ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಪ್ರಭಾಕರ್​ ಭಟ್ಗೆ ಆಹ್ವಾನ : ಸಿಎಫ್ಐ ಪ್ರತಿಭಟನೆ

JANANUDI.COM NETWORK

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಕಲ್ಕಡ್ಕ ‌ಪ್ರಭಾಕರ ಭಟ್ ನೀಡಿದ ಆಹ್ವಾನವನ್ನು ವಿರೋಧಿಸಿ ಸಿಎಫ್‌ಐ ಕಾರ್ಯಕರ್ತರು ವಿಶ್ವವಿದ್ಯಾಲಯದ ಮುಖ್ಯ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರಭಾಕರ ಭಟ್ ಗೋ ಬ್ಯಾಕ್ ಎಂದು ಘೋಷಣೆ ಕೂಗತೊಡಗಿ  ಮಂಗಳೂರು ವಿವಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ಸಿಎಫ್ಐ ವಿದ್ಯಾರ್ಥಿ ನಾಯಕ ಸೇರಿ ಕೆಲ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡರು.

ಕೋಮು ದ್ವೇಷ ಭಾಷಣವನ್ನು ನಿರಂತರವಾಗಿ ಮಾಡುತ್ತಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಆಹ್ವಾನಿಸಿರುವುದು ಖಂಡನೀಯ. ವಿದ್ಯಾಕೇಂದ್ರವನ್ನು ವಿವಿ ಅಧಿಕಾರಿಗಳು ಸಂಘದ ಕೇಂದ್ರವನ್ನಾಗಿ ಮಾಡಲು ಹೊರಟಿದ್ದಾರೆ. ವಿದ್ಯೆ ನೀಡಬೇಕಾದ ಕೇಂದ್ರದಲ್ಲಿ ಕೋಮು ಸಾಮರಸ್ಯ ಕದಡುವ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು. ಕಲ್ಲಡ್ಕ ಪ್ರಭಾಕರ ಭಟ್ ಅವರು ಜಿಲ್ಲೆಯಾದ್ಯಂತ ಕೋಮು ದ್ವೇಷದ ಭಾಷಣ ಮಾಡಿ ಸಮಾಜದ ಶಾಂತಿಗೆ ಧಕ್ಕೆ ತರುವಂತಹ ಕೆಲಸ ಮಾಡುತ್ತಿದ್ದಾರೆ. ಇಂತಹವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿರುವುದು ದುರದೃಷ್ಟಕರ. ಹಾಗಾಗಿ, ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ್​ ಭಟ್​ ಹೆಸರನ್ನು ಕೈಬಿಡಬೇಕು ಎಂದು ಸಿಎಫ್ಐ ಕಾರ್ಯಕರ್ತರು ಮನವಿ ಮಾಡಿದರು.    ಇನ್ನೊಂದು ಪ್ರವೇಶ ದ್ವಾರದಿಂದ ಬಂದ ಕಲ್ಲಡ್ಕ ಪ್ರಭಾಕರ ಭಟ್ ಅವರು ವಿವಿಯ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್ ಘಟಕವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಮತ್ತು ವಿವಿ ಪ್ರಮುಖರು ಭಾಗವಹಿಸಿದರು.