ಮಾದಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಾಂಘಿಕ ಪ್ರಯತ್ನ ನಡೆಸಬೇಕು : ಬಿ.ನರಸಪ್ಪ ದಂಡೋರ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಮಾದಿಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಮಾದಿದ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಬಿ.ನರಸಪ್ಪ ದಂಡೋರ ಹೇಳಿದರು.
ತಾಲ್ಲೂಕಿನ ಆವಲಕುಪ್ಪ ಗ್ರಾಮದಲ್ಲಿ ಬುಧವಾರ ಮಾದಿಗ ದಂಡೋರ ತಾಲ್ಲೂಕು ಘಟಕದ ವತಿಯಿಂದ ಸ್ಥಾಪಿಸಲಾದ ಡಾ. ಬಿ.ಆರ್.ಅಂಬೇಡ್ಕರ್ ಭಾವ ಚಿತ್ರ ಅನಾವರಣಗೊಳಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದ ಹರಿಕಾರ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವಾದರ್ಶ ಪಾಲನೆ ಇಂದಿನ ಅಗತ್ಯವಾಗಿದೆ. ಮಾದಿಗ ಸಮುದಾಯಕ್ಕೆ ಸೇರಿದ ಮನೆಗಳ ಮೇಲೆ ಸಂಘಟನೆಯ ಬಾವುಟ ಹಾರಿಸಬೇಕು. ದೌರ್ಜನ್ಯಗಳ ವಿರುದ್ಧ ದನಿಯೆತ್ತಬೇಕು ಎಂದು ಹೇಳಿದರು.
ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎನ್.ದೇವರಾಜ್ ಮಾತನಾಡಿ, ದೇಶದ 18 ರಾಜ್ಯಗಳಲ್ಲಿ ಸಂಘಟನೆ ಬಲಯುತವಾಗಿದೆ. ಮಾದಿಗ ಸಮುದಾಯಕ್ಕೆ ಸಿಗಬೇಕಾದ ಮೀಸಲಾತಿಗಾಗಿ ಬಲವಾದ ಹೋರಾಟ ನಡೆಸಲಾಗುತ್ತಿದೆ. ಭಾರತದ ಮೂಲ ನಿವಾಸಿಗಳಾದ ಮಾದಿಗರಿಗೆ ತಕ್ಕ ಮಾನ್ಯತೆ ಸಿಗದಿರುವುದು ದುರದೃಷ್ಟಕರ ಎಂದು ಹೇಳಿದರು.
ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಾಮು, ಉಪಾಧ್ಯಕ್ಷೆ ಧನಲಕ್ಷ್ಮಿ, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಶಂಕರ್, ಕೆ.ಕೆ.ಮಂಜು, ಮಂಜುಳ, ಶಾಮರಾಜ್, ಮಂಜುನಾಥ್, ವೆಂಕಟೇಶ್, ಎಂ.ವಿ.ರಾಮಕೃಷ್ಣ, ಮುನಿರಾಜು, ಎ.ಎಂ.ಶ್ರೀನಿವಾಸ್, ಎಂ.ಎನ್.ನಾರಾಯಣಸ್ವಾಮಿ, ಗಂಗಾಧರ್ ಇದ್ದರು.