ಚಿಕ್ಕಮಂಗಳೂರಿಗೆ ತೆರಳಿದ್ದ ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಕೋಲಾರ ಬಂದ್‌ಗೆ ವ್ಯಾಪಕ ಬೆಂಬಲ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಇತ್ತೀಚೆಗೆ ನಗರದಲ್ಲಿ ಚಿಕ್ಕಮಂಗಳೂರಿಗೆ ತೆರಳಿದ್ದ ದತ್ತಮಾಲಾಧಾರಿಗಳ ಮೇಲಿನ ಹಲ್ಲೆ ಖಂಡಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಕೋಲಾರ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಸಂಪೂರ್ಣ ಯಶಸ್ವಿಯಾಯಿತು. ಚಿಕ್ಕಮಂಗಳೂರಿನ ದತ್ತಪೀಠಕ್ಕೆ ತೆರಳಿದ್ದ ಹಿಂದೂಪರ ಸಂಘಟನೆಗಳ ಯುವಕರಿದ್ದ ವಾಹನದ ಮೇಲೆ ನಗರದ ಕ್ಲಾಕ್ ಟವರ್ ಸಮೀಪ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಈ ಬಂದ್‌ಗೆ ಕರೆ ನೀಡಲಾಗಿತ್ತು . ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಸ್ವಯಂಪ್ರೇರಿತರಾಗಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸುವ ಮೂಲಕ ದುಷ್ಕರ್ಮಿಗಳ ಕೃತ್ಯವನ್ನು ಖಂಡಿಸಿದರು .

ಬೆಳಗ್ಗೆ ೬ ಗಂಟೆಯಿಂದಲೇ ಮೆರವಣಿಗೆ , ಬೈಕ್‌ರಾಲಿ
ಜಡಿ ಮಳೆಯ ನಡುವೆಯೂ ಮುಂಜಾನೆ ೬ ಗಂಟೆಯಿಂದಲೇ ಬಂದ್‌ಬೆಂಬಲಿಸಿ ಬೀದಿಗಿಳಿದ ಹಿಂದೂಪರ ಸಂಘಟನೆಗಳ ಸಾವಿರಾರು ಮಂದಿ ನಗರದಲ್ಲಿ ಬೈಕ್ ರಾಲಿ , ಮೆರವಣಿಗೆ ಆರಂಭಿಸಿದರು . ನಗರ ಬಸ್‌ನಿಲ್ದಾಣಕ್ಕೆ ಆಗಮಿಸಿದ್ದ ಬಸುಗಳನ್ನು ಮತ್ತೆ ಡಿಪೋಗೆ ವಾಪಸ್ಸು ಕಳುಹಿಸಲಾಯಿತು. ವಾಹನ ಸಂಚಾರಕ್ಕೆ ತಡೆಯೊಡ್ಡಿದ ಯುವಕರು ಅಲ್ಲೊಂದು ಇಲ್ಲೊಂದು ತೆರೆದಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದರು.
ನಗರದ ರಿಲೆಯನ್ಸ್ ಮಾಲ್ ತೆರೆದಿರುವುದರ ವಿರುದ್ಧ ಆಕ್ರೋಶಗೊಂಡ ಗುಂಪು ಪ್ರತಿಭಟನೆಗೆ ಮುಂದಾದಾಗ ಮಾಲ್ ಬಂದ್ ಆಯಿತು . ಬಂದ್ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳು ಮೊದಲೇ ರಜೆ ಘೋಷಿಸಿದ್ದವು . ಚಿತ್ರಮಂದಿರ , ಹೋಟೆಲ್‌ಗಳು ಬಂದ್ ಆಗಿದ್ದು , ದ್ವಿಚಕ್ರವಾಹನ ಸಂಚಾರ ಹೊರತುಪಡಿಸಿದಂತೆ ಇತರ ವಾಹನಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದು ಜನಜೀವನ ಅಸ್ಥವ್ಯವಸ್ತಗೊಂಡಿತು . ಬೆಳಗ್ಗೆ ೧೦ – ರ ಸುಮಾರಿಗೆ ನಗರದ ಬಸ್‌ನಿಲ್ದಾಣ ವೃತ್ತದಲ್ಲಿ ಜಮಾವಣೆಗೊಂಡ ಹಿಂದೂಪರ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಘಟನೆ ಖಂಡಿಸಿ , ಘೋಷಣೆಗಳನ್ನು ಕೂಗುತ್ತಾ ಸಾಗಿದರು . ಬೈಕ್ ರಾಲಿ ನಡೆಸಿದ ಹಿಂದೂಪರ ಸಂಘಟನೆಗಳ ಮುಖಂಡರು ದ್ವಿಚಕ್ರ ವಾಹನಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ರಾಲಿ ನಡೆಸಿ ಬಂದ್‌ಗೆ ಎಲ್ಲ ಹಿಂದುಗಳು , ಸಾರ್ವಜನಿಕರು , ವರ್ತಕರು , ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು . ಮೆರವಣಿಗೆ ಬಸ್‌ನಿಲ್ದಾಣ ವೃತ್ತದಿಂದ ವೆಂಕಟೇಶ್ವರ ಚಿತ್ರಮಂದಿರ ರಸ್ತೆ , ಮೆಕೈವೃತ್ತ , ಬಂಗಾರಪೇಟೆ ವೃತ್ತ , ಡೂಂಲೈಟ್ ವೃತ್ತ , ಕಠಾರಿಪಾಳ್ಯ ಮುಖ್ಯರಸ್ತೆ , ದೊಡ್ಡಪೇಟೆ ಮೂಲಕ ಹಾದು ಎಂಜಿ ರಸ್ತೆಯಲ್ಲಿ ಕೊನೆಗೊಂಡಿತು .

