ಕೋಲಾರ ನಗರಸಭೆ ಉಪಾಧ್ಯಕ್ಷ ವಿರುದ್ದ ಅವಿಶ್ವಾಸ ಮಂಡನೆಗೆ ಸಹಿ : ಜೆಡಿಎಸ್ ಸಿದ್ದಾಂತ ಉಲಂಘಿಸಿದವರ ವಿರುದ್ದ ಶಿಸ್ತು ಕ್ರಮ- ತಾಲೂಕು ಅಧ್ಯಕ್ಷೆ ರಾಜರಾಜೇಶ್ವರಿ ಎಚ್ಚರಿಕೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ,ಮಾ.23: ಕೋಲಾರ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಜೆಡಿಎಸ್‍ನ ನಾಲ್ವರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಬುಧವಾರ ತಾಲೂಕು ಜೆಡಿಎಸ್ ಕಚೇರಿಯಲ್ಲಿ ಅಧ್ಯಕ್ಷೆ ಕೆ.ಆರ್. ರಾಜರಾಜೇಶ್ವರಿ ನೇತೃತ್ವದಲ್ಲಿ ಸಭೆ ನಡೆಯಿತು.
ಜೆಡಿಎಸ್ ಪಕ್ಷದ ಗಮನಕ್ಕೆ ತಾರದೆ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರ ಜೊತೆಗೂಡಿ ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಬಗ್ಗೆ ಕಾರಣ ನೀಡುವಂತೆ ಜೆಡಿಎಸ್ ಪಕ್ಷದಿಂದ ಗೆದ್ದಿರುವ ಎಲ್ಲಾ 8 ಸದಸ್ಯರು ಮಾ.23ರ ಬುಧವಾರ ಬೆಳಿಗ್ಗೆ 11 ಗಂಟೆಗೆ ಸಭೆಗೆ ಹಾಜರಾಗಬೇಕೆಂದು ನೋಟೀಸ್ ನೀಡಲಾಗಿತ್ತು.
ಈ ಸಭೆಗೆ ಜೆಡಿಎಸ್ ಪಕ್ಷದ ಪ್ರವೀಣ್‍ಗೌಡ, ಸೂರಿ, ರಾಕೇಶ್, ಇದಾಯತ್ ಹಾಜರಾಗಿದ್ದರೆ, ಶಮತಾಜ್ ಪರವಾಗಿ ಅವರ ಪತಿ ಮಹ್ಮದ್ ರಫೀ, ನಗ್ಮಾಭಾನು ಪರವಾಗಿ ಏಜಾಜ್ ಆಗಮಿಸಿದ್ದರು. ಆದರೆ ನಗರಸಭೆ ಅಧ್ಯಕ್ಷೆ ಶ್ವೇತ ಶಬರೀಶ್ ಮತ್ತು ಕೆ.ಮಂಜುನಾಥ್ ಸಭೆಗೆ ಗೈರು ಹಾಜರಾಗಿದ್ದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯದ ಪರವಾಗಿ ಕಾಂಗ್ರೆಸ್ ಜೊತೆಗೂಡಿ ಸಹಿ ಮಾಡಿರುವ ಬಗ್ಗೆ ಸಭೆಯಲ್ಲಿದ್ದ ಸದಸ್ಯರುಗಳಿಂದ ತಾಲೂಕು ಅಧ್ಯಕ್ಷ ಕುರ್ಕಿ ರಾಜರಾಜೇಶ್ವರಿ ಮಾಹಿತಿ ಪಡೆದುಕೊಂಡರು.
ಜೆಡಿಎಸ್ ಸದಸ್ಯ ಇದಾಯತ್ ಮಾತನಾಡಿ, ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ಸಂಸದ ಎಸ್.ಮುನಿಸ್ವಾಮಿ ಅವರ ಜೊತೆಯಲ್ಲಿ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ನನಗೆ ಇಷ್ಟವಾಗಲಿಲ್ಲ ಅದಕ್ಕಾಗಿಯೇ ನಾನು ಕಾಂಗ್ರೆಸ್ ಸದಸ್ಯರು ಜೊತೆಗೂಡಿ ಉಪಾಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾಗಿ ಹೇಳಿದರು.
