ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ವಜಾ ಮಾಡಿ – ಸಿದ್ದರಾಮಯ್ಯ

JANANUDI.COM NETWORK

ಬೆಂಗಳೂರು: ಕೆಂಪುಕೋಟೆ ಮೇಲಿರುವ ರಾಷ್ಟ್ರಧ್ವಜ ಇಳಿಸಿ ಕೇಸರಿ‌ ಧ್ವಜ ಹಾರಿಸುತ್ತೇವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಗೆ ಇಂದು “ಇದು ರಾಷ್ಟ್ರಧ್ವಜಕ್ಕೆ ಅಗೌರವ ಸೂಚಿಸಿದಂತೆ, ಇವರ ಮೇಲೆ ರಾಷ್ಟ್ರ ದ್ರೋಹಿ ಪ್ರಕರಣ ದಾಖಲಿಸಬೇಕು, ಮತ್ತು ಅವರನ್ನು ಸಚಿವ ಸ್ಥಾನದಿಂದ ಈಶ್ವರಪ್ಪ ಕೈ ಬಿಡಬೇಕು ” ಎಂದು ಆಗ್ರಹಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಈಶ್ವರಪ್ಪರನ್ನು ವಜಾ ಮಾಡಲು ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ಸಿದ್ಧವಾಗಿದೆ.
ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕಾಂಗ್ರೆಸ್​ ನಾಯಕರ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಏರಿಸುತ್ತೇವೆ ಎಂದು ಹೇಳಿರುವುದು ದೇಶದ್ರೋಹದ ಕೆಲಸ. ಹಾಗಾಗಿ, ಅವರು ಸರ್ಕಾರದಲ್ಲಿ ಇರಲು ಯೋಗ್ಯರಲ್ಲ. ಅವರನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಈ ಬಗ್ಗೆ ನಿಲುವಳಿ ಸೂಚನೆ ನೀಡುತ್ತೇವೆ’ ಎಂದರು.
ಹಿಜಾಬ್ ಮತ್ತು ಕೇಸರಿ ಶಾಲು ವಿಚಾರ ಮಾತನಾಡಿ, ಅಲ್ಪಸಂಖ್ಯಾತರ ಪರ ಮೊದಲಿಂದಲೂ ಪಕ್ಷ ಇದೆ. ಅಲ್ಪಸಂಖ್ಯಾತರಿಗೆ, ಸಂವಿಧಾನಕ್ಕೆ ಗೌರವ ನೀಡುತ್ತಾ ಬಂದಿದ್ದೇವೆ. ಜಾತ್ಯಾತೀತದ ವಾದದ ಬಗ್ಗೆ ಸಂವಿಧಾನದ ಆಶಯಗಳನ್ನು ಪಾಲಿಸುವುದು ಪಕ್ಷದ ಕರ್ತವ್ಯ. ಪಕ್ಷದ ನಿಲುವು ಕ್ಲಿಯರ್ ಇರಲಿಲ್ಲ, ಪಕ್ಷದ ಹಿರಿಯರ ಜೊತೆ ಚರ್ಚೆ ಮಾಡಿ ಒಂದು ನಿಲುವುವಿಗೆ ಬಂದಿದ್ದೇವೆ. ‘ ಎಂದರು.
ಮೊದಲಿಂದಲೂ ಎಲ್ಲಾ ಧರ್ಮಗಳಲ್ಲಿ ಅವರದ್ದೇ ಆದ ಪಾಲನೆ ಇದೆ. ಯಾವ ರೀತಿ ವಸ್ತ್ರ ಧರಿಸಬೇಕು, ಏನು ಮಾಡಬೇಕು ಎಂದು ಸಂವಿಧಾನದಲ್ಲಿದೆ. ಸಂವಿಧಾನ ನಮಗೆ ಹಕ್ಕು ಕೊಟ್ಟಿದೆ. ಫೆ. 5ರ ಮೊದಲು ಎಲ್ಲ ಸರಿಯಿತ್ತು. ರಾಜ್ಯದಲ್ಲಿ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೊಂದ ಸಮಾಜಕ್ಕೆ ಧ್ವನಿಯಾಗುವ ಜವಾಬ್ದಾರಿ ಕಾಂಗ್ರೆಸ್ ಪಕ್ಷ ತೆಗೆದುಕೊಳ್ಳುತ್ತದೆ. ಇದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವು ಎಂದು ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತನಾಡಿ, ದೇಶದಲ್ಲಿ ರಾಷ್ಟ್ರಧ್ವಜಕ್ಕೆ ಆಗುತ್ತಿರುವ ಅಪಮಾನ, ರಾಷ್ಟ್ರಧ್ವಜದ ಬಗ್ಗೆ ಬಿಜೆಪಿ ನಾಯಕರು, ಸಚಿವರು ಆಡಿರುವ ಮಾತಿನ ಬಗ್ಗೆ ಜನರು ಬಹಳ ಆಕ್ರೋಶ ವ್ಯಕ್ತಪಡಿಸಿದ್ದಾರೆ; ಎಂದು ಹೇಳಿದರು.