ಅರಾಭಿಕೊತ್ತನೂರು ಕ್ಲಸ್ಟರ್ ಎಸ್‍ಡಿಎಂಸಿ, ಪೋಷಕರ ಸಭೆ ಶಾಲೆಗೆ ಸಮುದಾಯದ ನೆರವು ಹರಿಯಲಿ-ಪ್ರದೀಪ್‍ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಶಾಲೆಗಳ ಅಭಿವೃದ್ದಿಯಲ್ಲಿ ಎಸ್‍ಡಿಎಂಸಿಗಳ ಪಾತ್ರ ಅತಿ ಮುಖ್ಯವಾಗಿದ್ದು, ಮುಖ್ಯಶಿಕ್ಷಕರು, ಶಿಕ್ಷರೊಂದಿಗೆ ಕೈಜೋಡಿಸುವ ಮುಲಕ ಸಮುದಾಯದ ನೆರವನ್ನು ಶಾಲೆಗಳಿಗೆ ಹರಿಸಬಹುದು ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್ ಅಭಿಪ್ರಾಯಪಟ್ಟರು.
ಅರಾಭಿಕೊತ್ತನೂರು ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ 2021-22ನೇ ಸಾಲಿನ ಎಸ್‍ಡಿಎಂಸಿ ಸದಸ್ಯರು,ಪೋಷಕರ ಕ್ಲಸ್ಟರ್ ಮಟ್ಟದ 4ನೇ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸರ್ಕಾರದ ನೆರವಿನ ಜತೆಗೆ ಸಮುದಾಯದ ಸಹಾಕಾರ ಪಡೆದು ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಾದ ಹೈಟೆಕ್ ಸೌಲಭ್ಯ ಒದಗಿಸುವ ಹಾದಿಯಲ್ಲಿ ಪೋಷಕರು ಕೈಜೋಡಿಸಿ, ಸ್ಥಳೀಯ ಕೈಗಾರಿಕೆಗಳ ನೆರವನ್ನೂ ಪಡೆಯೋಣ ಎಂದು ಕಿವಿಮಾತು ಹೇಳಿದರು.
ಡಯಟ್ ಉಪನ್ಯಾಸಕ ಸೈಯದ್ ಸಮಿವುಲ್ಲಾ ಮಾತನಾಡಿ, ಎಸ್‍ಡಿಎಂಸಿಗೆ ಸರ್ಕಾರ ಕೆಲವು ಅಧಿಕಾರಗಳನ್ನು ನೀಡಿದೆ, ಶಾಲೆಗಳಲ್ಲಿ ಮಕ್ಕಳಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸಹಕಾರ ಪಡೆಯಿರಿ, ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಂಡು ಶಾಲೆಯನ್ನು ಸಮಗ್ರವಾಗಿ ಅಭಿವೃದ್ದಿಪಡಿಸುವ ಚಿಂತನೆ ಮಾಡಲು ಸಲಹೆ ನೀಡಿದರು.
ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಯಾಗಿದ್ದು, ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣ ಮುಂದಿನ ದಿನಗಳಲ್ಲಿ ಸಿಗಲಿದೆ, ಶಿಕ್ಷಣದ ಗುಣಮಟ್ಟದ ಜತೆ ಮಕ್ಕಳಿಗೆ ಬದುಕು ರೂಪಿಸಿಕೊಳ್ಳುವ ಅವಕಾಶವೂ ಸಿಗಲಿದೆ ಎಂದು ತಿಳಿಸಿ, ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಹಕಾರ ಕೋರಿದರು.
ಪ್ರೌಢಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಎಸ್‍ಡಿಎಂಸಿ ಅಧ್ಯಕ್ಷರಾಗುವುದು ಅಧಿಕಾರವಲ್ಲ, ಶಾಲೆಗೆ ಅಗತ್ಯ ಸೌಲಭ್ಯ ಒದಗಿಸುವ ಜವಾಬ್ದಾರಿಯೂ ಆಗಿದ್ದು, ಪೋಷಕರು ಶಾಲೆಗಳಿಗೆ ಭೇಟಿ ನೀಡಬೇಕು, ಮಕ್ಕಳ ಪ್ರಗತಿ ಗಮನಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ತ್ಯಾವನಹಳ್ಳಿ ಪ್ರೌಢಶಾಲೆ ಮುಖ್ಯಶಿಕ್ಷಕ ರಾಮಯ್ಯಶೆಟ್ಟಿ, ಸಿಆರ್‍ಪಿ ಸೌಮ್ಯಲತಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸೋಮಶೇಖರ್,ಮುಖ್ಯಶಿಕ್ಷಕಿ ಭಾರತಿ, ಎಸ್‍ಡಿಎಂಸಿ ಸದಸ್ಯರಾದ ರಾಘವೇಂದ್ರ, ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಮುಖ್ಯಶಿಕ್ಷಕರು,ಪೋಷಕರು, ಎಸ್‍ಡಿಎಂಸಿ ಸದಸ್ಯರು ಹಾಜರಿದ್ದರು.