ಮೇಕೆದಾಟು ಪಾದಯಾತ್ರೆ,ಬಹಿರಂಗ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ
ಯೋಜನೆ ವಿಳಂಬದ ವಿರುದ್ದ ಸಂಘಟಿತರಾಗಿ ಧ್ವನಿಯೆತ್ತೋಣ-ಸುದರ್ಶನ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಮೇಕೆದಾಟು ಯೋಜನೆ ಜಾರಿಗೆ ಕಾಂಗ್ರೆಸ್ ನಡೆಸುತ್ತಿರುವ ಫೆ.27ರ ಪಾದಯಾತ್ರೆ ಹಾಗೂ ಮಾ.3ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದನದಲ್ಲಿ ನಡೆಯುವ ಬಹಿರಂಗ ಸಭೆಯಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯೋಜನೆ ವಿಳಂಬದ ವಿರುದ್ದ ಧ್ವನಿಯೆತ್ತೋಣ ಎಂದು ಮಾಜಿ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿ.ಆರ್.ಸುದರ್ಶನ್ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯಿಂದ ಬೆಂಗಳೂರು ಮಾತ್ರವಲ್ಲ, ಕೋಲಾರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಯಲಿದೆ, 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೂ ಅವಕಾಶ ಸಿಗಲಿದ್ದು, ಪಕ್ಷಬೇಧ ಮರೆತು ಎಲ್ಲಾ ಸಂಘಟನೆಗಳು ಸಾರ್ವಜನಿಕರು ಪಾಲ್ಗೊಳ್ಳಲು ಕೋರಿದರು.
ರಾಷ್ಟ್ರೀಯ ನೀರಾವರಿ ಪಾಲಸಿಯಡಿ ಮೇಕೆದಾಟು ಯೋಜನೆಗೆ ಅನುಮತಿ ನೀಡಬೇಕು, ಎರಡೂ ಕಡೆ ಬಿಜೆಪಿ ಸರ್ಕಾರ ಸಿಎಂ ಹೇಳುವಂತೆ ಡಬಲ್ ಇಂಜಿನ್ ಸರ್ಕಾರ ಏಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿ, ಆ ಪಕ್ಷದ ಸಂಸದರು ಧ್ವನಿಯೆತ್ತುತ್ತಿಲ್ಲ ಆದ್ದರಿಂದ ಎಚ್ಚರಿಸಲು ಈ ಪಾದಯಾತ್ರೆ ಎಂದರು.
ಜಿಪಂ,ತಾಪಂ ಬಿಬಿಎಂಪಿಗಳಲ್ಲಿ ಶೇ.27 ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವ ಕುರಿತು ಮಹಾರಾಷ್ಟ್ರ ಹಾಕಿದ್ದ ಮೇಲ್ಮನವಿಗೆ ಸುಪ್ರೀಂಕೋರ್ಟ್ ಯಾವ ಮಾನದಂಡದ ಮೇಲೆ ಮೀಸಲಾತಿ ನೀಡಬೇಕು ಎಂದು ಪ್ರಶ್ನಿಸಿದೆ ಎಂದರು.
ಇದಕ್ಕೆ ಜಾತಿ ಗಣತಿ ಆಧಾರವಾಗಿದೆ ಎಂಬುದನ್ನು ಸರ್ಕಾರ ತಿಳಿಸಬೇಕು, 1931ರಲ್ಲಿ ಬ್ರಿಟೀಷ್ ಸರ್ಕಾರ ಮಾಡಿದ್ದ ಜಾತಿ ಗಣತಿ ಬಿಟ್ಟರೆ ನಂತರ ನಡೆದಿಲ್ಲ ಎಂದರು.
2013 ರಲ್ಲಿ ಸಿದ್ದರಾಮಯ್ಯ ಸಿಎಂ ಆದ ನಂತರ ಸಮಗ್ರ ಜಾತಿ ಗಣತಿಗೆ 22 ಕೋಟಿ ನೀಡಿದ್ದರು. ವರದಿಯೂ ಸಿದ್ದವಾಗಿದೆ, ಇದು ಸಾಮಾಜಿಕ ನ್ಯಾಯಕ್ಕೆ ಆಧಾರವಾಗಿದೆ, ಇದರ ಕುರಿತು ಮಾತನಾಡದೇ ಸಚಿವ ಈಶ್ವರಪ್ಪ ಸಂಬಂಧವಿಲ್ಲದ ವಿಷಯ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಧಿವೇಶನದಲ್ಲಿನ ಗಲಾಟೆ ಸಂಬಂಧ ಮಾತನಾಡಿದ ಅವರು, ಆಡಳಿತ ಪಕ್ಷ,ವಿರೋಧ ಪಕ್ಷಗಳಿಗೆ ಸಮಾನ ಹೊಣೆ ಇದೆ, ವಿವಾದ ತೆಗೆದು ಸದನ ನಡೆಯದಂತೆ ಬಿಜೆಪಿಯೇ ಮಾಡಿದೆ, ಈ ರೀತಿ ಆಗಬಾರದು, ಬಜೆಟ್ ಅಧಿವೇಶನಕ್ಕೆ ಸರ್ಕಾರ ವಿರೋಧ ಪಕ್ಷಗಳ ಸಹಮತ ಪಡೆದು ಜನರ ಸಮಸ್ಯೆ ಚರ್ಚೆಗೆ ವೇದಿಕೆಯಾಗಲಿ ಎಂದು ಕೋರಿದರು.


