ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಕಾನೂನು ಅರಿವು ಇದ್ದರೆ, ಗ್ರಾಮದಲ್ಲಿ ಶಾಂತಿ,ಸೌಹಾರ್ದತೆ ನೆಲಸಲು ಸಹಕಾರಿ-ಸಿ.ಹೆಚ್.ಗಂಗಾಧರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸಾಮಾನ್ಯ ಕಾನುಗಳ ಅರಿವು ಇದ್ದರೆ ಅದರಿಂದ ಗ್ರಾಮದಲ್ಲಿ ಶಾಂತಿ,ಸೌಹಾರ್ದತೆ ನೆಲಸಲು ಹೆಚ್ಚು ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ತಿಳಿಸಿದರು.
ಕಾನೂನು ಪ್ರಾಧಿಕಾರಿ,ವಕೀಲರ ಸಂಘ, ಸುಗಟೂರು ಗ್ರಾ.ಪಂ ವತಿಯಿಂದ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಗ್ರಾ.ಪಂ ಸದಸ್ಯರು, ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗ್ರಾ.ಪಂ ಚುನಾಯಿತಿ ಸದಸ್ಯರಿಗೆ ಸಾಮಾನ್ಯ ಕಾನೂನುಗಳ ಅರಿವು ಇದ್ದರೆ, ಸಮಾಜದಲ್ಲಿ ಎದುರಾಗುವ ಅಶಾಂತಿಯ ವಾತಾವರಣವನ್ನು ಸಮರ್ಪಕವಾಗಿ ನಿರ್ವಹಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಗ್ರಾಮದಲ್ಲಿನ ಭೂವಿವಾದ ಪರಿಹಾರ, ಕೋಮು ಸಾಮರಸ್ಯ ಕಾಪಾಡುವುದು ಸದಸ್ಯರ ಜವಾಬ್ದಾರಿಯಾಗಿದೆ, ಈ ನಿಟ್ಟಿನಲ್ಲಿ ಕಾನೂನಿನ ಅರಿವು ಇದ್ದರೆ ಜನರಿಗೆ ತಿಳಿಹೇಳಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಹುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯರು, ಜನತೆಯೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಅಂಗನವಾಡಿ,ಆಶಾ ಕಾರ್ಯಕರ್ತೆಯರಿಗೆ ಕಾನೂನಿನ ಅರಿವು ಪಡೆದರೆ ಅದರಿಂದ ಪ್ರತಿ ಪ್ರಜೆಗೂ ಮಾಹಿತಿ ರವಾನೆಯಾಗುತ್ತದೆ, ಸಮಾಜದಲ್ಲಿ ಕಾನೂನು ಪಾಲನೆ,ಶಾಂತಿ ನೆಲಸಲು ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಗಟೂರು ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷಮ್ಮ, ಗ್ರಾಮೀಣ ಜನತೆಗೆ ಕಾನೂನಿನ ಅರಿವು ಮೂಡಿಸಲು ಆಗಮಿಸಿರುವ ನ್ಯಾಯಾಧೀಶರು,ವಕೀಲರ ಸಾಮಾಜಿಕ ಕಾಳಜಿಗೆ ಧನ್ಯವಾದ ತಿಳಿಸಿದರು.
ಆಶಾ, ಅಂಗನವಾಡಿ ಕಾರ್ಯಕರ್ತೆಯರೂ ಸಹಾ ಕಾನೂನಿನ ಅರಿವು ಪಡೆದು ಜನತೆಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಸರ್ಕಾರಿ ವಕೀಲ ಮಾಗೇರಿ ನಾರಾಯಣಸ್ವಾಮಿ, ಭೂಕಂದಾಯ ಕಾಯಿದೆಯಡಿ ರೈತರು ತಮ್ಮ ಭೂಮಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ, ದಾಖಲೆಗಳನ್ನು ಪಡೆಯುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಘುಪತಿಗೌಡ, ಪೋಕ್ಸೋ ಕಾಯಿದೆ ಕುರಿತು ಹಾಗೂ ಹಿರಿಯ ವಕೀಲ ಕೆ.ಆರ್.ಧನರಾಜ್, ಜನಸಾಮಾನ್ಯರಿಗೆ ನಿತ್ಯ ಅಗತ್ಯವಾದ ಕಾನೂನುಗಳ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ವಕೀಲ ವಿನಾಯಕ ರೆಡ್ಡಿ, ಅಶ್ವಥ್, ಟಿ.ಎಂ.ಶಿವಣ್ಣ, ಮತ್ತಿರರಿದ್ದರು.