ಇನ್ನುಳಿದಂತೆ ಸದಸ್ಯೆ ಶಮತಾಜ್ ಪರವಾಗಿ ಅವರ ಪತಿ ಮಹಮ್ಮದ್ ರಫೀ ಮಾತನಾಡಿ, ಅಧ್ಯಕ್ಷರು-ಉಪಾಧ್ಯಕ್ಷರ ನಡುವೆ ಹೊಂದಾಣಿಕೆಯಿಲ್ಲ, ಇದರಿಂದ ನಮ್ಮ ವಾರ್ಡ್‍ಗಳಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ ಅದಕ್ಕಾಗಿ ನಮ್ಮ ಪತ್ನಿ ಉಪಾಧ್ಯಕ್ಷರ ವಿರುದ್ದ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ ಎಂದು ಹೇಳಿದರೆ ಮತ್ತೋರ್ವ ಸದಸ್ಯೆ ನಗ್ಮಾಭಾನು ಪರವಾಗಿ ಅವರ ಪತಿ ಏಜಾಜ್ ಮಾತನಾಡಿ, ಜೆಡಿಎಸ್ ಪಕ್ಷದಿಂದ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ನನ್ನ ಪತ್ನಿ ಸಹಕಾರ ಕೊಡುತ್ತಾರೆ ಎಂದು ಹೇಳಿದರು.
ಇನ್ನೂ ಉಪಾಧ್ಯಕ್ಷ ಪ್ರವೀಣ್‍ಗೌಡ, ನಾನು ಯಾವುದೇ ರೀತಿ ಪಕ್ಷಕ್ಕೆ ಕಳಂಕವಾಗುವಂತೆ ನಡೆದುಕೊಂಡಿಲ್ಲ, ಭ್ರಷ್ಟಚಾರ ನಡೆಸಿಲ್ಲ. ಹಗರಣಗಳು ನಡೆಸಿಲ್ಲ. ನಮಗೆ ಬಹುಮತ ಇಲ್ಲದಿದ್ದರೂ ಪಕ್ಷೇತರರು ಹಾಗೂ ವಿಪಕ್ಷದವರ ಬೆಂಬಲದಿಂದ ಅಧಿಕಾರವನ್ನು ಪಡೆದಿದ್ದೇವು. ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ಆಡಳಿತ ನಡೆಸಲಾಗುತ್ತಿತ್ತು.
ವಿನಾಕಾರಣ ಅಧ್ಯಕ್ಷೆ ಶ್ವೇತಶಬರೀಶ್ ವಿಪಕ್ಷದವರೊಂದಿಗೆ ಶಾಮೀಲಾಗಿ ನನ್ನ ವಿರುದ್ದ ವೈಯುಕ್ತವಾಗಿ ಹಗೆ ಸಾಧಿಸುತ್ತಿದ್ದಾರೆ. ಕಳೆದ 7 ತಿಂಗಳಿಂದ ನನ್ನನ್ನು ಅಧಿಕಾರದಿಂದ ಇಳಿಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಬಗ್ಗೆ ತಾವುಗಳು ಆಗಲೇ ಶಿಸ್ತು ಕ್ರಮಕ್ಕೆ ಮುಂದಾಗಿದ್ದರೆ ಇಂದು ಈ ಪರಿಸ್ಥಿತಿ ಉದ್ಬವಿಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಸೂರಿ, ರಾಕೇಶ್ ಮಾತನಾಡಿ, ಕೋಲಾರ ನಗರಸಭೆಯಲ್ಲಿ 8 ಜೆಡಿಎಸ್ ಸದಸ್ಯರಿದ್ದಾರೆ. ಅದರಲ್ಲಿ ನಾಲ್ಕು ಮಂದಿ ಸದಸ್ಯರು ಕಾಂಗ್ರೆಸ್ ಮುಖಂಡರೊಂದಿಗೆ ಸೇರಿಕೊಂಡು ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿದ್ದಾರೆ. ಇದು ಪಕ್ಷ ವಿರೋಧಿ ಚಟುವಟಿಕೆ, ಯಾರು ಸಹಿ ಮಾಡಿದ್ದಾರೆ ಅವರ ವಿರುದ್ದ ಕಟ್ಟುನಿಟ್ಟನ ಕ್ರಮ ತೆಗೆದುಕೊಳ್ಳಬೇಕು, ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಪಕ್ಷ ಏನೇ ಸೂಚನೆ ಕೊಟ್ಟರು ಅದನ್ನ ನಾವು ಪಾಲನೆ ಮಾಡುತ್ತೇವೆ ಎಂದು ಸಭೆಯಲ್ಲಿ ಹೇಳಿದರು.
