ತಾಲ್ಲೂಕಿನ ಕಿರುವಾರದಲ್ಲಿ ನಿರ್ಮಿಸಲಾಗಿರುವ ಸೀತಾ ಕೋದಂಡರಾಮ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕಿನ ಕಿರುವಾರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಸೀತಾ ಕೋದಂಡರಾಮ ದೇವಾಲಯದಲ್ಲಿ ಬುಧವಾರ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು.
ನಾಲ್ಕು ದಿನಗಳಿಂದ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಗಳನ್ನು ನಡೆಸಿದ ಬಳಿಕ ಗಣಪತಿ, ಸುಬ್ರಮಣ್ಯಸ್ವಾಮಿ, ಸೀತಾ, ರಾಮ, ಲಕ್ಷ್ಮಣ ಹಾಗೂ ಹನುಮ ವಿಗ್ರಹಗಳ ಸ್ಥಿರ ಬಿಂಬ ಪ್ರತಿಷ್ಠಾಪನೆ ಮಾಡಲಾಯಿತು.
ಇದಕ್ಕೂ ಮೊದಲು ದೇವಾಲಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ಪ್ರಾಯಶ್ಚಿತ್ತ ಸಂಕಲ್ಪ, ರಕ್ಷಾ ಬಂಧನ, ಮೃತ್ಸಂಗ್ರಹಣ, ಅಂಕುರಾರ್ಪಣೆ, ಕಳಶಾರಾಧನೆ, ಅಗ್ನಿಪ್ರತಿಷ್ಠೆ, ಪಂಚದ್ರವ್ಯ ಸ್ಥಾಪನೆ, ವೇದ ಪಾರಾಯಣ, ವೇದಿಕಾರ್ಚನೆ, ಮಂತ್ರನ್ಯಾಸ, ನಾಡಿಸಂಧಾನ, ಗಣಪತಿ ಕಳಾಹೋಮ, ಗೋದರ್ಶನ, ದೇವತಾರ್ಚನೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪ್ರಧಾನ ಅರ್ಚಕರಾದ ಶ್ರೀನಾಥಾಚಾರ್, ಶ್ರೀನಿವಾಸಾಚಾರ್, ಎಸ್.ರಾಜಗೋಪಾಲಾಚಾರ್, ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.
ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಶ್ರೀನಿವಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ವಾನ್ ವಿನಯ್ ರೆಡ್ಡಿ ಅವರಿಂದ ಹರಿಕಥಾ ಕಾಲಾಕ್ಷೇಪ ಏರ್ಪಡಿಸಲಾಗಿತ್ತು.