಸ್ತಕ ಮಳಿಗೆಯನ್ನು ಉದ್ಘಾಟಿಸಲಾಯಿತು. ಜಿಲ್ಲಾ ಕ. ಸಾ. ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳ ಸಮಕ್ಷಮ ಸಮ್ಮೇಳನಾಧ್ಯಕ್ಷ ಪ್ರೊ. ಎ. ವಿ. ನಾವಡರಿಗೆ ನಾಡಧ್ವಜವನ್ನು ಹಸ್ತಾಂತರಿಸಲಾಯಿತು.
ಸಮ್ಮೇಳನಾಧ್ಯಕ್ಷ ಪ್ರೊ. ಎ. ವಿ. ನಾವಡ ಅಧ್ಯಕ್ಷೀಯ ಭಾಷಣ ಮಾಡಿ, ಭಾಷೆ ಎಂದರೆ ಬರೀ ಸಂವಹನದ ಸಾಮರ್ಥ್ಯ ಅಷ್ಟೇ ಅಲ್ಲ. ಅದರ ಪರಿಕಲ್ಪನೆ, ಸ್ವರೂಪ ಇಂದು ಬದಲಾಗಿದೆ. ಇಂಗ್ಲಿಷ್ ಭಾಷೆಯ ದಾಳಿಯಿಂದಾಗಿ ಪ್ರತಿವರ್ಷ ಜಗತ್ತಿನ ಅನೇಕ ಪ್ರಾದೇಶಿಕ ಭಾಷೆಗಳು, ಬುಡಕಟ್ಟು ಭಾಷೆಗಳು, ಸಮುದಾಯದ ಭಾಷೆಗಳು ಅಳಿವಿನಂಚಿಗೆ ಸಾಗುತ್ತಿವೆ, ಸಾಯುತ್ತಿವೆ. ಅದು ಇಡೀ ಒಂದು ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗಬಲ್ಲುದು. ಸರ್ವಂ ಇಂಗ್ಲಿಷ್ ಮಯಮ್ ಆಗುತ್ತಿರುವ ಈ ದಿನಗಳಲ್ಲಿ ಭಾಷೆಗಳನ್ನು ಜೀವಂತವಾಗಿಟ್ಟು, ಉಳಿಸಿ ಬೆಳೆಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಮುಖ್ಯವಾಗಿವೆ ಎಂದರು.
ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರು, ಉಡುಪಿ ಜಿಲ್ಲಾ ಕ ಸಾ ಪ ಸ್ಥಾಪಕಾಧ್ಯಕ್ಷ ಎ ಎಸ್ ಎನ್ ಹೆಬ್ಬಾರ್, ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕುಂದಾಪುರ ತಾಲೂಕು ಕ ಸಾ ಪ ಅಧ್ಯಕ್ಷ ಡಾ. ಉಮೇಶ್ ಪುತ್ರನ್ ಮಾತನಾಡಿದರು.
ಉದ್ಘಾಟನಾ ಪೂರ್ವದಲ್ಲಿ ಸಮ್ಮೇಳನಾಧ್ಯಕ್ಷ ಪ್ರೊ. ಎ ವಿ ನಾವಡ ಮತ್ತು ಡಾ. ಗಾಯತ್ರಿ ನಾವಡ ದಂಪತಿಯನ್ನು ವೈಭವದ ಪುರಮೆರವಣಿಗೆಯ ಮೂಲಕ ಸಮ್ಮೇಳನಾಂಗಳಕ್ಕೆ ಕರೆತರಲಾಯಿತು. ಜಿಲ್ಲಾ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.

ಇದು ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಿದ್ದರೂ ತಾಲೂಕು ಸಮ್ಮೇಳನದಷ್ಟೂ ಅದ್ಧೂರಿಯಾಗಿರಲಿಲ್ಲ. ಹಿರಿಯ ಸಾಹಿತಿಗಳು, ಕನ್ನಡಕ್ಕಾಗಿ ಕೆಲಸ ನಿರ್ವಹಿಸಿದವರನ್ನು ಸಮ್ಮೇಳನದಿಂದ ದೂರ ಇರಿಸಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಜಿಲ್ಲಾ ಸಮ್ಮೇಳನದಂತಹ ಸಮಾರಂಭವನ್ನು ಹಮ್ಮಿಕೊಳ್ಳುವಾಗ ಪೂರ್ವ ತಯಾರಿಯ ಲೋಪ ಹಲವು ಅಭಾಸಗಳಿಗೆ ಕಾರಣವಾಯಿತು. ಸಮರ್ಪಕವಾದ ಪ್ರಚಾರದ ಕೊರತೆಯಿಂದ ಸಭಿಕರ ಸಂಖ್ಯೆಯೂ ಕಡಿಮೆ ಇತ್ತು.

ಸಾಹಿತಿ, ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್ ಸಮ್ಮೇಳನಾಧ್ಯಕ್ಷರ ಪರಿಚಯ ನೀಡಿದರು.