ಶ್ರೀನಿವಾಸಪುರ : ಮಂಡಿ ಮಾಲೀಕರಿಂದ ಅವರೆ ಕಾಯಿ ಖರೀದಿಯಲ್ಲಿ ಅಕ್ರಮ ತಡೆಯುವಂತೆ ತಾಲ್ಲೂಕು ಆಡಳಿತಕ್ಕೆ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪಟ್ಟಣದಲ್ಲಿ ಮಂಡಿ ಮಾಲೀಕರಿಂದ ಅವರೆ ಕಾಯಿ ಖರೀದಿಯಲ್ಲಿ ನಡೆಯುತ್ತಿರುವ ಅಕ್ರಮ ತಡೆಯುವಂತೆ ತಾಲ್ಲೂಕು ಆಡಳಿತವನ್ನು ಒತ್ತಾಯಿಸಿ ಬುಧವಾರ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪ ತಹಶೀಲ್ದಾರ್ ಮನೋಹ ಮಾನೆ ಅವರಿಗೆ ಮನವಿ ಪತ್ರ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀನಾಥ್ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನ ನಿರತ ಸದಸ್ಯರನ್ನು ಉದ್ದೇಶಿಸಿ ಮಾತನಾಡಿ, ಇಲ್ಲಿನ ಕೆಲವು ಪ್ರಭಾವಿ ವ್ಯಾಪಾರಿಗಳು ಎಪಿಎಂಸಿ ಮಾರುಕಟ್ಟೆ ನಿಯಮ ಗಾಳಿಗೆ ತೂರಿ ಪಟ್ಟಣದ ಎಂಜಿ ರಸ್ತೆಯಲ್ಲಿ ಮಂಡಿಗಳನ್ನು ತೆರೆದು ಅವರೆ ಕಾಯಿ ವಹಿವಾಟು ನಡೆಸುತ್ತಿದ್ದಾರೆ ಎಂದು ದೂರಿದರು.
ಈ ವ್ಯಾಪಾರಿಗಳು ರೈತರಿಂದ ಶೇ.10 ಕಮೀಷನ್ ಪಡೆಯುತ್ತಿದ್ದಾರೆ. ತರಗು ಹೆಸರಲ್ಲಿ ಪ್ರತಿ ಕ್ವಿಂಟಲ್‍ಗೆ 7 ರಿಂದ 8 ಕೆಜಿ ಕಾಯಿ ತೆಗೆಯುತ್ತಿದ್ದಾರೆ. ಪಟ್ಟಣದ ನಾಗರಿಕರು ಹಾಗೂ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ತಕ್ಷಣ ಅವರೆ ಕಾಯಿ ವಹಿವಾಟನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಬೇಕು. ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹೇಳಿದರು.
ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಉಪ ತಹಶೀಲ್ದಾರ್ ಮನೋಹರ ಮಾನೆ ಅವರಿಗೆ ನೀಡಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಧನಂಜಯ್, ಮುಖಂಡ ಶಿವಕುಮಾರ್ ಇದ್ದರು.