ಕೋಮು ಸೌಹಾರ್ದ ಕದಡುವ ಸಮಾಜ ಘಾತಕ ಶಕ್ತಿಗಳನ್ನು ಬೆಂಬಲಿಸಬಾರದು : ಜಿ.ಕೆ.ವೆಂಕಟಶಿವಾ ರೆಡ್ಡಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕೋಮು ಸೌಹಾರ್ದ ಕದಡುವ ಸಮಾಜ ಘಾತಕ ಶಕ್ತಿಗಳನ್ನು ಬೆಂಬಲಿಸಬಾರದು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮನವಿ ಮಾಡಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಜನರು ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದಾರೆ. ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟುಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.
ಆಹಾರ ಪದ್ಧತಿ ಹಾಗೂ ಆಚರಣೆಗಳು ಬೇರೆ ಬೇರೆಯಾಗಿರಬಹುದು. ಅದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ. ಮಾವಿನ ಹಣ್ಣಿನ ವ್ಯಾಪಾರದಲ್ಲಿ ಧರ್ಮ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ಮಾವು ಬೆಳೆಗಾರರಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರಿದ್ದಾರೆ. ಹಾಗೆಯೇ ಎರಡೂ ಕೋಮಿನ ಜನರು ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಮಂಡಿ ಮಾಲೀಕರು ರೈತರ ಕಷ್ಟಕ್ಕೆ ಸ್ಪಂದಿಸಿ ಆರ್ಥಿಕ ನೆರವು ನೀಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಒಂದು ಕೋಮಿನ ವ್ಯಾಪಾರ ವಹಿವಾಟನ್ನು ನಿರ್ಲಕ್ಷಿಸುವುದು, ಅವರ ವ್ಯಾಪಾರಕ್ಕೆ ಕಲ್ಲುಹಾಕಲು ಇನ್ನೊಂದು ಕೋಮಿನ ಜನರನ್ನು ಎತ್ತಿಕಟ್ಟುವುದು ಮಾನವೀಯ ನಡೆಯಲ್ಲ ಎಂದು ಹೇಳಿದರು.
ಕ್ಷುಲ್ಲಕ ವಿಷಯಗಳಿಗೆ ಮಹತ್ವ ನೀಡುವ ಬದಲು, ಬಾಯಾರಿದ ಜಿಲ್ಲೆಗಳಿಗೆ ಎತ್ತಿನ ಹೊಳೆ ನೀರು ಹರಿಸಲು ಸರ್ಕಾರವನ್ನು ಒತ್ತಾಯಿಸಬೇಕು. ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿರುವ ಕೆಸಿ ವ್ಯಾಲಿ ನೀರನ್ನು ಮೂರನೇ ಬಾರಿಗೆ ಸಂಸ್ಕರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ದ ಸಾಂಘಿಕ ಹೋರಾಟ ನಡೆಸಬೇಕು. ಮೂಲ ಸೌಕರ್ಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕು. ಮಾವು ಸಂಸ್ಕರಣ ಘಟಕ ಸ್ಥಾಪಿಸುವಂತೆ ಆಗ್ರಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ನಂಜುಂಡಪ್ಪ, ತೂಪಲ್ಲಿ ಆರ್.ನಾರಾಯಣಸ್ವಾಮಿ, ರಾಜಣ್ಣ, ಪುರಸಭೆಯ ಉಪಾದ್ಯಕ್ಷೆ ಆಯಿಷಾ ನಯಾಜ್, ಸದಸ್ಯರಾದ ಆನಂದ್, ಶ್ರೀನಿವಾಸ್, ಮುಖಂಡರಾದ ಏಜಾಜ್ ಅಹ್ಮದ್, ಪೂಲ ಶಿವಾರೆಡ್ಡಿ, ರವಿ, ವಹೀದಾ ಬೇಗಮ್, ಜಬೀನ್ ತಾಜ್, ಫಾತಿಮಾ ಇದ್ದರು.