ಡಿಸಿಸಿ ಬ್ಯಾಂಕ್‍ನದ್ದುರೈತರ ಬದುಕಿನ ಪ್ರಶ್ನೆ


ಡಿಸಿಸಿ ಬ್ಯಾಂಕ್,ಹಾಲು ಒಕ್ಕೂಟಗಳ ಕುರಿತು ಸರ್ಕಾರ ಇಡೀ ರಾಜ್ಯಕ್ಕೆ ಏಕರೀತಿಯ ನಿಯಮವನ್ನು ಬಜೆಟ್ ಅಧಿವೇಶನದಲ್ಲಿ ರೂಪಿಸಲಿ, 19 ಜಿಲ್ಲೆಗಳಿದ್ದದ್ದು ಈಗ 31 ಜಿಲ್ಲೆ ಆಗಿದೆ, ಎರಡು ಜಿಲ್ಲೆ ಸೇರಿ ಒಂದು ಡಿಸಿಸಿ ಬ್ಯಾಂಕ್ ಅಥವಾ ಹಾಲು ಒಕ್ಕೂಟವೇ ಅಥವಾ ಪ್ರತಿ ಜಿಲ್ಲೆಗೂ ನೀಡಬೇಕೆ ಎಂಬುದರ ಕುರಿತು ಇಡೀ ರಾಜ್ಯಕ್ಕೆ ಏಕರೀತಿಯ ನಿಯಮ ತಂದು ಗೊಂದಲಕ್ಕೆ ತೆರೆ ಎಳೆಯಬೇಕು ಎಂದರು.
ಬ್ಯಾಂಕ್‍ಗೆ ಕುತ್ತು ಬರಬಾರದು, ಇದು ಬಡವರು, ಮಹಿಳೆಯರ ಬದುಕಿನ ಪ್ರಶ್ನೆ ಎಂಬುದನ್ನು ಸರ್ಕಾರ ಅರಿತು ಮುನ್ನಡೆಯಬೇಕು ಎಂದರು.
ಬಜೆಟ್‍ನಲ್ಲಿ ರಿಂಗ್ ರೋಡ್, ನಗರಸಭೆಗೆ ಸುಂದರ ಕಟ್ಟಡ ನಿರ್ಮಾಣಕ್ಕೆ ಅನುದಾನ, ಎತ್ತಿನಹೊಳೆ,ಕೆಸಿ ವ್ಯಾಲಿ ಯೋಜನೆಗಳಿಗೆ ಅನುದಾನ ಸೇರಿದಂತೆ ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಕಾಂಗ್ರೆಸ್ ಸದಸ್ಯತ್ವ ಪಡೆಯಲು ಡಿಜಿಟಲ್ ನೋಂದಣಿಗೆ ಅವಕಾಶ ನೀಡಿದೆ, ಮಾ.31 ರೊಳಗೆ ಸದಸ್ಯತ್ವ ಪಡೆಯಬಹುದು, ಪ್ರತಿ ಮತಗಟ್ಟೆಗೂ ಇಬ್ಬರು ಎನ್ರೋಲರ್‍ಗಳನ್ನು ನೇಮಿಸಲಾಗಿದೆ, ಇದರ ಕುರಿತು ಗಮನ ಹರಿಸಲು ಪರಿಷತ್ ಉಪನಾಯಕ ಗೋವಿಂದರಾಜು, ಶಾಸಕರಾದ ರೂಪಶಶಿಧರ್, ಅನಿಲ್‍ಕುಮಾರ್, ಷಫಿಉಲ್ಲಾರನ್ನು ಕೆಪಿಸಿಸಿ ನೇಮಿಸಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಮೈಸೂರು ಮಿನರಲ್ಸ್ ನಿರ್ದೇಶಕ ಆರ್.ಕಿಶೋರ್‍ಕುಮಾರ್, ಕಾಂಗ್ರೆಸ್ ಮುಖಂಡರಾದ ವೆಂಕಟಪತೆಪ್ಪ, ಪ್ರಸಾದ್‍ಬಾಬು, ಜೆ.ಕೆ.ಜಯರಾಂ,ಲಾಲ್‍ಬಹುದ್ದೂರು ಶಾಸ್ತ್ರಿ, ಮುರಳಿಗೌಡ, ಖಾದ್ರಿಪುರ ಬಾಬು, ತನ್ವಿರ್ ಅಹಮದ್, ಅಲ್ತಾಪ್, ನಿವೃತ್ತ ಬ್ಯಾಂಕ್ ಅಧಿಕಾರಿ ರಾಧಾಕೃಷ್ಣ, ಎಸ್.ಆರ್.ನಾರಾಯಣಸ್ವಾಮಿ, ತಿರುಮಲೇಶ್, ನಾರಾಯಣಸ್ವಾಮಿ,ಜಗನ್, ರಾಜೇಶ್,ವಿಜಯ್ ಮತ್ತಿತರರಿದ್ದರು.