ಅಪ್ರತಿಮ ನಟ ಕುಂಭಾಶಿ ರಾಮಚಂದ್ರ (ಬೆನಕ) ಆಚಾರ್ಯ ನಿಧನ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕೋಟೇಶ್ವರದ ಪ್ರಸಿದ್ಧ ಚೇತನಾ ಕಲಾರಂಗದ ಸಕ್ರಿಯ ಸದಸ್ಯ, ಅಪ್ರತಿಮ ನಾಟಕ ಕಲಾವಿದ ರಾಮಚಂದ್ರ (ಬೆನಕ) ಆಚಾರ್ಯ (60) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಕುಂಭಾಶಿಯ ನಾರಾಯಣ ಆಚಾರ್ಯ – ಸತ್ಯಮ್ಮ ದಂಪತಿಯ ಪುತ್ರನಾದ ರಾಮಚಂದ್ರ ಆಚಾರ್ಯ ಸೆಂಟ್ರಿಂಗ್ ಮತ್ತು ಮರಗೆಲಸಗಳನ್ನು ಮಾಡುತ್ತಿದ್ದರು. ಕೋಟೇಶ್ವರದ ಚೇತನಾ ಕಲಾರಂಗದ ಸದಸ್ಯನಾಗಿ, ಸಂಸ್ಥೆಯ ಹಲವು ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದರು. ಪ್ರಸಿದ್ಧ ನಿರ್ದೇಶಕರಾದ ಪ್ರಭಾಕರ ಐತಾಳ, ವಾದಿರಾಜ ತವಳ, ವಾಸುದೇವ ಶೆಟ್ಟಿಗಾರ್, ಗಣೇಶ್ ಐತಾಳರ ನಿರ್ದೇಶನದ ಕುರಿದೊಡ್ಡಿ ಕುರುಕ್ಷೇತ್ರ, ಚೋರ ಚರಣದಾಸ, ಬಾವಿ ಕಳೆದಿದೆ, ಬೆನಕನ ಕೆರೆ ಮೊದಲಾದ ನಾಟಕಗಳಲ್ಲಿ ಮನೋಜ್ಞ ಅಭಿನಯ ನೀಡಿದ್ದರು. ಬೆನಕನ ಕೆರೆ ನಾಟಕದ ಬೆನಕನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅದ್ಭುತ ನಟನೆಯ ನಂತರ, ಆ ಪಾತ್ರದ ‘ಬೆನಕ’ ಎಂಬ ಹೆಸರು ಇವರಿಗೇ ಅಂಟಿಕೊಂಡು ಬೆನಕ ಆಚಾರ್ಯ ಎಂದೇ ಅಭಿಮಾನಿಗಳು ಪ್ರೀತಿಯಿಂದ ಕರೆಯತೊಡಗಿದರು. ಚಿತ್ರ ನಿರ್ದೇಶಕ ಕೋಟೇಶ್ವರ ಶ್ರೀಧರ ಉಡುಪರು ನಿರ್ಮಿಸಿ ನಿರ್ದೇಶಿಸಿದ್ದ ಕುಂಗನ್ನಡದ ಟೆಲಿ ಧಾರಾವಾಹಿ “ಇದೆಂತಾ ಕತಿ ಮಾರ್ರೆ” ಯಲ್ಲಿ ಕುಡುಕನ ಪಾತ್ರ ನಿರ್ವಹಿಸಿದ ಆಚಾರ್ಯರು, ಕುಡಿದುಕೊಂಡು ಮಧ್ಯರಸ್ತೆಯಲ್ಲಿ ನಡೆಯುವುದರಿಂದಲೇ ಅದಕ್ಕೆ ‘ಮದ್ಯಪಾನ’ ಎನ್ನುವುದು ಎಂದು ಪೊಲೀಸರಿಗೇ ಆವಾಜ್ ಹಾಕಿದ್ದನ್ನು ವೀಕ್ಷಕರು ಸದಾ ಸ್ಮರಿಸಿಕೊಂಡು ತಮಾಷೆ ಮಾಡುವುದಿದೆ.
ರಾಮಚಂದ್ರ ಆಚಾರ್ಯರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಆಚಾರ್ಯರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚೇತನಾ ಕಲಾರಂಗದ ಅಧ್ಯಕ್ಷ, ಶ್ರೀನಿವಾಸ ಕುಂದರ್, ಗೌರವಾಧ್ಯಕ್ಷ ಮಾರ್ಕೊಡು ಗೋಪಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಗಣೇಶ್ ಐತಾಳ್, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಜೋಗಿ, ಬಿ. ಎಂ. ಗುರುರಾಜ ರಾವ್ ಹಾಗೂ ಅಪಾರ ಅಭಿಮಾನಿಗಳು ಕುಂಭಾಶಿಯ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು. ಸಂಸ್ಥೆಯ ಇನ್ನೋರ್ವ ಗೌರವಾಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್ ಸಂತಾಪ ವ್ಯಕ್ತಪಡಿಸಿದ್ದಾರೆ.