ಬಾರ್ಕುರು – ಬ್ರಹ್ಮಾವರದ ಧರ್ಮಗುರು ವಂ| ಆಲ್ಫ್ರೆಡ್ ರೋಚ್ ಇವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭ

JANANUDI.COM NETWORK


ದೇವರ ಸೇವಕ ಉನ್ನತ ದೈವ ಭಕ್ತಿಯಿಂದ ಖ್ಯಾತರಾದ ಧರ್ಮಗುರು ವಂದನೀಯ ಆಲ್ಫ್ರೆಡ್ ರೋಚ್ ಇವರನ್ನು ಕ್ರೈಸ್ತ ಧರ್ಮದಲ್ಲಿ ಅತಿ ಉನ್ನತ ಪದವಿಯಾದ ಪುನೀತ ಮತ್ತು ಸಂತ ಪದವಿಗೆ ಏರಿಸುವ ಪ್ರಕ್ರಿಯೆಯನ್ನು ಆರಂಭಿಸಲು ವ್ಯಾಟಿಕನ್ ಅನುಮತಿಯನ್ನು ನೀಡಿದೆ.

ಧರ್ಮಗುರು ವಂದನೀಯ ಆಲ್ಫ್ರೆಡ್ ರೋಚ್ ಕಾಪುಚಿನ್ ಸಭೆಯ ಧರ್ಮಗುರುಗಳಾಗಿದ್ದು ಅವರ ಜನನ 1924 ರಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರ್ಕೂರಿನಲ್ಲಿ ಹುಟ್ಟಿ, ಬೆಳೆದು ಕ್ರೈಸ್ತ ಧರ್ಮಗುರುವಾಗಿ ಕರ್ನಾಟಕದಾದ್ಯಂತ ಸೇವೆ ಸಲ್ಲಿಸಿ, ಬ್ರಹ್ಮಾವರದಲ್ಲೇ ಹದಿನಾರು ವರ್ಷಗಳ ಕಾಲ ಜನಸೇವೆಯಲ್ಲಿ ತೊಡಗಿ 1996 ರಲ್ಲಿ ದೈವಾಧೀನರಾದರು. ಅವರ ಸಾತ್ವಿಕ ಜೀವನ, ಜನರಿಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆ, ಬಡಜನರ ಅಭಿವೃದ್ಧಿಗಾಗಿ ಅವರು ಮಾಡಿದ ಸಹಾಯ, ಇನ್ನಿತರ ದಯಾಮಯಾ ಕಾರ್ಯಗಳಿಂದ ಅವರನ್ನು ಆಧ್ಯಾತ್ಮಿಕತೆ ಹಾಗೂ ಜನಸೇವೆಯ ಮಾದರಿಯಾಗಿ ಪರಿಗಣಿಸಿ ಜಾತಿ-ಮತ ಬೇಧವಿಲ್ಲದೆ ಜನರು ಗೌರವಿಸಿದರು.
ಅವರು ನಿಧನರಾಗಿ ಇಪ್ಪತ್ತೈದು ವರ್ಷಗಳು ಕಳೆಯಿತು. ಅವರನ್ನು ಪುನೀತ ಪದವಿಗೆ ಏರಿಸಬೇಕೆಂಬ ಜನರ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಾ ಇದ್ದು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆ ಆರಂಭಿಸಲು ಪ್ರಯತ್ನ ನಡೆದಿತ್ತು, ಇದಕ್ಕೆ ಈಗ ವ್ಯಾಟಿಕನ್ ಈಗ ಅನುಮತಿ ನೀಡಿದೆ.
ವಂದನೀಯ ಗುರು ಆಲ್ಫ್ರೆಡ್ ರೋಚ್ ಅವರ ಸಾತ್ವಿಕ ಜೀವನ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್‍ನ `ಸಂತರು ಮತ್ತು ಪುನೀತರನ್ನಾಗಿ ಘೋಷಿಸುವ ವಿಭಾಗ’ ವು ವಂದನೀಯ ಆಲ್ಫ್ರೆಡ್ ಗುರು ರೋಚ್‍ರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಯನ್ನು ಆರಂಭಿಸಲು ಅನುಮತಿಯನ್ನು ನೀಡಿದ್ದು ಭಾರಿ ಮಹತ್ವದ ವಿಚಾರವಾಗಿದೆ. ಇದೊಂದು ಅತೀ ಸಂಕೀರ್ಣ ಹಾಗೂ ಬಹಳ ಕಾಲ ತಗುಲುವ ಪ್ರಕ್ರಿಯೆಯಾಗಿದ್ದು, ಕಥೋಲಿಕ ಧರ್ಮಸಭೆಯ ನೇಮ-ನಿಯಮಗಳ ಪ್ರಕಾರ ನಡೆಯಲಿದೆ. ಈ ಪ್ರಕ್ರಿಯೆಯ ಅಂತ್ಯದಲ್ಲಿ, ಮೊದಲು ‘ಪುನೀತ’, ಅನಂತರ ಕೊನೆಯದಾಗಿ ‘ಸಂತ’ ಪದವಿಯನ್ನು ಪೋಪ್ ಜಗದ್ಗುರುಗಳು ದಯಪಾಲಿಸುತ್ತಾರೆ.
ಈ ಸಂಕೀರ್ಣ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿಯು ಜೀವಿಸಿದ ಪರಿಸರದಲ್ಲಿ ನಡೆಸಲಾಗುವುದು. ವಂದನೀಯ ಗುರು ಆಲ್ಫ್ರೆಡ್ ರೋಚ್‍ರವರು ಉಡುಪಿ ಪರಿಸರದವರಾದ್ದರಿಂದ, ಉಡುಪಿ ಧರ್ಮಪ್ರಾಂತ್ಯ ಮಟ್ಟದ ಪ್ರಕ್ರಿಯೆಯು 2021 ಡಿಸೆಂಬರ್ 27 ರಂದು ಬೆಳಿಗ್ಗೆ 10 ಗಂಟೆಗೆ ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದಲ್ಲಿ ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಜೆರಾಲ್ಡ್ ಲೋಬೊರವರು ಚಾಲನೆಯನ್ನು ನೀಡಲಿದ್ದಾರೆ.
ಉಡುಪಿ ಜಿಲ್ಲೆಯ ಪೂಜನೀಯರಾದ ವಂದನೀಯ ಗುರು ಆಲ್ಫ್ರೆಡ್ ರೋಚ್‍ರವರಿಗೆ ‘ಪುನೀತ ಪದವಿ’ ಯನ್ನು ದಯಪಾಲಿಸುವ ಕಥೋಲಿಕ ಧರ್ಮಸಭೆಯ ಈ ಪ್ರಕ್ರಿಯೆಯ ಆರಂಭಗೊಂಡದ್ದರಿಂದ ವಂ।ಧರ್ಮಗುರು ಆಲ್ಫ್ರೆಡ್ ರೋಚ್‍ರವರ ಅಭಿಮಾನಿಗಳು ಹರ್ಷ ಭರಿತರಾಗಿದ್ದಾರೆ.