300 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಕ ಧರ್ಮೇಶ್‌ರಿಂದ ಹೊಸಬಟ್ಟೆ ಕೊಡುಗೆ ದೇಶದ ಆಸ್ತಿಯಾದ ಮಕ್ಕಳ ಆರೋಗ್ಯ ರಕ್ಷಣೆ ಎಲ್ಲರ ಹೊಣೆ – ಅಶೋಕ್

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ : – ಮಕ್ಕಳೇ ದೇಶದ ಆಸ್ತಿ ಈ ಮಕ್ಕಳ ಶಿಕ್ಷಣ ಆರೋಗ್ಯ ನೀಡುವ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯವಾಗಿದ್ದು , ಅದನ್ನು ನೆನಪಿಸಲು ನೆಹರುರವರ ಜನ್ಮದಿನಾಚರಣೆಯ ಮಕ್ಕಳ ದಿನಾಚರಣೆ ಆಗಿದೆಯೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್‌.ಅಶೋಕ್‌ ಅಭಿಪ್ರಾಯಪಟ್ಟರು . ಅವರು ತಾಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಧರ್ಮೇಶ್ ಎಂಬ ಶಿಕ್ಷಕರು ಇದೇ ಗ್ರಾಮದ ಐದು ಅಂಗನವಾಡಿ ಕೇಂದ್ರದ ೩೦೦ ಮಕ್ಕಳಿಗೆ , ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದುಶಾಲೆಯ ಒಂದನೇ ತರಗತಿ ಮಕ್ಕಳಿಗೆ ಬಣ್ಣಬಣ್ಣದ ಸಮವಸ್ತ್ರಗಳನ್ನು ನೀಡಿದ್ದು ಅದನ್ನು ವಿತರಿಸಿ ಮಾತನಾಡುತ್ತಿದ್ದರು . ಪ್ರಸ್ತುತ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಮುಖ್ಯವಾಗಿ ಆರೋಗ್ಯ ಮತ್ತು ಶಿಕ್ಷಣ ಅತ್ಯಗತ್ಯವಾಗಿದ್ದು ಇವುಗಳನ್ನು ಈಗಾಗಲೇ ಇಲಾಖೆಯು ನೀಡುತ್ತಿದ್ದರೂ ಸಹ ಸಂಘ – ಸಂಸ್ಥೆಗಳು ಹಾಗೂ ಇಂತಹ ಆದರ್ಶ ಶಿಕ್ಷಕರು ಸಂಬಳದಲ್ಲಿ ಉಳಿಸಿ ನೆರವಾಗುವ ಕಾರ್ಯ ಶ್ಲಾಘನೀಯ ಎಂದರು . ಸಾಮಾನ್ಯವಾಗಿ ಅಂಗನವಾಡಿ ಕೇಂದ್ರಗಳು ಮಕ್ಕಳ ಶಿಕ್ಷಣಕ್ಕೆ ಬುನಾದಿ ಕೇಂದ್ರಗಳಾಗಿದ್ದು ಅಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಸಹ ನಿಗಾ ವಹಿಸಬೇಕು ಎಂದರು . ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಮಾತನಾಡಿ , ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಬೆಳವಣಿಗೆಯಾಗಲು ಉತ್ತಮ ಪರಿಸರ ಅಗತ್ಯವಾಗಿದ್ದು , ಅದನ್ನು ಒದಗಿಸಲು ಪ್ರತಿಯೊಬ್ಬರ ಪ್ರಯತ್ನ ಅಗತ್ಯ ಎಂದರು .
ಶಿಕ್ಷಕರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಬಹುದೆಂದು ತಿಳಿಸಿದ ಅವರು , ಸರ್ಕಾರಿ ಶಾಲೆಗಳನ್ನು ಉಳಿಸುವ ಕಾರ್ಯದಲ್ಲಿ ಶಿಕ್ಷಕರ ಬದ್ಧತೆ ಅಗತ್ಯ ಎಂದರು . ಕೋವಿಡ್ ೧೯ ಮರೆಯಾಗುತ್ತಿದ್ದು ಪೋಷಕರು ನಂಬಿಕೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದು ಮಕ್ಕಳು ಸಹ ಬಹಳ ಉಲ್ಲಾಸವಾಗಿ ಭಾಗವಹಿಸುತ್ತಿರುವುದು ಸಂತೋಷ ಎಂದರು . ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಬಣ್ಣದ ಬಟ್ಟೆಗಳು ವಿತರಿಸುವ ಜೊತೆಗೆ ನೂರಾರು ಗಿಡ ಗಳನ್ನು ನೆಡಲು ವಿತರಿಸಿರುವ ಕಾರ್ಯಕ್ರಮವೂ ಸಹ ನಡೆಯಿತು .
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟಲಕ್ಷ್ಮಮ್ಮ , ಮಾಜಿ ಅಧ್ಯಕ್ಷ ಮಂಜುನಾಥ್ , ಎಸ್ಟಿಎಂಸಿ ಅಧ್ಯಕ್ಷ ವೆಂಕಟೇಶಪ್ಪ , ಯುವ ಸಬಲೀಕರಣ ಕ್ರೀಡಾಧಿಕಾರಿ ಕೆ.ಎನ್ ಮಂಜುನಾಥ್ , ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ , ದಾನಿ ಶಿಕ್ಷಕ ಧರ್ಮೇಶ್ ಪಂಚಾಯತ್ ರಾಜ್ ಅಭಿವೃದ್ಧಿ ಅಧಿಕಾರಿ ರಮೇಶ್ , ನಿವೃತ್ತ ಮುಖ್ಯ ಶಿಕ್ಷಕರು ಪಣಸಮಾಕನಹಳ್ಳಿ ಚೌಡರೆಡ್ಡಿ , ಮುಖ್ಯ ಶಿಕ್ಷಕ ನಂಜುಂಡೇಗೌಡ , ಬೈರೇಗೌಡ ಸಂಘರ್ಷ ಪದ್ಮಮ್ಮ ಗೀತಾ ಮಮತಾ , ಪದ್ಮಾವತಿ , ಕೆ.ಮಂಜುಳಾ ಉಪಸ್ಥಿತರಿದ್ದರು .