ಜೆಡಿಎಸ್ ಸದಸ್ಯರುಗಳಿಂದ ಮಾಹಿತಿ ಸಂಗ್ರಹಿಸಿದ ನಂತರ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಆರ್.ರಾಜರಾಜೇಶ್ವರಿ ಮಾತನಾಡಿ, ಜೆಡಿಎಸ್ ಪಕ್ಷದ ಗಮನಕ್ಕೆ ತಾರದೆ ನಾಲ್ವರು ಜೆಡಿಎಸ್ ಸದಸ್ಯರು ಕಾಂಗ್ರೆಸ್ ಸದಸ್ಯರೊಂದಿಗೆ ಸೇರಿಕೊಂಡು ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿರುವುದು ಪಕ್ಷದ ಉಲ್ಲಂಘನೆಯಾಗಿದೆ. ಪಕ್ಷದ ವರಿಷ್ಠರ ಗಮನಕ್ಕೆ ಬಾರದಂತೆ ವಿಪಕ್ಷದವರೊಂದಿಗೆ ಸೇರಿಕೊಂಡು ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಪಕ್ಷಕ್ಕೆ ದ್ರೋಹ ಬಗೆಯುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಕಿಡಿ ಕಾರಿದರು.
ನಗರಸಭೆಯ ವ್ಯಾಪ್ತಿಯಲ್ಲಿ ಪಕ್ಷದ ವತಿಯಿಂದ 8 ಮಂದಿ ಆಯ್ಕೆಯಾಗಿದ್ದಾರೆ. 8 ಮಂದಿಗೂ ಇಂದು ಸಭೆಗೆ ಹಾಜರಾಗಬೇಕೆಂದು ಸೂಚಿಸಿದ್ದರೂ ಸಹ 6 ಮಂದಿ ಮಾತ್ರ ಸಭೆಗೆ ಹಾಜರಾಗಿದ್ದೀರಿ, ನಗರಸಭೆ ಅಧ್ಯಕ್ಷರು ಸೇರಿದಂತೆ ಇಬ್ಬರು ಪಕ್ಷದ ಸಭೆಗೆ ಗೈರು ಹಾಜರಾಗಿರುವುದು ಸಮಂಜಸವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಭೆಯಲ್ಲಿ ಸದಸ್ಯರುಗಳ ಅಭಿಪ್ರಾಯವನ್ನ ಸಂಗ್ರಹಿಸಿದ್ದು, ಮಾ.26ರ ಶನಿವಾರ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್‍ಸಿ ಇಂಚರಗೋವಿಂದರಾಜು, ಕೋರ್ ಕಮಿಟಿ ಸದಸ್ಯ ಸಮೃದ್ದಿ ಮಂಜುನಾಥ್ ಅವರಿಗೆ ಈ ವರದಿಯನ್ನ ಸಲ್ಲಿಸುವುದಾಗಿ ಹೇಳಿದರು. ಇದನ್ನ ಮೀರಿ ಸದಸ್ಯರುಗಳು ನಡೆದುಕೊಂಡರೆ ಅವರ ವಿರುದ್ದ ಶಿಸ್ತು ಕ್ರಮಕ್ಕೆ ಜರುಗಿಸುವಂತೆ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜಿಲ್ಲಾಧ್ಯಕ್ಷರಿಗೆ ಶಿಫಾರಸ್ ಮಾಡುವುದಾಗಿ ಹೇಳಿದರು.
