ನಬಾರ್ಡ್‍ನ ಮೂಲ ಸೌಕರ್ಯನಿಧಿ ಯೋಜನೆಯಡಿ ಶೇ.6ರ ಬಡ್ಡಿ ದರದಲ್ಲಿ ರೈತರು, ರೈತ ಗುಂಪುಗಳಿಗೆ 2 ಕೋಟಿ ಸಾಲ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ನಬಾರ್ಡ್‍ನ ಕೃಷಿ ಮೂಲ ಸೌಕರ್ಯ ನಿಧಿ' ಯೋಜನೆಯಡಿ ರೈತರು, ಕೃಷಿ ಉದ್ಯಮಿಗಳು,ಸಹಕಾರ ಸಂಘಗಳು ಆಧುನಿಕ ಕೃಷಿಗೆ ಅಗತ್ಯವಾದ ಟ್ರಾಕ್ಟರ್,ಟಿಲ್ಲರ್,ಬೆಳೆ ಕೋಯ್ಲೋತ್ತರ ಸಲಕರಣೆ, ಶೀತಲ ಘಟಕ ಸೇರಿದಂತೆ ವಿವಿಧ ಕಾರ್ಯಗಳಿಗೆ 20 ಲಕ್ಷದಿಂದ 2 ಕೋಟಿವರೆಗೂ ಸಾಲ ಸೌಲಭ್ಯ ಶೇ.6ರ ಬಡ್ಡಿಯಲ್ಲಿ ಪಡೆಯಬಹುದಾಗಿದೆ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು. ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ನಬಾರ್ಡ್,ಅಫೆಕ್ಸ್ ಬ್ಯಾಂಕ್ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಡಿಸಿಸಿ ಬ್ಯಾಂಕ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸ್ವಾವಲಂಬಿ ಜೀವನದೊಂದಿಗೆ ಉದ್ಯಮಿಗಳಾಗಲು ಇದು ಸಹಕಾರಿ ಎಂದರು. ಈ ಸಾಲಕ್ಕೆ ಶೇ.9 ಬಡ್ಡಿ ಇದ್ದು, ಶೇ.3 ರಷ್ಟು ಬಡ್ಡಿಯನ್ನು ಕೇಂದ್ರ ಸರ್ಕಾರ ಭರಿಸಲಿದೆ, ಸಾಲ ಮರುಪಾವತಿ ಅವಧಿ ಗರಿಷ್ಟ 7 ವರ್ಷಗಳಾಗಿದ್ದು, 2 ಕೋಟಿವರೆಗೂ ಭದ್ರತೆಯ ಖಾತ್ರಿಯೊಂದಿಗೆ ಸಾಲ ಒದಗಿಸಲಾಗುವುದು ಎಂದರು. ಈ ಯೋಜನೆಯಡಿ ಸಾವಯವ ಕೃಷಿ ಹಾಗೂ ಕೃಷಿಗೆ ಅಗತ್ಯವಾದ ಆಧುನಿಕ ಸಲಕರಣೆಗಳು, ಕೋಯ್ಲಿನೋತ್ತರ ಸಲಕರಣೆಗಳನ್ನು ಖರೀದಿಸಲು ಅಗತ್ಯವಾದ ಸಾಲ ಸೌಲಭ್ಯ ಪಡೆಯಬಹುದಾಗಿದ್ದು, ಜಿಲ್ಲೆಯ ರೈತರು ಇದರ ಪ್ರಯೋಜನ ಪಡೆಯಲು ಮುಂದೆ ಬರಬೇಕು ಎಂದರು. ಸಹಕಾರ ಸಂಘಗಳು ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ಸ್ಥಾಪಿಸಬಹುದಾಗಿದೆ, ಇದಕ್ಕೂ ಅಗತ್ಯ ಸಾಲ ಸೌಲಭ್ಯ ಸಿಗಲಿದೆ, ರೈತರಿಗೆ ಅಗತ್ಯವಾದ ಆಧುನಿಕ ಸಲಕರಣೆ,ಯಂತ್ರಗಳನ್ನು ಬಾಡಿಗೆಗೆ ನೀಡಲು ಅನುವಾಗುವಂತೆ ಈ ಯೋಜನೆಯಲ್ಲಿ ಸಾಲ ಪಡೆಯಲು ಅವಕಾಶವಿದೆ ಎಂದರು. ಆಹಾರ ಧಾನ್ಯಗಳನ್ನು ಒಣಗಿಸುವ ಯಂತ್ರಗಳು, ಹಣ್ಣುಗಳನ್ನು ಮಾಗಿಸುವ ಕೋಣೆ ನಿರ್ಮಾಣಕ್ಕೂ ಸಾಲ ಸಿಗಲಿದ್ದು, ಇದರಿಂದಾಗಿ ಹಣ್ಣುಗಳನ್ನು ಕಾನೂನು ಬಾಹಿರವಾಗಿ ರಸಾಯನಿಕಗಳನ್ನು ಬಳಸಿ ಹಣ್ಣಾಗಿಸುವ ಕಾರ್ಯಗಳಿಗೆ ಕೊನೆಯಾಗಿಸಲು ಸಹಕಾರಿಯಾಗಲಿದೆ ಎಂದರು. ಸಮಗ್ರ ತೋಟಗಾರಿಕೆ ಯೋಜನೆಯ ಎಲ್ಲಾ ಉಪಯೋಜನೆಗಳು ಅಂದರೆ ಶೀತಲ ಗೃಹ, ಪ್ಯಾಕಿಂಗ್‍ಗೃಹಗಳು,ಹಣ್ಣು ಮಾಗಿಸುವ ಚೇಂಬರ್‍ಗಳು, ರೀಫರ್ ವ್ಯಾನ್‍ಗಳ ಖರೀದಿಗೆ ಶೇ.35 ರಿಂದ 50 ರಷ್ಟು ಸಹಾಯಧನ ಸಿಗಲಿದೆ ಎಂದು ತಿಳಿಸಿದರು. ಆಧುನಿಕ ಕೃಷಿಗೆ ನಬಾರ್ಡ್‍ನೆರವು ನಬಾರ್ಡ್ ಎಜಿಎಂ ಎಂ.ಆರ್.ನಟರಾಜನ್ ಮಾತನಾಡಿ,ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕಗಳ ಅನುಸರಣಾ ಯೋಜನೆಗೂ ಸಹಾಯಧನ ಸಿಗಲಿದೆ, ಸಾಲವನ್ನು ಒಂದೇ ಕಾರಣಕ್ಕೆ ವಿತರಿಸದೇ ವಿವಿಧ ಯೋಜನೆಗಳಿಗೆ ಒದಗಿಸುವಂತಾಗಬೇಕು ಎಂದರು. ನಬಾರ್ಡ್ ಆಧುನಿಕ, ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಕೃಷಿ ಯಂತ್ರೋಪಕರಣಗಳ ಬಳಕೆಗೆ ಒತ್ತು ನೀಡಿದ್ದು, ಇದರ ಪ್ರಯೋಜನ ಪಡೆಯಲು ಕೋರಿದರು. ನಬಾರ್ಡ್‍ನ ಕೃಷಿ ಮೂಲಭೂತ ಸೌಕರ್ಯ ನಿಧಿ’ ಯೋಜನೆಯಡಿ ಸಾಲವನ್ನು ಪಡೆಯಲು ಅನ್‍ಲೈನ್‍ನಲ್ಲಿ ಎಐಎಫ್ ಯೋಜನೆಯ ಪೋರ್ಟೆಲ್‍ನಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ಯೋಜನೆ ಪ್ರಸ್ತಾವನೆಯ ಸಾಫ್ಟ್ ಕಾಫಿಯನ್ನು ಅಪ್ ಲೋಡ್ ಮಾಡಬೇಕು, ಇದನ್ನು ಕೇಂದ್ರ ಸರ್ಕಾರ ಪರಿಶೀಲಿಸಿದ ನಂತರ ಸಂಬಂಧಿಸಿದ ಬ್ಯಾಂಕಿಗೆ ವರ್ಗಾಯಿಸುತ್ತದೆ ಎಂದರು.
ಬ್ಯಾಂಕಿನಿಂದ ಮೌಲ್ಯಮಾಪನ ಕೈಗೊಂಡು ಅರ್ಹ ಅರ್ಜಿದಾರರಿಗೆ ಸಾಲದ ಮಂಜೂರಾತಿ ಆಗಲಿದೆ, ಕೇಂದ್ರ ಸರ್ಕಾರ ಸಂಬಂಧಿಸಿದ ಬ್ಯಾಂಕಿಗೆ ಬಡ್ಡಿ ಸಹಾಯಧನ ಹಾಗೂ ಸಾಲಕ್ಕೆ ಖಾತ್ರಿ ಒದಗಿಸುತ್ತದೆ ಎಂದು ತಿಳಿಸಿದರು.
ಸಾವಿರ ಕೋಟಿ
ಠೇವಣಿ ಸಂಗ್ರಹಿಸಿ
ಡಿಸಿಸಿ ಬ್ಯಾಂಕ್ ಮುಂದಿನ 3 ವರ್ಷಗಳಲ್ಲಿ ಸಾವಿರ ಕೋಟಿ ಠೇವಣಿ ಸಂಗ್ರಹಿಸುವ ಗುರಿಯೊಂದಿಗೆ ಕೆಲಸ ಮಾಡಿ, ಬೆಳೆ ಸಾಲ, ಮಹಿಳೆಯರಿಗೆ ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಲಿ ಎಂದು ಕಿವಿಮಾತು ಹೇಳಿದರು.
ಠೇವಣಿ ಸಂಗ್ರಹ ಹೆಚ್ಚಳವಾದರೆ ಮಾತ್ರ ಬ್ಯಾಂಕ್ ಮತ್ತಷ್ಟು ಸಾಲ ಯೋಜನೆ ಜಾರಿ ಮಾಡಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಎಂಡಿ ಎಂ.ಆರ್.ಶಿವಕುಮಾರ್, ಅಪೆಕ್ಸ್ ಬ್ಯಾಂಕ್ ಎಜಿಎಂ ವರದರಾಜ್,ಡಿಸಿಸಿ ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಹುಸೇನ್‍ಸಾಬ್ ದೊಡ್ಡಮನಿ, ವ್ಯವಸ್ಥಾಪಕರಾದ ಭಾನುಪ್ರಕಾಶ್,ಕೆ.ಎನ್.ಮಮತಾ, ಅಂಬರೀಷ್ ಮತ್ತಿತರರಿದ್ದರು.