ಕ್ಲಾಕ್ ಟವರ್‌ ಪಾಕಿಸ್ತಾನವೇ ?
ಸಂಸದ ಎಸ್.ಮುನಿಸ್ವಾಮಿ ಗಾಂಧಿವನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ , ಕ್ಲಾಕ್ ಟವರ್ ಏನು ಪಾಕಿಸ್ಥಾನದಲ್ಲಿದೆಯೇ , ಅದು ಭಾರತವಲ್ಲವೇ ಎಂದು ಪ್ರಶ್ನಿಸಿ , ಅತ್ತ ಮೆರವಣಿಗೆ ಹೋಗಬಾರದು ಎಂಬ ಪೊಲೀಸರ ಆದೇಶವನ್ನು ಪ್ರಶ್ನಿಸಿ ಖಂಡಿಸಿದರು .
ನಾವು ಮುಸ್ಲಿಮರನ್ನು ಸಹೋದರರಂತೆ ಭಾವಿಸಿದ್ದೇವೆ , ಅವರಿಗೂ ಅದೇ ಭಾವನೆ ಇರಬೇಕು , ಅದು ಬಿಟ್ಟು , ದುಷ್ಕೃತ್ಯಗಳಿಗೆ ಇಳಿದರೆ ಸಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ ಅವರು , ಕ್ಲಾಕ್‌ಟವರ್‌ ರಸ್ತೆ ಯಾರಪನ ಆಸ್ತಿಯೂ ಅಲ್ಲ , ಅದು ಭಾರತದಲ್ಲೇ ಇದೆ , ಈ ಕುರಿತು ಗೃಹ ಸಚಿವರೊಂದಿಗೆ ಮಾತನಾಡುವುದಾಗಿ ತಿಳಿಸಿದರು . ಪುಲ್ವಾಮ ದಾಳಿ ಸಂದರ್ಭದಲ್ಲಿ ನಷ್ಟವಾದರೂ ಸರಿ ಪಾಕಿಸ್ತಾನಕ್ಕೆ ಟಮೋಟೋ ಕಳುಹಿಸುವುದಿಲ್ಲ ಎಂದು ಘೋಷಿಸಿದ ಅನ್ನದಾತರಿರುವ ಜಿಲ್ಲೆ ಕೋಲಾರವಾಗಿದೆ . ಇಲ್ಲಿ ದೇಶಪೇಮಕ್ಕೆ ಕೊರತೆ ಇಲ್ಲ , ಎಲ್ಲರೂ ಒಟ್ಟಾಗಿ ಬಾಳ್ವೆ ಮಾಡಬೇಕು ಎಂದು ತಿಳಿಸಿದರು .
ಹಿಂದೂ ಜಾಗರಣಾ ವೇದಿಕೆಯ ಉಲ್ಲಾಸ್ , ಹಿಂದೂಗಳು ಯಾರ ತಂಟೆಗೂ ಹೋಗುವುದಿಲ್ಲ ಎಂದ ಮಾತ್ರಕ್ಕೆ ನಾವು ಹೇಡಿಗಳಲ್ಲ , ನಮ್ಮನ್ನು ಕೆಣಕಿದರೆ ಸುಮ್ಮನಿರಲು ಸಾಧ್ಯವೂ ಇಲ್ಲ ಎಂದು ಎಚ್ಚರಿಸಿದರು .
ಈ ಸಂದರ್ಭದಲ್ಲಿ ವಿಹಿಂಪದ ಡಾ.ಶಿವಣ್ಣ , ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ , ಬಜರಂಗದಳದ ಬಾಲಾಜಿ , ಬಾಬು , ಅಪ್ಪಿ , ವಿಜಯಕುಮಾರ್ , ರಾಜೇಶ್‌ಸಿಂಗ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು
.

