ಸಂಘಟನೆಯ ಬಲದಿಂದ ಬ್ರಾಹ್ಮಣರ ಸ್ಥಿತಿ ಸುಧಾರಿಸಿದೆ

ವರದಿ : ಕೆ.ಜಿ.ವೈದ್ಯ,ಕುಂದಾಪುರ

ಕುಂಭಾಸಿ ಆನೆಗುಡ್ಡೆಯಲ್ಲಿ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 27ನೇ ವಾರ್ಷಿಕಾಧಿವೇಶನ

ಕುಂದಾಪುರ : ಪ್ರಾಚೀನ ಭಾರತದಲ್ಲಿ ರಾಜಕೀಯ ಸಂಘರ್ಷಗಳು ಉಂಟಾದಾಗ ವಿಧ್ವಾಂಸರಾದ ಬ್ರಾಹ್ಮಣರ ಬ್ರಹ್ಮ ಸಭೆ ನಡೆಸಿ ರಾಜ ಅಥವಾ ಸರ್ಕಾರಕ್ಕೆ ನ್ಯಾಯ ಮಾರ್ಗ ತಿಳಿಸುವ ಪದ್ಧತಿ ಇತ್ತು. ಆದರೆ, ಇಂದು ಬ್ರಾಹ್ಮಣರ ಸಮಸ್ಯೆಗಳನ್ನೇ ಸರ್ಕಾರಕ್ಕೆ ಅಹವಾಲು ಸಲ್ಲಿಸುವ ಕಾಲ ಬಂದಿದೆ. ಬ್ರಾಹ್ಮಣ್ಯ, ಆಚಾರ ಮತ್ತು ವಿಚಾರಗಳಿಗೇ ಸಂಘರ್ಷ ಬಂದ ಕಾಲವಿದು. ಇಂತಲ್ಲಿ ಬ್ರಾಹ್ಮಣರು ಸಂಘಟನೆಯನ್ನು ಬಲಪಡಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಪರಿಷತ್ ಮುಖ್ಯ ಪಾತ್ರ ವಹಿಸಬೇಕಾಗಿದೆ ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಹೇಳಿದರು.
ಆನೆಗುಡ್ಡೆಯ ಶ್ರೀ ವಿನಾಯಕ ಸಭಾಗೃಹದಲ್ಲಿ ನಡೆದ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 27 ನೇ ವಾರ್ಷಿಕ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದೀಗ ಒಳ್ಳೆಯ ದಿನಗಳು ಬರುತ್ತಿವೆ ಎಂದು ತಿಳಿಸಿದ ಅವರು, ಗಂಗಾ ಶುದ್ಧೀಕರಣ, ತತ್ವಜ್ಞಾನಿ ಶ್ರೀ ಆದಿ ಶಂಕರರ ಮೂರ್ತಿ ಸ್ಥಾಪನೆಯ ಮೂಲಕ ಅವರ ತತ್ವಗಳ ಪ್ರಸಾರ, ಅವತಾರ ಪುರುಷ ಶ್ರೀ ರಾಮನ ಆಲಯ ನಿರ್ಮಾಣ ಇತ್ಯಾದಿಗಳ ಮೂಲಕ ನಮ್ಮ ದೇಶದ ಸಾತ್ವಿಕ ಪರಂಪರೆಯ ಪುನರುಜ್ಜೀವನ ಕಾಲ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ವಿಶೇಷ ಉಪನ್ಯಾಸ ನೀಡಿದ ಪಾಂಡೇಶ್ವರದ ಡಾ. ವಿದ್ವಾನ್ ವಿಜಯ ಮಂಜರು ಮಾತನಾಡಿ, ದೇಶದಲ್ಲಿ ಸುಮಾರು 10 ವರ್ಷಗಳಿಂದೀಚೆಗೆ ಬ್ರಾಹ್ಮಣ ಸಂಘಟನೆಗಳು ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರಾರಂಭವಾಯಿತು. ಎಲ್ಲ ತೊಂದರೆಗಳಿಗೂ ಬ್ರಾಹ್ಮಣರೇ ಕಾರಣ, ಅವರು ಮುಂದುವರೆದವರು ಎಂಬ ವ್ಯವಸ್ಥಿತ ಪಿತೂರಿಯಿಂದಾಗಿ ಬ್ರಾಹ್ಮಣರು ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ಬಂದಿತ್ತು.
ಇಂತಹ ಸನ್ನಿವೇಶಗಳಲ್ಲೆಲ್ಲಾ ಬ್ರಾಹ್ಮಣ ಸಮುದಾಯ ಕ್ಷಾತ್ರ ತೇಜಸ್ಸಿನಿಂದ ಸೆಟೆದು ನಿಂತು ವಿರೋಧಿಗಳನ್ನು ಮಣಿಸಿದ ಉದಾಹರಣೆ ಚರಿತ್ರೆಯಲ್ಲಿ ಸಾಕಷ್ಟಿದೆ. ಈಗಲೂ ಹಾಗೇ ಆಗಿದೆ. ಇಂದು ತಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಳ್ಳಲು ಯಾರೂ
ಹಿಂಜರಿಯುವುದಿಲ್ಲ. ಇದೆಲ್ಲಾ ಸಂಘಟನೆಯ ಪರಿಣಾಮ ಎಂದು ವಿವರಿಸಿದರು.
ಬ್ರಾಹ್ಮಣರು ಏನಾದರೂ ಕೇಳಿದರೆ ಅದನ್ನು ನಿರ್ಲಕ್ಷಿಸಲಾಗುತ್ತಿತ್ತು. ಆದರೆ ಇಂದು ಬ್ರಾಹ್ಮಣರ ಧ್ವನಿ ಸರ್ಕಾರಕ್ಕೂ ಕೇಳತೊಡಗಿದೆ. ಬ್ರಾಹ್ಮಣರ ಬಗ್ಗೆ ಹಗುರವಾಗಿ ಮಾತಾಡಲು ಇಂದು ಇತರರು ಯೋಚಿಸುವ ಸ್ಥಿತಿ ಬಂದಿದೆ. ಬ್ರಾಹ್ಮಣ ಸಂಘಟನೆಯಲ್ಲಿ ಇಷ್ಟೆಲ್ಲಾ ಧನಾತ್ಮಕ ಅಂಶಗಳಿದ್ದರೂ ಕೆಲವು ಋಣಾತ್ಮಕ ವಿಷಯಗಳೂ ಇವೆ. ತಳ ಮಟ್ಟದಲ್ಲಿ ಸಂಘಟನೆಯನ್ನು ಬಲಗೊಳಿಸಿ, ಆ ಶಕ್ತಿಯ ಮೇಲ್ಮುಖ ಹರಿವು ಉಂಟಾದಾಗ ಬ್ರಾಹ್ಮಣರ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಸಂಶಯವಿಲ್ಲ. ನಮ್ಮ ಸಂಘಟನೆಗೆ ಇಂದು ಆರ್ಥಿಕ ಅಡಚಣೆಯಿಲ್ಲ. ಆದರೆ ಆಧ್ಯಾತ್ಮಿಕ ಅನುಷ್ಠಾನದ ಕೊರತೆ ಇದೆ. ಅದನ್ನು ಕಿರಿಯ ಜನಾಂಗದವರಿಂದ ತುಂಬಿಸಿ ಬೆಂಬಲಿಸಿದರೆ, ಬ್ರಾಹ್ಮಣರು ಶಕ್ತಿವಂತರಾಗುತ್ತಾರೆ. ಗಾಯತ್ರಿ ಮಂತ್ರಾನುಷ್ಠಾನ ಮತ್ತು ತಾಯಂದಿರ ಬೆಂಬಲ ಇಲ್ಲಿ ಬಹು ಮುಖ್ಯವಾಗುತ್ತದೆ ಎಂದು ಡಾ. ಮಂಜರು ವಿಷದಪಡಿಸಿದರು
.

ಮುಖ್ಯ ಅಭ್ಯಾಗತರಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಕೃಷ್ಣಾನಂದ ಚಾತ್ರ ಆಗಮಿಸಿ ಶುಭಕೋರಿದರು.

