ಶಾಸಕ ರಮೇಶ್ ಕುಮಾರ್ ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಜೆಡಿಸ್ ಪ್ರತಿಭಟನೆ:ದಿಂಬಾಲ ಅಶೋಕ್

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಶ್ರೀನಿವಾಸಪುರ : ಶಾಸಕ ರಮೇಶ್ ಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲವು ಜೆಡಿಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಾಗರಿಕರಿಗೆ ತೊಂದರೆ ಉಂಟುಮಾಡಿದ್ದಾರೆ ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು .

ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ , ತಾಲ್ಲೂಕಿನ ಪಾತಬಲ್ಲಪಲ್ಲಿ ಗ್ರಾಮದ ಕೆಲವರು ಒಂದು ನಿರ್ದಿಷ್ಟ ಕುಟುಂಬವನ್ನು ಗುರಿಯಾಗಿರಿಸಿಕೊಂಡು ವಿನಾಕಾರಣ ಕಿರುಕುಳ ನೀಡುತ್ತಿದ್ದರು . ಆ ಕುಟುಂಬದ ಸದಸ್ಯರ ಮೇಲೆ ಹಲವು ಸಲ ಹಲ್ಲೆ ಮಾಡಿದ್ದರು . ಗುರುವಾರ ಜಮೀನೊಂದರ ವಿವಾದಕ್ಕೆ ಸಂಬಂಧಿಸಿದಂತೆ ಈ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳೇ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಬಂದಿದ್ದರು . ನೊಂದ ಕುಟುಂಬದ ಸದಸ್ಯರು ಮಾಡಿಕೊಂಡ ಮನವಿಯ ಮೇರೆಗೆ ಶಾಸಕ ರಮೇಶ್ ಕುಮಾರ್ ಅವರು ಘಟನೆ ಬಗ್ಗೆ ವಿಚಾರಿಸಲು ಪೊಲೀಸ್ ಠಾಣೆಗೆ ಹೋಗಬೇಕಾಯಿತು ಎಂದು ಹೇಳಿದರು . ಅದೇ ಸಮಯಕ್ಕೆ ಸರಿಯಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ ಅವರು ಇದೇ ಘಟನೆಗೆ ಸಂಬಂಧಿಸಿದಂತೆ ವಿಚಾರಿಸಲು ಠಾಣೆಯಲ್ಲಿದ್ದರು . ಶಾಸಕರನ್ನು ಕಂಡು ತಕ್ಷಣ ಎದ್ದು ನಿಂತು ನಮಸ್ಕಾರ ಮಾಡಿದರು . ಅದಕ್ಕೆ ಶಾಸಕರು ಪ್ರತಿ ನಮಸ್ಕಾರ ಮಾಡಿ , ‘ ನೀವಿನ್ನು ಹೊರಡಿ , ಪೊಲೀಸರೊಂದಿಗೆ ನಾನೂ ಸ್ವಲ್ಪ ಮಾತನಾಡಬೇಕಾಗಿದೆ ‘ ಎಂದರು . ಈ ಮಾತಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡು ಕೆಲವು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಶಾಸಕ ರಮೇಶ್ ಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಿವರಿಸಿದರು . ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್ ಮಾತನಾಡಿ , ಇಂಥ ಘಟನೆ ನಡೆದಿರುವುದು ದುರದೃಷ್ಟಕರ . ಶಾಸಕರಿಗೆ ತೊಂದರೆಗೆ ಒಳಗಾದ ನಾಗರಿಕರ ನೆರವಿಗೆ ಹೋಗಬೇಕಾದ ಜವಾಬ್ದಾರಿ ಇರುತ್ತದೆ . ತೂಪಲ್ಲಿ ಆರ್.ನಾರಾಯಣಸ್ವಾಮಿ ಒಬ್ಬ ಸಾಧು ಸ್ವಭಾವದ ವ್ಯಕ್ತಿ , ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಉಳ್ಳವರು . ಧರಣಿ ನಡೆಸದಂತೆ ಅವರೇ ಕಾರ್ಯಕರ್ತರಿಗೆ ಹೇಳಿದ್ದಾರೆ . ಆದರೂ ಕೆಲವರು ಜಿದ್ದಿಗೆ ಬಿದ್ದವರಂತೆ ಶಾಸಕರನ್ನು ನಿಂದಿಸಿ , ಪ್ರತಿಭಟನೆ ನಡೆಸಿದ್ದಾರೆ .
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು , ರಾಯಲ್ಪಾಡ್ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸಂಜಯ್‌ ರೆಡ್ಡಿ , ಮುಖಂಡರಾದ ಅಯ್ಯಪ್ಪ , ವೆಂಕಟರೆಡ್ಡಿ , ದರ್ಶನ್ , ಶಿವರಾಜು , ಹರೀಶ್ ಯಾದವ್ , ಎನ್.ಆರ್.ನಾಗರಾಜ್ , ಮುನಿರಾಜು , ವೆಂಕಟೇಶ್ , ಆಂಜಿ ಇದ್ದರು .