ನಗರಸಭೆ ಉಪಾಧ್ಯಕ್ಷ ಪ್ರವೀಣ್‍ಗೌಡ ವಿರುದ್ದ ಕಾಂಗ್ರೆಸ್ ಸದಸ್ಯರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿದಂತೆ ಏ.7ರಂದು ನಗರಸಭೆಯಲ್ಲಿ ಸಭೆಯನ್ನ ಕರೆಯಲಾಗಿದೆ. ಇಲ್ಲಿ ಜೆಡಿಎಸ್ ಪಕ್ಷದ ಸೂಚನೆಗಳನ್ನ ಎಲ್ಲಾ 8 ಸದಸ್ಯರುಗಳು ಪಾಲನೆ ಮಾಡಲೇಬೇಕು, ಇಲ್ಲವಾದರೆ ಅವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು.
ಅಷ್ಟರೊಳಗೆ 8 ಮಂದಿ ಜೆಡಿಎಸ್ ಸದಸ್ಯರುಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುತ್ತೇನೆ. ಅವಿಶ್ವಾಸ ನಿರ್ಣಯಕ್ಕೆ ಸಹಿ ಮಾಡಿರುವ ಜೆಡಿಎಸ್ ಸದಸ್ಯರು ತಮ್ಮ ತಪ್ಪನ್ನ ತಿದ್ದುಕೊಂಡು ವಾಪಸ್ ಬಂದರೆ ಅವರ ವಿರುದ್ದ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ನಾಲ್ವರು ಸದಸ್ಯರು ಬರದೆ ಹೋದರೆ ಜೆಡಿಎಸ್ ವರಿಷ್ಟರ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ವಿಫ್ ಜಾರಿ ಮಾಡುತ್ತೇವೆ. ಇದನ್ನ ಮೀರಿ ಕಾಂಗ್ರೆಸ್ ಜೊತೆಗೂಡಿದರೆ ಆ ಸದಸ್ಯರನ್ನ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು, ಅಲ್ಲದೆ ವಿಫ್ ಉಲ್ಲಂಘನೆ ಮಾಡಿದರೆ ಅವರ ಸದಸ್ಯತ್ವ ರದ್ದು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜೆಡಿಎಸ್ ಪಕ್ಷದಿಂದ ಪತ್ರ ನೀಡಲಾಗುವುದು ಎಂದು ತಾಲೂಕು ಅಧ್ಯಕ್ಷೆ ಕುರ್ಕಿ ರಾಜರಾಜೇಶ್ವರಿ ಖಡಕ್ ಸಂದೇಶ ಕೊಟ್ಟರು.
ಈ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ವಕೀಲರಾದ ರತ್ನಮ್ಮ, ತಾ.ಪಂ ಮಾಜಿ ಸದಸ್ಯ ಗೋಪಾಲಗೌಡ, ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಿಂಬ ನಾಗರಾಜ್, ಕಾರ್ಯಾಧ್ಯಕ್ಷ ಜನಪನಹಳ್ಳಿ ಆನಂದ್, ನಗರಸಭೆ ಮಾಜಿ ಸದಸ್ಯ ವೆಂಕಟೇಶ್, ಅಣ್ಣಹಳ್ಳಿ ಯಾಮಣ್ಣ, ಉಮರ್, ಅನ್ವರ್ ಮತ್ತಿತರಿದ್ದರು.