ಕರ್ಣಾಟಕ ಬ್ಯಾಂಕಿನ ನಿರ್ದೇಶಕ ಬಾಲಕೃಷ್ಣ ಅಲ್ಸೆ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಷಯ ತಜ್ಞ, ಪತ್ರಕರ್ತ, ಈ ಸಾಲಿನ ಹಿರಿಯ ನಾಗರಿಕ ರಾಜ್ಯ ಪ್ರಶಸ್ತಿ ಪುರಸ್ಕೃತ ಎಸ್. ಜನಾರ್ದನ ಮರವಂತೆ, ಖ್ಯಾತ ಲೇಖಕಿ, ಅನುವಾದಕಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪಾರ್ವತಿ ಜಿ. ಐತಾಳ್, ಪ್ರತಿಷ್ಠಿತ ಕ್ಯಾ0ಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ,
ಆನೆಗುಡ್ಡೆ ಶ್ರೀ ವಿನಾಯಕ ದೇವಳದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಸಭಾಂಗಣ ಮಾಲೀಕ ರವಿರಾಜ್ ಉಪಾಧ್ಯಾಯ ಇವರುಗಳನ್ನು ಸನ್ಮಾನಿಸಲಾಯಿತು.
ವಿಪ್ರವಾಣಿ ಪ್ರಾಯೋಜಕ ವಲಯದ ಪರವಾಗಿ ಬಸ್ರೂರು ವಲಯಾಧ್ಯಕ್ಷ ನಾಗರಾಜ ಅಡಿಗ, ಮಕ್ಕಿಮನೆ, ಹಾಗೂ ವಿವಿಧ ವಲಯಗಳ ವಿಶೇಷ ಸಾಧಕರು, ಪ್ರತಿಭಾವಂತರನ್ನು
ಮಹಾ ಪೋಷಕರು, ಪೋಷಕರು, ದಾನಿಗಳನ್ನು ಗೌರವಿಸಲಾಯಿತು.

ಪರಿಷತ್ ನ ಮುಖವಾಣಿ ‘ವಿಪ್ರವಾಣಿ’ ತ್ರೈಮಾಸಿಕ ಸಂಚಿಕೆಯನ್ನು ಡಾ. ವಿದ್ವಾನ್ ವಿಜಯ ಮಂಜರು ಬಿಡುಗಡೆಗೊಳಿಸಿದರು.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಬಿ. ಎಸ್. ಅನಂತಪದ್ಮನಾಭ ಬಾಯರಿ ಬೆಳ್ವೆಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪರಿಷತ್ ಗೌರವಾಧ್ಯಕ್ಷ ರಾಘವೇಂದ್ರ ಅಡಿಗ, ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಗಣೇಶ್ ರಾವ್, ಯುವ ವೇದಿಕೆ ಅಧ್ಯಕ್ಷ ಶ್ರೀಕರ ಪುರಾಣಿಕ ಇದ್ದರು.

ಪರಿಷತ್ ನ ವಾರ್ಷಿಕ ವರದಿ, ಆಯ – ವ್ಯಯ ವರದಿಗಳನ್ನು ಓದಿ ಅಂಗೀಕರಿಸಲಾಯಿತು.
ರೇಶ್ಮಾ ಮತ್ತು ಮಹಿಮಾ ಪ್ರಾರ್ಥಿಸಿದರು. ಹಳ್ಳಿ ಶ್ರೀನಿವಾಸ ಭಟ್ ವೇದ ಘೋಷ ಮಾಡಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ ನಾಗೂರು ಸ್ವಾಗತಿಸಿ ಪ್ರಸ್ತಾವನೆಗೈದರು. ವಿಪ್ರವಾಣಿ ಸಂಪಾದಕ ಪ್ರೊ. ಶಂಕರ ರಾವ್ ಕಾಳಾವರ, ಅಶೋಕ್ ಕುಮಾರ್ ಹೊಳ್ಳ ಮತ್ತು ಹಳ್ಳಿ ಶ್ರೀನಿವಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ಉಡುಪ ವಂದಿಸಿದರು.