ಕೋಟೇಶ್ವರದ ಶ್ರೀಕೋಟಿಲಿಂಗೇಶ್ವರ ದೇವಾಲಯ: ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ,ಶ್ರೀಮನ್ ಮಹಾರಥೋತ್ಸವಗಳ ಸೇವೆಗಳ ಕೂಪನ್ ಪುಸ್ತಿಕೆಗಳ ಬಿಡುಗಡೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂದಾಪುರ : ಕರಾವಳಿಯ ಪ್ರಸಿದ್ಧ ಪುಣ್ಯಕ್ಷೇತ್ರ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಇದೇ ಫೆಬ್ರವರಿ 7 ರಿಂದ 17 ರವರೆಗೆ ನಡೆಸಲುದ್ದೇಶಿಸಿರುವ ನೂತನ ಧ್ವಜಮರ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ ಮತ್ತು ಶ್ರೀಮನ್ ಮಹಾರಥೋತ್ಸವಗಳ ಅಂಗವಾಗಿ, ವಿವಿಧ ಕಲಶಾಶಾಭಿಷೇಕ ಸೇವೆಗಳ ಕೂಪನ್ ಗಳ ಪುಸ್ತಿಕೆಗಳನ್ನು ಬಿಡುಗಡೆಗೊಳಿಸಲಾಯಿತು.- –ಶ್ರೀ ಕೋಟಿಲಿಂಗೇಶ್ವರ ದೇವಳ ವಠಾರದಲ್ಲಿ ನಡೆದ ಆಯ್ದ ಸಮಿತಿಗಳ ಅನೌಪಚಾರಿಕ ಸಭೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ ಪುಸ್ತಿಕೆಗಳನ್ನು ಬಿಡುಗಡೆಗೊಳಿಸಿ, ಸರ್ಕಾರದ ಕೋವಿಡ್ ರಕ್ಷಣಾ ನಿಯಮಗಳನ್ನು ಪಾಲಿಸಿ ಉತ್ಸವಗಳನ್ನು ನಡೆಸಲಾಗುತ್ತಿದೆ. 62 ವರ್ಷಗಳ ನಂತರ ನಮ್ಮ ಜೀವಮಾನದಲ್ಲಿ ಒದಗಿಬಂದಿರುವ ಈ ಅಪೂರ್ವ ಸಂದರ್ಭದಲ್ಲಿ ಶ್ರೀ ದೇವರ ಸೇವೆಯಲ್ಲಿ ತೊಡಗಿಸಿಕೊಂಡು ಭಗವಂತನಿಗೆ ಕೃತಜ್ಞತೆ ಸಲ್ಲಿಸಿ, ಕೃಪೆಗೆ ಪಾತ್ರರಾಗುವ ಒಂದು ಸದವಕಾಶ ಇದು ಎಂದು ವಿವರಿಸಿ, ಸರ್ವರೂ ಸಹಕರಿಸುವಂತೆ ಮನವಿ ಮಾಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ ಮಾತನಾಡಿ, ದೇವಳ ಜೀರ್ಣೋದ್ಧಾರ ಪ್ರಕ್ರಿಯೆಗಳು ಮುಕ್ತಾಯದ ಹಂತ ತಲುಪಿದ್ದು, ಊರ – ಪರವೂರ ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ ತಮ್ಮ ಕುಟುಂಬದ ವತಿಯಿಂದ ಕನಿಷ್ಠ ಒಂದು ಕಲಶವನ್ನು ಶ್ರೀ ದೇವರ ಅಭಿಷೇಕಕ್ಕೆ ಒದಗಿಸಿ ಪುನೀತರಾಗಬೇಕು ಎಂದು ವಿನಂತಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಸುರೇಶ್ ಬೆಟ್ಟಿನ್ ಕಲಶ ಸೇವೆಗಳ ಬಗ್ಗೆ ಮಾಹಿತಿ ನೀಡಿ, ಬೆಳ್ಳಿ (ರಜತ)ಕಲಶ ಒಂದಕ್ಕೆ 30,000 ರೂ., ತಾಮ್ರದ ಅಷ್ಟಲಕ್ಷ್ಮೀ ಕಲಶ ರೂ.5,005 ಹಾಗೂ ತೀರ್ಥಪ್ರಸಾದ ಮತ್ತು ಕಲಶ ರೂ. 1,005. ಅಲ್ಲದೇ, ಹೆಚ್ಚಿನ ಮೌಲ್ಯವನ್ನು ಹಣದ ರೂಪದಲ್ಲೂ ನೀಡಬಹುದು ಎಂದು ತಿಳಿಸಿದರು.
ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಮಾತನಾಡಿ, ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ಸ್ವಾಮೀಜಿಗಳು ಹಾಗೂ ಗಣ್ಯಮಾನ್ಯರು, ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ಹೊರೆಕಾಣಿಕೆ ಸಲ್ಲಿಸಲು ಭಕ್ತರಿಗೆ ಅವಕಾಶವಿದೆ.