ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ:- ಮಾನಸಿಕ ವಿಕಲಾಂಗ ವ್ಯಕ್ತಿಗಳಿಗೆ ಹಿಂಸೆ ನೀಡುವುದು, ಅವರನ್ನು ಕೀಳಾಗಿ ಕಾಣುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು, ಮಾನವೀಯ ನೆಲಗಟ್ಟಿನಲ್ಲಿ ಅವರ ಮನಸ್ಥಿತಿ ಬದಲಾವಣೆಗೆ ಪ್ರಯತ್ನ ನಡೆಸಬೇಕು ಎಂದು 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಪವನೇಶ್ ಕರೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾನಸಿಕ ಆರೋಗ್ಯ ಕಾಯಿದೆ ಹಾಗೂ ನಾಲ್ಸಾ ಮಾನಸಿಕ ಅಸ್ವಸ್ಥ ಮತ್ತು ಮಾನಸಿಕ ವಿಕಲಾಂಗ ವ್ಯಕ್ತಿಗಳಿಗೆ ಕಾನೂನು ಸಹಾಯ ಯೋಜನೆ-2015 ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
“ಮಾನಸಿಕ ಅಸ್ವಸ್ಥರನ್ನು ಪ್ರೀತಿಯಿಂದ ಕಾಣಬೇಕು, ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು, ಈ ನಿಟ್ಟಿನಲ್ಲಿ ಕುಟುಂಬ ವರ್ಗದ ಜತೆಗೆ ಸಮಾಜವೂ ನೆರವಾಗಬೇಕು” ಎಂದು ಕಿವಿಮಾತು ಹೇಳಿದರು.
“ಮಾನಸಿಕ ಅಸ್ವಸ್ಥರಿಗೆ ಉಚಿತ ಆರೋಗ್ಯ ಸೇವೆಯ ಸೌಲಭ್ಯವಿದೆ, ಜತೆಗೆ ಅವರಿಗೆ ಅನ್ಯಾಯವಾದರೆ ಅದನ್ನು ಪ್ರಶ್ನಿಸಲು ಅವಕಾಶಗಳು ಇದ್ದು, ಸಂಘ ಸಂಸ್ಥೆಗಳು ಇಂತಹ ಅಸ್ವಸ್ಥರ ನೆರವಿಗೆ ನಿಲ್ಲಬೇಕು, ಅವರಿಗೆ ಉತ್ತಮ ಚಿಕಿತ್ಸೆ ಸಿಗುವಂತೆ ಮಾಡಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್, ದೈಹಿಕ ಅಸ್ವಸ್ಥತೆಗೆ ಔಷಧಿ,ಚಿಕಿತ್ಸೆ ಶೀಘ್ರ ಸಿಗುತ್ತದೆ, ಅವರಿಗೆ ಆಸ್ಪತ್ರೆಗೆ ಹೋಗಬೇಕು ಎಂಬ ಅರಿವು ಇರುತ್ತದೆ ಆದರೆ ಮಾನಸಿಕ ಅಸ್ವಸ್ಥರಿಗೆ ತಮಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಅರಿವು ಇರುವುದಿಲ್ಲ, ಅವರ ನೆರವಿಗೆ ಸಮಾಜ,ಸಮುದಾಯ ಬರಬೇಕು ಎಂದರು.
“ಮಾನಸಿಕ ಅಸ್ವಸ್ಥರು ಪೊಲೀಸ್ ಇಲಾಖೆ ಗಮನಕ್ಕೆ ಬಂದರೆ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸವನ್ನು ಮಾಡುತ್ತಿದ್ದೇವೆ, ಇತ್ತೀಚೆಗೆ ನಗರ ಹೊರವಲಯದ ಬೈಪಾಸ್‍ನಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಗೆ ಪೊಲೀಸರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿ ರಕ್ಷಿಸಿದ್ದನ್ನು ಸ್ಮರಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್, ಮಾನಸಿಕ ವಿಕಲಚೇತನರ ರಕ್ಷಣೆಗೆ ಸರ್ಕಾರ ಕಾನೂನು ಜಾರಿಗೆ ತಂದಿದೆ, ಈ ವ್ಯಕ್ತಿಗಳಿಗೆ ಕಾನೂನು ಸಹಾಯ ಯೋಜನೆ ಇದ್ದು, ಇದನ್ನು ಬಳಸಿಕೊಳ್ಳಬೇಕು, ಅಂತಹ ವ್ಯಕ್ತಿಗಳಿಗೆ ಕಾನೂನು ಸೌಲಭ್ಯ ಒದಗಿಸಲು ಸಂಘ ಸಂಸ್ಥೆಗಳು ನೇತೃತ್ವ ವಹಿಸಬೇಕು ಎಂದರು.
ಮನೋ ವೈದ್ಯರಾದ ಡಾ.ವಿಜೇತಾ ದಾಸ್ ಹಾಗೂ ಡಾ.ಶ್ರೀನಾಥ್ ಮಾನಸಿಕ ಅಸ್ವಸ್ಥತೆ ಸ್ವರೂಪಗಳು, ಅದಕ್ಕೆ ಪರಿಹಾರಗಳು ಹಾಗೂ ಮಾನಸಿಕ ಆರೋಗ್ಯ ಕಾಯಿದೆಯ ಕುರಿತು ವಿವರಿಸಿ ಮಾನಸಿಕ ಅಸ್ವಸ್ಥರನ್ನು ಪ್ರೀತಿಯಿಂದ ಕಾಣುವ ಮೂಲಕ ಅವರಿಗೆ ಕೌನ್ಸಿಲಿಂಗ್ ನಡೆಸಿ ಅವರನ್ನು ಸಮಾಜಮುಖಿಯಾಗಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಮತ್ತಿತರರಿದ್ದರು.