ಮುತಾಲಿಕ್‌ ಗಡಿಯಲ್ಲೇ ಬಂಧನ

ಕೋಲಾರ ಜಿಲ್ಲೆಗೆ ಆಗಮಿಸಿ ಪ್ರತಿಭಟನೆಯಲ್ಲಿ ನೇತೃತ್ವ ವಹಿಸಬೇಕಾಗಿದ್ದ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ರನ್ನು ಜಿಲ್ಲೆಯ ಗಡಿಯಾದ ರಾಮಸಂದ್ರ ಬಳಿ ಪೊಲೀಸರು ವಶಕ್ಕೆ ಪಡೆದು ನಂದಗುಡಿ ಪೊಲೀಸ್ ಠಾಣೆಗೆ ಕರೆದೊಯ್ದರು . ಅವರೊಂದಿಗೆ ಶ್ರೀರಾಮಸೇನೆ ಬೆಂಗಳೂರು ನಗರ ಅಧ್ಯಕ್ಷ ಚಂದ್ರಶೇಖರ್ , ಬಿಜೆಪಿ ಮುಖಂಡ ಕೆ.ಎಸ್.ರಾಜೇಂದರನ್ನು ನಂದಗುಡಿ ಠಾಣೆಗೆ ಕರೆದೊಯ್ಯಲಾಯಿತು .

ಬಿಗಿಬಂದೋಬಸ್ತ್ ಎಲ್ಲೆಡೆ ಸರ್ಪಗಾವಲು

ಹಿಂದುಪರ ಸಂಘಟನೆಗಳು ಕರೆನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಪೊಲೀಸರು ಪ್ರಮುಖ ವೃತ್ತಗಳು , ಸೂಕ್ಷ್ಮ ಪ್ರದೇಶದಲ್ಲಿ ಖಾಕಿ ಪಡೆಯನ್ನು ನಿಯೋಜಿಸಿ ನಾಕಾ ಬ ೦ ದಿ ಕೈಗೊಂಡಿದ್ದರು . ರಾಲಿ ಕ್ಲಾಕ್ ಟವರ್ ಕಡೆ ಪ್ರವೇಶಿಸದಂತೆ ಶಾರದಾ ಟಾಕೀಸ್ ರಸ್ತೆ , ಕೆಸ್ಸಾರ್ಟಿಸಿ ಬಸ್ ನಿಲ್ದಾಣ ವೃತ್ತ ಹಾಗೂ ಶ್ರೀವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿ ಸಂಚಾರ ನಿಷೇಧಿಸಿದ್ದರು .
ಜಿಲ್ಲೆ ಸೇರಿದಂತೆ ವಿವಿಧೆಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು , ನಗರಾದಾದ್ಯಂತ ಬಿಗಿ ಬಂದೋಬಸ್ತ್ ಮಾಡಿದ್ದರು . ಕೋಲಾರ ಬಂದ್ ಯಶಸ್ಸಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರು , ಮುಖಂಡರು , ವರ್ತಕರು , ಬಂದೋಬಸ್‌ನಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಸಿಬ್ಬಂದಿ ಸೇರಿದಂತೆ ಎಲ್ಲರಿಗೂ ಬಜರಂಗದಳ ಮುಖಂಡ ಬಾಲಾಜಿ ಧನ್ಯವಾದ ಸಲ್ಲಿಸಿದರು . ಪ್ರತಿಭಟನೆಯಲ್ಲಿ ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ , ವಿಹಿಂಪದ ಡಾ.ಶಿವಣ್ಣ , ವಿಜಯಕುಮಾರ್‌ , ಜಯಂತಿಲಾಲ್ , ಹಿಂದುಪರ ಸಂಘಟನೆಗಳ ಮುಖಂಡರಾದ ಬಾಬು , ಬಾಲಾಜಿ , ರಮೇಶ್‌ರಾಜ್ , ಮಹೇಶ್ , ಜಗ್ಗ , ಸಿದ್ದನಹಳ್ಳಿಯ ಕಿಶೋರ್‌ಕುಮಾರ್ , ಓಂಪಕಾಶ್ , ನಾಗರಾಜ್ , ಕೆ.ಪಿ.ನಾಗರಾಜ್ , ಅರುಣ್ , ಸುಪ್ರೀತ್ , ಮಂಜುನಾಥ್ , ವಿಶ್ವನಾಥ್ , ಲಡ್ಡು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು .