ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ರಾಜಧಾನಿ ಮ್ಯಾಂಗೋ ಮಂಡಿಯಲ್ಲಿ ಸೋಮವಾರ ಏರ್ಪಡಿಸಿದ್ದ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಭೆಯಲ್ಲಿ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ ಕುಮಾರ್ ಪರ ಚುನಾವಣಾ ಪ್ರಚಾರ ಭಾಷಣ ಮಾಡಿ, ಈ ಚುನಾವಣೆ ದೇಶದ ರಾಜಕೀಯ ಜಾತಕವನ್ನು ಬದಲಾಯಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವಾಗಲೂ ಕೆಲುವ ಪ್ರಜೆಗಳದಾಗಿರಬೇಕು ಎಂದು ಹೇಳಿದರು.
ಮನುಷ್ಯರ ಮಧ್ಯೆ ಕುಲ, ಮತ ಭೇದ ಬೆಳೆಸುವುದು, ಮನುಷ್ಯರ ಮಧ್ಯೆ ಗೋಡೆಗಳನ್ನು ನಿರ್ಮಿಸುವುದು ಬಿಜೆಪಿ ಕೆಲಸ. ಪ್ರಜಾಪ್ರಭುತ್ವ ನೀತಿ ಹಾಗೂ ಸಂವಿಧಾನವನ್ನು ಗಾಳಿಗೆ ತೂರಿರುವ ಮೋದಿ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸರ್ವಾಧಿಕಾರಿ ಎಂದು ಕರೆಯುತ್ತಾರೆ. ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸರ್ವಸಮ್ಮತ ಅಭ್ಯರ್ಥಿಯಾಗಿರುವ ಎಂ.ಎಲ್.ಅನಿಲ್ ಕುಮಾರ್ ಸ್ಥಳೀಯ ಆಭ್ಯರ್ಥಿಯಾಗಿದ್ದು, ಈ ತಾಲ್ಲೂಕಿನಿಂದ ಹೆಚ್ಚು ಮತ ನೀಡಬೇಕು. ಗೆಲುವು ಸಾಧಿಸಲು ಸಹಕರಿಸಬೇಕು ಎಂದು ಎಂದು ಮನವಿ ಮಾಡಿದರು.
ಎಐಸಿಸಿ ವೀಕ್ಷಕ ಶ್ರೀಧರ್ ಬಾಬು ಮಾತನಾಡಿ, ಈ ಚುನಾವಣೆಯಲ್ಲಿ ಮತದಾರರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಮತ ನೀಡಬೇಕು. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವುದರ ಮೂಲಕ ಕಾಂಗ್ರೆಸ್‍ಗೆ ಶಕ್ತಿ ತುಂಬುವುದ ಜತೆಗೆ ನಾಡಿನ ಪ್ರಬುದ್ಧ ರಾಜಕಾರಣಿ ಹಾಗೂ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಗೌರವ ತಂದುಕೊಡಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿಯಪ್ಪ, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ಅನಿಲ್ ಕುಮಾರ್ ಅವರಿಗೆ ಮತ ನೀಡಲು ಮನವಿ ಮಾಡಿದರು.
ಮುಖಂಡರಾದ ಮ್ಯಾಕಲ ನಾರಾಯಣಸ್ವಾಮಿ, ಗೋವಿಂದಸ್ವಾಮಿ, ಅಕ್ಬರ್ ಷರೀಫ್, ದಿಂಬಾಲ ಅಶೋಕ್, ಕೆ.ಕೆ.ಮಂಜು ಬಾಲಾಜಿ, ಮುನಿರಾಜು, ಸಂಜಯ್ ರೆಡ್ಡಿ, ಎನ್.ಜಿ.ಬ್ಯಾಟಪ್ಪ, ಅನೀಸ್, ಶಿವಾರೆಡ್ಡಿ, ಕೃಷ್ಣೇಗೌಡ, ಎಂ.ಶ್ರೀನಿವಾಸನ್, ವೆಂಕಟರೆಡ್ಡಿ, ರಾಮಾನುಜಾಚಾರಿ, ನಂದಕುಮಾರ್, ಮಂಜುನಾಥ್ ಮತ್ತಿತರರು ಇದ್ದರು.