ವೇಮಗಲ್ ಕುರಗಲ್ ಪಟ್ಟಣ ಪಂಚಾಯ್ತಿಯಾಗಿ ಘೋಷಣೆ ಅಭಿವೃದ್ಧಿಯ ಹೊಸ ಪರ್ವ ಆರಂಭ ಸಾರ್ವಜನಿಕರು , ಮುಖಂಡರ ಹರ್ಷ

ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ

ಕೋಲಾರ : ವೇಮಗಲ್ – ಕುರುಗಲ್ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಜ .೭ ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು , ಈ ಭಾಗದ ಜನತೆಯಲ್ಲಿ ಹರ್ಷ ಮನೆ ಮಾಡಿದೆ.
ವೇಮಗಲ್ ಕುರಗಲ್‌ಅನ್ನು ಪಟ್ಟಣ ಪಂಚಾಯಿತಿಯಾಗಿ ೨೦೨೧ ರ ಮಾರ್ಚ್ ೫ ರಂದೇ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ಅಸ್ಥಿತ್ವಕ್ಕೆ ತಂದಿತ್ತು. ಆದರೆ ಈ ಭಾಗದ ಕೆಲವರು ಪಟ್ಟಣ ಪಂಚಾಯಿತಿ ರಚನೆ ಸಂಬಂಧ ಆಕ್ಷೇಪಣೆ ಕೇಳಿಲ್ಲ ಎಂದು ನೆಪವೊಡ್ಡಿ ಹೈಕೋಟ್ ಮೊರೆ ಹೋಗಿ ತಡೆ ತಂದಿದ್ದರು.
ಹೈಕೋರ್ಟ್‌ನಲ್ಲಿ ರಿಟ್‌ಪಿಟಿಷನ್ ದಾಖಲಾಗಿ ೨೦೨೧ ಜುಲೈ ೨೩ ರಂದು ತೀರ್ಪು ಬಂದಿದ್ದರಿಂದ ೨೦೨೧ ರ ಸೆಪ್ಟೆಂಬರ್ ೪ ರಂದು ಅಧಿಸೂಚನೆ ಆದೇಶ ಹಿಂಪಡೆದಿತ್ತು.
ನಂತರ ಹೈಕೋರ್ಟ್ ತೀರ್ಪಿಗೆ ಅನುಸಾರ ಸಾರ್ವನಿಕರಿಂದ ಸಲಹೆ ಸೂಚನೆ ಅಂಗೀಕರಿಸಲು ಅವಕಾಶ ನೀಡಿ ಸರ್ಕಾರ ಅಂತಿಮವಾಗಿ ಪಟ್ಟಣ ಪಂಚಾಯಿತಿಯನ್ನಾಗಿ ಇದೀಗ ಮೇಲ್ದರ್ಜೆಗೇರಿಸಿದೆ. ಕೊನೆಗೂ ಪಟ್ಟಣ ಪಂಚಾಯಿತಿ ಘೋಷಣೆಯಾಗಿದೆ.
ನಗರೀಕರಣದಡಿ ಪಟ್ಟಣಗಳಿಗೆ ಸಿಗುವ ಎಲ್ಲಾ ಅಭಿವೃದ್ಧಿ ಮೂಲ ಸೌಕರ್ಯಗಳು ಇಲ್ಲಿಗೆ ಲಭಿಸಲಿದೆ , ಕೈಗಾರಿಕಾ ಪ್ರದೇಶವಾಗಿರುವುದರಿಂದ ಮತ್ತಷ್ಟು ಅಭಿವೃದ್ಧಿಗೂ ಕಾರಣವಾಗಲಿದ್ದು, ಈ ಭಾಗದ ಜನತೆಯಲ್ಲಿ ಹರ್ಷ ಮನೆ ಮಾಡಿದೆ.
ಪಟ್ಟಣ ಪಂಚಾಯಿತಿಯಾಗಲು ಸಹಕಾರ ನೀಡಿದ ಸರ್ಕಾರ , ಜಿಲ್ಲಾಡಳಿತ , ಎಲ್ಲಾ ಜನಪ್ರತಿನಿಧಿಗಳು , ಅಧಿಕಾರಿಗಳಿಗೆ ಹಾಗೂ ಈ ಸಂಬಂಧ ಸರ್ಕಾರದ ಗಮನ ಸೆಳೆದಿದ್ದ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್ ಅವರಿಗೆ ಈ ಭಾಗದ ಜನತೆ ಧನ್ಯವಾದ ಸಲ್ಲಿಸಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವರ
ವೇಮಗಲ್ – ಕುರಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವೇಮಗಲ್ ಗ್ರಾಪಂನ ವೇಮಗಲ್ , ಚನ್ನಪ್ಪನಹಳ್ಳಿ , ಮಜರಾ ಕುರುಬರಹಳ್ಳಿ , ಸುಜ್ಜನಹಳ್ಳಿ , ಸಿಂಗಹಳ್ಳಿ , ಪರ್ಜೆನಹಳ್ಳಿ , ಕುರುಗಲ್ ಗ್ರಾಪಂನ ಕುರುಗಲ್ , ಹಾರ್ಜೇನಹಳ್ಳಿ , ಮಲಿಯಪ್ಪನಹಳ್ಳಿ , ವಿಶ್ವನಗರ , ಸೂಲದೇನಹಳ್ಳಿ , ಮಡಿವಾಳ , ಮಂಚಂಡಹಳ್ಳಿ , ಕೊರಟೆ ಮಲ್ಲಾಂಡಹಳ್ಳಿ , ಚಂದ್ರಶೇಖರಪುರ ಹಾಗೂ ಶೆಟ್ಟಿಹಳ್ಳಿ ಗಾಪಂನ ಪುರಹಳ್ಳಿ , ಚೌಡದೇನಹಳ್ಳಿ ಗ್ರಾಪಂನ ಕಲ್ಯ , ಮಂಜಲಿ , ಚಿಕ್ಕವಲ್ಲಬ್ಬಿ , ಬೆಟ್ಟಹೊಸಪುರ ಗ್ರಾಮಗಳನ್ನು ನೂತನ ಪಟ್ಟಣ ಪಂಚಾಯಿತಿಗೆ ಸೇರ್ಪಡೆ ಮಾಡಲಾಗಿದೆ.