ಶ್ರೀನಿವಾಸಪುರ ತಾಲ್ಲೂಕು ಭಾಷಾ ಸಾಮರಸ್ಯಕ್ಕೆ ಮಾದರಿ ಆಗಿದೆ: ಎಲ್.ಗೋಪಾಲಕೃಷ್ಣ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ತಾಲ್ಲೂಕು ಭಾಷಾ ಸಾಮರಸ್ಯಕ್ಕೆ ಮಾದರಿ ಆಗಿದೆ. ಇಲ್ಲಿನ ಜನರ ಆಡು ಭಾಷೆ ತೆಲುಗಾದರೂ ಕನ್ನಡವನ್ನು ಹೃದಯದ ಭಾಷೆಯಾಗಿ ಸ್ವೀಕರಿಸಿದ್ದಾರೆ. ಕನ್ನಡ ಪರ ನಿಲುವು ತಳೆದಿದ್ದಾರೆ ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ ಹೇಳಿದರು.
ತಾಲ್ಲೂಕಿನ ದಳಸನೂರು ಗ್ರಾಮದಲ್ಲಿ ಗ್ರಾಮಸ್ಥರ ವತಿಯಿಂದ ಗುರುವಾರ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾಷೆ ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು. ಭಾಷೆ ಬದುಕು ಕೊಟ್ಟಾಗ ಮಾತ್ರ ಜನ ಅದನ್ನು ಅಪ್ಪಿಕೊಳ್ಳುತ್ತಾರೆ. ಇಲ್ಲವಾದರೆ ಬದುಕಿಗಾಗಿ ಅನ್ಯ ಭಾಷೆಗಳತ್ತ ಮುಖ ಮಾಡುತ್ತಾರೆ. ಈ ಪರಿಸ್ಥಿತಿ ಬದಲಾಗಬೇಕು. ಕನ್ನಡ ನಾಡಿನಲ್ಲಿ ಕನ್ನಡಿಗರು ಆತಂಕ ರಹಿತ ಜೀವನ ನಡೆಸಲು ಪೂರಕವಾದ ವಾತಾವರಣ ಸೃಷ್ಟಿಯಾಗಬೇಕು ಎಂದು ಹೇಳಿದರು.
ಗಡಿ ಭಾಗದ ಜನರು ಕನ್ನಡ ಭಾಷೆ ಆರಾಧಿಸಿದರೆ ಸಾಲದು, ದಿನ ನಿತ್ಯದ ವ್ಯವಹಾರದಲ್ಲಿ ಬಳಸಬೇಕು. ಕನ್ನಡೇತರರಿಗೆ ಕನ್ನಡ ಕಲಿಸಬೇಕು. ಜನರ ಬದುಕಿನಲ್ಲಿ ಕನ್ನಡ ಭಾಷೆ ಜೀವಂತವಾಗಿರಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರು ಕನ್ನಡ ಪರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಭಾಷಾಭಿವೃದ್ಧಿಯೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಸಾಂಘಿಕವಾಗಿ ಜಾರಿಗೆ ತರಬೇಕು. ಯಾವುದೇ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ಇರಬೇಕು. ಬದುಕಿಗಾಗಿ ಏನೆಲ್ಲ ಕಲಿತರೂ ಕನ್ನಡ ಭಾಷೆ ದೂರ ಮಾಡಬಾರದು ಎಂದು ಹೇಳಿದರು.
ಈಚೆಗೆ ಅಕಾಲಿಕ ಮರಣ ಹೊಂದಿದ ಹೃದಯವಂತ ಚಿತ್ರನಟ ಪುನೀತ್ ರಾಜಕುಮಾರ್, ಯುವ ಸಮುದಾಯಕ್ಕೆ ಉತ್ತಮ ಆದರ್ಶವಾಗಿದ್ದಾರೆ. ಅವರ ಕನ್ನಡ ಪ್ರೇಮ ಹಾಗೂ ಸಮಾಜ ಸೇವಾ ಕಾರ್ಯ ಮಾದರಿಯಾಗಿದೆ ಎಂದರು.
ಸಂಜೆ ಭುವನೇಶ್ವರಿ ಮೆರವಣಿಗೆ ಏರ್ಪಡಿಲಾಗಿತ್ತು. ಸ್ಥಳೀಯ ಜಾನಪದ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯದರ್ಶಿ ವೀರಭದ್ರಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಗದೀಶ್, ಮಾಜಿ ಸದಸ್ಯರಾದ ಬಿ.ಶ್ರೀನಿವಾಸಗೌಡ, ವೀರಭದ್ರರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹರಿನಾಥ್, ಎಸ್ಡಿಎಂಸಿ ಅಧ್ಯಕ್ಷ ನಾಗಭೂಷಣರೆಡ್ಡಿ, ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕ ಬಾಲಾಜಿ, ರಾಜ್ಯೋತ್ಸವ ಸಮಿತಿ ಸದಸ್ಯ ರವಿಚಂದ್ರ, ಎಸ್ಇಎಸ್ಸಿಎಸ್ ಅಧ್ಯಕ್ಷ ಜಿ.ಅಶ್ವತ್ಥ್, ಮುಖಂಡ ನಂಜುಂಡಗೌಡ ಇದ್ದರು.