ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳಲ್ಲೂ ಜೂನಿಯರ್ ರೆಡ್ ಕ್ರಾಸ್ ಘಟಕ ; ಡಿಡಿಪಿಐ ರೇವಣಸಿದ್ದಪ್ಪ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಡಿ 27 : ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ಮತ್ತು ಶಿಸ್ತು ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಪ್ರೌಢ ಶಾಲೆಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕವನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ ತಿಳಿಸಿದರು.
ತಮ್ಮ ಕಾರ್ಯಾಲಯದಲ್ಲಿಂದು ಜೂನಿಯರ್ ರೆಡ್ ಕ್ರಾಸ್ ಉಪ ಸಮಿತಿಯ ರಾಜ್ಯ ಸದಸ್ಯ ಜಿ.ಶ್ರೀನಿವಾಸ್ ನೇತೃತ್ವದ ನಿಯೋಗ ನೀಡಿದ ಮನವಿ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ದೇಶ ಮತ್ತು ಪ್ರಪಂಚದಾದ್ಯಂತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ತನ್ನದೇ ಆದ ಇತಿ ಮಿತಿಯಲ್ಲಿ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದು ಆಕಸ್ಮಿಕ ಮತ್ತು ಪ್ರಕೃತಿ ವಿಕೋಪ, ಕೋವಿಡು ಪರಿಹಾರಾತ್ಮಕ ಸಂದರ್ಭಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದೆ, ಇಂತಹ ಸಂಸ್ಥೆಯ ಜೂನಿಯರ್ ಘಟಕ ಗಳನ್ನು ಜಿಲ್ಲೆಯಾದ್ಯಂತ ಎಲ್ಲ ಪ್ರೌಢಶಾಲೆಗಳಲ್ಲಿ ತಕ್ಷಣ ನೋಂದಾಯಿಸಿಕೊಳ್ಳುವ ಮೂಲಕ ರಾಷ್ಟ್ರೀಯತೆ, ರಾಷ್ಟ್ರದ ಶಾಂತಿ ಮತ್ತು ಕೋಮು ಸೌಹಾರ್ದ. ಕಾಪಾಡಿಕೊಳ್ಳಲು ಮುಖ್ಯೋಪಾಧ್ಯಾಯರು ತೊಡಗಿಸಿಕೊಳ್ಳಲು ನೆರವಾಗಿ ಎಂದು ತಿಳಿಸಿದರು.
ಜೂನಿಯರ್ ರೆಡ್ ಕ್ರಾಸ್ ಘಟಕ ಗಳನ್ನು ಆರಂಭಿಸುವುದು. ಈ ಸಂಬಂಧ ಪರೀಕ್ಷೆ ನಡೆಸಿ ಉತ್ತಮ ಉದಾತ್ತ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಬಿತ್ತಬೇಕು. ವಿದ್ಯಾರ್ಥಿಯ ಸವಾರ್ಂಗೀಣ ಪ್ರಗತಿಗೆ ಪೂರಕವಾಗಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸೇವಾ ಕಾರ್ಯಗಳನ್ನು ಶಾಲೆಗಳಲ್ಲಿ ಆರಂಭಿಸಿ, ಸದೃಢ ನಾಯಕತ್ವ ಗುಣಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಡಾ.ಎನ್.ಗೋಪಾಲಕೃಷ್ಣ ಗೌಡ ಮಾತನಾಡಿ ಪ್ರೌಢ ಶಾಲೆಗಳಲ್ಲಿ ಜೂನಿಯರ್ ರೆಡ್ ಕ್ರಾಸ್ ನೋಂದಣಿ ಮುಗಿಯುತ್ತಿದ್ದಂತೆ ಪ್ರತಿ ಶಾಲೆಯ ಸಂಪನ್ಮೂಲ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಎಸ್ .ಸಿ. ವೆಂಕಟಕೃಷ್ಣಪ್ಪ , ಉಪಸಭಾಪತಿ ಆರ್.ಶ್ರೀನಿವಾಸನ್, ಕಾರ್ಯದರ್ಶಿ ನಂದೀಶ್ ಕುಮಾರ್, ಕಾರ್ಯಕ್ರಮ ಅಧಿಕಾರಿ ಡಾ. ಶರಣಪ್ಪ ಗಬ್ಬೂರ್ ಮತ್ತಿತರರು ಉಪಸ್ಥಿತರಿದ್ದರು .