ಅತಿಥಿ ಉಪನ್ಯಾಸಕರಿಂದ ತರಗತಿಗಳ ಭಹಿಷ್ಕಾರ ; ಕನಿಷ್ಠ ವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ ಡಿಸೆಂಬರ್ 10 : ಸರ್ಕಾರ ಅತಿಥಿ ಉಪನ್ಯಾಸಕರಿಗೆ ತಾರತಮ್ಯ ಮಾಡುತ್ತಿರುವುದು ಸರಿಯಲ್ಲವೆಂದು ಅತಿಥಿ ಉಪನ್ಯಾಸಕ ಡಾ.ಶರಣಪ್ಪ ಗಬ್ಬೂರು ಅಭಿಪ್ರಾಯಪಟ್ಟರು
ಅವರು ಇಂದು ಕೋಲಾರ ತಾಲ್ಲೂಕು ವೇಮಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು ತರಗತಿಗಳನ್ನು ಭಹಿಷ್ಕರಿಸಿ ರಾಜ್ಯಾದ್ಯಂತ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರಾಂಶುಪಾಲರಾದ ಮಂಜುನಾಥ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಬಹುಪಾಲು ಸರ್ಕಾರಿ ಕಾಲೇಜುಗಳು ನಡೆಯುತ್ತಿರುವುದು ಅತಿಥಿ ಉಪನ್ಯಾಸಕರಿಂದ ಎಂಬುದು ಕಟು ಸತ್ಯ. ಸಮಸ್ಯೆಯನ್ನು ಇಂದಿನವರೆಗೂ ಯಾವ ಸರ್ಕಾರಗಳು ಖಾಯಂ ಆಗಿ ಪರಿಹರಿಸಲು ಮುಂದಾಗಲಿಲ್ಲ. ಗೌರವಧನವನ್ನೂ ಕೂಡ ಸರಿಯಾಗಿ ಕೊಡದೆ, ವೇತನವನ್ನು ಹೆಚ್ಚಿಸದೆ ಇರುವುದು, ಇನ್ನೊಂದು ಕಡೆ ಸೇವಾ ಭದ್ರತೆ ನೀಡದಿರುವುದು ಶೋಚನೀಯ ಸಂಗತಿ.
ಅತಿಥಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗವನ್ನು ಅನುಭವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಈ ಕೂಡಲೇ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಒಂದು ಉತ್ತಮವಾದ ಭವಿಷ್ಯಕ್ಕೆ ಮುನ್ನುಡಿಯಾಗಬೇಕು. ಈ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮವಾದ ಜೀವನ ನಡೆಸಲು ಸರ್ಕಾರ ಮತ್ತು ಇಲಾಖೆ ಮುಂದಾಗಬೇಕು ಎಂದರು.
ವಾಣಿಜ್ಯ ವಿಭಾಗ ಅತಿಥಿ ಉಪನ್ಯಾಸಕ ಶಂಕರ್ ಮಾತನಾಡಿ ಸರ್ಕಾರ ಹಲವಾರು ವರ್ಷಗಳಿಂದ ನೀಡುತ್ತಿರುವ ಮಾಸಿಕ ವೇತನ ಹನ್ನೊಂದು ಸಾವಿರ ಹಾಗೂ ಹದಿಮೂರು ಸಾವಿರ ರೂಪಾಯಿಗಳು ಜೀವನಕ್ಕೆ ಸಾಕಾಗುತ್ತಿಲ್ಲ. ಹಾಗಾಗಿ ಬಡತನಕ್ಕೆ ಈಡಾಗಿದ್ದಾರೆ. ಈಗಿರುವ ಘನ ಸರ್ಕಾರ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆಯನ್ನು ನೀಡಲು ಮುಂದಾಗಬೇಕು. ಶೈಕ್ಷಣಿಕ ವರ್ಷದುದ್ದಕ್ಕೂ 12 ತಿಂಗಳ ಕಾಲ ವೇತನವನ್ನು ಪಾವತಿಸಬೇಕು.
ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಇಂದು ರಾಜ್ಯಾದ್ಯಂತ ರಾಜ್ಯದ ಎಲ್ಲಾ ಪದವಿ ಕಾಲೇಜುಗಳ ಉಪನ್ಯಾಸಕರು ತರಗತಿಗಳನ್ನು ಭಹಿಷ್ಕರಿಸಿ ಅನಿರ್ಧಿಷ್ಠಾವದಿ ಉಪನ್ಯಾಸ ಕಾರ್ಯದಲ್ಲಿ ತೊಡಗಬಾರದೆಂದು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದುದು ನಮ್ಮ ಆಧ್ಯ ಕರ್ತವ್ಯ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ನಮಗೂ ಕರ್ತವ್ಯ ಚ್ಯುತಿ ನೋವು ಕಾಣುತ್ತಿದೆ. ಅದರೆ ನಮ್ಮ ಹಸಿವು ಹಾಗೂ ಸಮಸ್ಯೆ ನಮಗೆ ಮುಖ್ಯವಾಗಿ ಕಾಣುತ್ತಿದೆ. ಆಗಾಗಿ ಅನಿವಾರ್ಯವಾಗಿ ಇಂದು ತರಗತಿಗಳನ್ನು ಬಹಿಷ್ಕರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಮುರಳಿಧರ, ರಂಗನಾಥ್, ಶಿವರಾಜ್, ರಾಜೇಶ್, ಸುರೇಶ್‍ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.