ಜಿಲ್ಲೆಯ 223 ಶಾಲೆಗಳಲ್ಲಿ ರಾಷ್ಟ್ರೀಯ ಸಾಧನಾ ಸಮೀಕ್ಷೆ ಸುಗಮ ಶೈಕ್ಷಣಿಕ,ಕಲಿಕಾ ಪ್ರಗತಿಯ ನೈಜ ಚಿತ್ರಣ ಲಭ್ಯ-ಡಿಡಿಪಿಐ ರೇವಣಸಿದ್ದಪ್ಪ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಂತೆ ಶೈಕ್ಷಣಿಕ ಪ್ರಗತಿಯ ನೈಜ ಚಿತ್ರಣ ಅರಿತು ಶಿಕ್ಷಣದ ಅಭಿವೃದ್ದಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಲು ಅನುವಾಗುವಂತೆ ನಡೆಸಲಾಗುತ್ತಿರುವ ರಾಷ್ಟ್ರೀಯ ಅರ್ಹತಾ ಸಮೀಕ್ಷೆ ಜಿಲ್ಲೆಯ 223 ಶಾಲೆಗಳಲ್ಲಿ ಶುಕ್ರವಾರ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದೇ ಮುಗಿದಿದೆ ಎಂದು ಡಿಡಿಪಿಐ ರೇವಣಸಿದ್ದಪ್ಪ ತಿಳಿಸಿದರು.
ನಗರದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಈ ಕುರಿತು ಮಾಹಿತಿ ನೀಡಿದ ಅವರು, ತಳಮಟ್ಟದಲ್ಲಿ ಶಿಕ್ಷಣದ ಅಭಿವೃದ್ದಿ ಕುರಿತ ವಾಸ್ತವವನ್ನು ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ 223 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್ ಅವಧಿಯಲ್ಲಿ ಆಗಿರುವ ಕಲಿಕಾ ಹಿನ್ನಡೆ ಅಥವಾ ಕಲಿಕಾ ನಷ್ಟವನ್ನು ಅರಿತು ಮುಂದಿನ ದಿನಗಳಲ್ಲಿ ಇಂತಹ ಸಾಂಕ್ರಾಮಿಕ ರೋಗಗಳು ಎದುರಾದಾಗ ಕಲಿಕೆ ನ್ಯೂನ್ಯತೆ ತಡೆಯಲು ವಹಿಸಬೇಕಾದ ಕ್ರಮಗಳ ಕುರಿತು ಅರಿಯುವ ಪ್ರಯತ್ನವೂ ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಿಕ್ಷಣದ ಗುಣಮಟ್ಟದ ಅಭಿವೃದ್ದಿಗೆ ಕೈಗೊಳ್ಳಬಹುದಾದ ಕ್ರಮಗಳು, ಶಿಕ್ಷಕರಿಗೆ ವೃತ್ತಿ ತರಬೇತಿ ನೀಡಲು ಈ ಸಮೀಕ್ಷೆ ಸಹಕಾರಿಯಾಗಿದೆ ಎಂದು ವಿವರಿಸಿದರು.
ಕಲಿಕಾ ಸಾಮಥ್ರ್ಯ, ಬೋಧನಾ ವಿಧಾನ, ಕಲಿಕಾ ಫಲಗಳ ಕುರಿತು ಅರಿತು ಶೈಕ್ಷಣಿಕ ಪ್ರಗತಿಗೆ ಯೋಜನೆಗಳನ್ನು ರೂಪಿಸುವ ಕಾರ್ಯದಲ್ಲೂ ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಡಿಡಿಪಿಐ ರೇವಣಸಿದ್ದಪ್ಪ ಅವರು, ನಗರದ ಚಿನ್ಮಯ ವಿದ್ಯಾಲಯ, ಬಾಪೂಜಿ ಪ್ರೌಢಶಾಲೆ, ಆರ್‍ವಿ ಇಂಟರ್‍ನ್ಯಾಷನಲ್ ಶಾಲೆ, ನೂತನ ಸರ್ಕಾರಿ ಪ್ರೌಢಶಾಲೆ,ಸೆಂಟ್‍ಆನ್ಸ್ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲಿ ನಡೆಯುತ್ತಿರುವ ಸಾಧನಾ ಸಮೀಕ್ಷೆಯನ್ನು ವೀಕ್ಷಿಸಿ, ಪರೀಕ್ಷಾ ಸಿದ್ದತೆಗಳನ್ನು ಪರಿಶೀಲಿಸಿದರು.
ಶೈಕ್ಷಣಿಕ ಪ್ರಗತಿಯ ಸಮೀಕ್ಷೆ ಇದಾಗಿದ್ದು, ಮುಂದಿನ ದಿನಗಳಲ್ಲಿ ಕಲಿಕಾ ಗುಣಮಟ್ಟ ಉತ್ತಮ ಪಡಿಸಲು ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಜಿಲ್ಲೆಯಲ್ಲಿ ಒಟ್ಟು 223 ಶಾಲೆಗಳನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದು, ಕೋಲಾರ ತಾಲ್ಲೂಕಿನಲ್ಲಿ 59, ಬಂಗಾರಪೇಟೆ-36, ಕೆಜಿಎಫ್-25, ಮಾಲೂರು ತಾಲ್ಲೂಕಿನಲ್ಲಿ27, ಮುಳಬಾಗಿಲು ತಾಲ್ಲೂಕಿನಲ್ಲಿ 53 ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 23 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದರು.


ಸಮೀಕ್ಷೆಗೆ 6728 ಮಕ್ಕಳ ಆಯ್ಕೆ
ರಾಷ್ಟ್ರೀಯ ಸಾಧನಾ ಪರೀಕ್ಷೆ ಜಿಲ್ಲಾ ನೋಡಲ್ ಅಧಿಕಾರಿ ಬಾಲಾಜಿ, ಜಿಲ್ಲೆಯಲ್ಲಿ ಈ ಸಮೀಕ್ಷೆಗೆ 3, 5, 8 ಮತ್ತು 10ನೇ ತರಗತಿಯ ಒಟ್ಟು 6728 ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು ಎಂದು ತಿಳಿಸಿದರು.
3ನೇ ತರಗತಿಯ 1062 ಮಕ್ಕಳು, 5ನೇ ತರಗತಿಯ 1123 ಮಕ್ಕಳು, 8ನೇ ತರಗತಿಯ 2040 ಹಾಗೂ 10ನೇ ತರಗತಿಯ 2504 ಮಕ್ಕಳು ಸಾಧನಾ ಸಮೀಕ್ಷೆಯಲ್ಲಿ ಭಾಗವಹಿಸಿ ಪರೀಕ್ಷೆ ಬರೆದಿದ್ದಾರೆ ಎಂದು ವಿವರಿಸಿದರು.
ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ಈ ಪರೀಕ್ಷೆ ನಡೆದಿದ್ದು, ಕ್ಷೇತ್ರ ಸಮೀಕ್ಷಾಗಾರರಾಗಿ 366 ಮಂದಿಯನ್ನು ನೇಮಿಸಲಾಗಿದೆ ಮತ್ತು ವೀಕ್ಷಕರು ಸಹಾ ಕಾರ್ಯ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಸಾಧನಾ ಸಮೀಕ್ಷೆ ವೀಕ್ಷಿಸಲು ವಿವಿಧ ಶಾಲೆಗಳಿಗೆ ಡಿಡಿಪಿಐ ಅವರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಹಾಜರಿದ್ದರು.