ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ಖರೀದಿಸಲಾಗಿದ್ದ ಆಂಬುಲೆನ್ಸ್ ಹಸ್ತಾಂತರ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ; ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರ ನಿಧಿಯಿಂದ ರೂ.25 ಲಕ್ಷ ವೆಚ್ಚದಲ್ಲಿ ಖರೀದಿಸಲಾಗಿದ್ದ ಆಂಬುಲೆನ್ಸನ್ನು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಆಸ್ಪತ್ರೆಗೆ ನೀಡಿದರು.
ಅವರು ಮಾತನಾಡಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ. ಅದರಲ್ಲೂ ಪ್ರಧಾನಿ ಮೋದಿ ಅವರು ಕೈಗೊಂಡ ತ್ವರಿತ ಕ್ರಮಗಳಿಂದಾಗಿ ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಕಡಿಮೆಯಾಯಿತು. ಬೇಗ ನಿಯಂತ್ರಣಕ್ಕೆ ಬಂದಿತು ಎಂದು ಹೇಳಿದರು.
ವಿಧಾನ ಪರಿಷತ್ತಿನ ಇನ್ನೊಬ್ಬ ಸದಸ್ಯ ಚಿದಂಬರ ಎಂ.ಗೌಡ ಮಾತನಾಡಿ, ಆರೋಗ್ಯದ ವಿಷಯದಲ್ಲಿ ದೇಶ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಪರಿಸ್ಥಿತಿ ಸುಧಾರಣೆಗೆ ಪೂರಕವಾಗಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಕ್ರಮವಾಗಿ ಕೈ ತೊಳೆಯಬೇಕು. ಸ್ಯಾನಿಟೈಸರ್ ಬಳಸಬೇಕು. ಅಂತರ ಪಾಲನೆ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಜನಸಂದಣಿಯಲ್ಲಿ ಬೆರೆಯಬಾರದು ಎಂದು ಹೇಳಿದರು.
‘ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಕೊರೊನಾ ಸಂಕಷ್ಟದಿಂದ ಪಾರಾಗಲು ಪೂರಕವಾಗಿ ಆಂಬುಲೆನ್ಸ್ ಖರೀದಿಸಿ ಕೊಡುತ್ತಿದ್ದಾರೆ. ಪ್ರದೇಶಾಭಿವೃದ್ಧಿ ನಿಧಿಯಿಂದ ಕೋವಿಡ್ ತಡೆಗೆ ಪೂರಕವಾದ ಚಟುವಟಿಕೆ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಅದರಂತೆ ಕೋಲಾರ ತಾಲ್ಲೂಕಿಗೆ ಒಂದು ಆಂಬ್ಯುಲೆನ್ಸ್ ಖರೀದಿಸಿ ಕೊಟ್ಟಿದ್ದೇನೆ’ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಎನ್.ವೇಣುಗೋಪಾಲ್, ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ರೆಡ್ಡಿ, ಮುಖಂಡರಾದ ಜಯರಾಮರೆಡ್ಡಿ, ರಾಮಾಂಜಿ, ರಮೇಶ್, ವಿನೋದ್ ಕುಮಾರ್, ತಾಲ್ಲೂಕು9 ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು, ತಾಲ್ಲೂಕು ವೈದ್ಯಾಧಿಕಾರಿ ಡಾ. ಎಂ.ಸಿ.ವಿಜಯ, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಜಿ.ಎಸ್.ಶ್ರೀನಿವಾಸ್, ವೈದ್ಯಾಧಿಕಾರಿಗಳಾದ ಡಾ. ಉಮಾಶಂಕರ್, ಡಾ. ನಾರಾಯಣಸ್ವಾಮಿ ಇದ್ದರು.