ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಶ್ರೀನಿವಾಸಪುರ: ಸರ್ಕಾರ ಡಿಸಿಸಿ ಬ್ಯಾಂಕ್ ಅವ್ಯವಹಾರವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಅವ್ಯವಹಾರದಲ್ಲಿ ತೊಡಗಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ಜಿ.ಕೆ.ವೆಂಕಟಶಿವಾ ರೆಡ್ಡಿ ಆಗ್ರಹಿಸಿದರು.
ಪಟ್ಟಣದ ಜೆಡಿಎಸ್ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಜಿ.ಗೋವಿಂದಗೌಡ ಈಚೆಗೆ ಕೋಲಾರದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹಾಗೂ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಸಚಿವರು ಬ್ಯಾಂಕ್ ಅವ್ಯವಹಾರ ಕಂಡು, ಸರಿಪಡಿಸಲು ಹೋರಾಟ ನಡೆಸುತ್ತಿದ್ದಾರೆ. ಅದಕ್ಕೆ ನನ್ನ ಬೆಂಬಲವೂ ಇದೆ’ ಎಂದು ಹೇಳಿದರು.
‘ನಾನು ಡಿಸಿಸಿ ಬ್ಯಾಂಕ್ ಹಿತೈಷಿ. ಬ್ಯಾಲಹಳ್ಳಿ ಗೋವಿಂದಗೌಡ ಅವರನ್ನು ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡುವಲ್ಲಿ ನನ್ನ ಪ್ರಯತ್ನವೂ ಇದೆ. ಬ್ಯಾಂಕ್ ವ್ಯವಹಾರವನ್ನು ₹.50 ಕೋಟಿಯಿಂದ ₹ 1200 ಕೋಟಿಗೆ ಕೊಂಡೊಯ್ಯಲಾಗಿದೆ ಎಂದು ಗೌಡರು ಹೇಳುತ್ತಾರೆ. ಅದನ್ನು ಅವರು ಮಾತ್ರವಲ್ಲ, ಆ ಜಾಗದಲ್ಲಿ ಯಾರೆ ಇದ್ದರೂ ಮಾಡುತ್ತಿದ್ದರು’ ಎಂದು ಅಭಿಪ್ರಾಯಪಟ್ಟರು.
‘ಅರ್ಹ ಫಲಾನುಭವಿಗಳಿಗೆ ಸಾಲ ನೀಡುವುದರ ಬಗ್ಗೆ ನನ್ನ ತಕರಾರಿಲ್ಲ. ಡಿಸಿಸಿ ಬ್ಯಾಂಕ್ ಕೇಂದ್ರ ಸರ್ಕಾರದಿಂದ ನಬಾರ್ಡ್ ಮೂಲಕ ಹಣ ಪಡೆಯುತ್ತದೆ. ಆದರೆ ಕೆಲವು ಮುಖಂಡರು ತಮ್ಮ ಮನೆಯಿಂದ ಹಣ ತಂದು ಹಾಕಿದಂತೆ ಬೀದಿಯಲ್ಲಿ ನಿಂತು ರಾಜಕೀಯ ಮಾಡುತ್ತಿದ್ದಾರೆ. ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ ನನ್ನನ್ನು ಕೆಲಸವಿಲ್ಲದವನು ಎಂದೆಲ್ಲಾ ಮಾತನಾಡುವುದು ಸರಿಯಲ್ಲ. ಕ್ಷೇತ್ರದಲ್ಲಿ ಅರ್ಧದಷ್ಟು ಜನ ನನ್ನ ಪರ ಇದ್ದಾರೆ. ಅವರ ಯೋಗಕ್ಷೇಮ ಕಡೆ ಗಮನ ಕೊಡಬೇಕಾದುದು ಆದ್ಯಕರ್ತವ್ಯ’ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಬ್ಯಾಂಕ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಹೇಳಿದ್ದಾರೆ. ಭ್ರಷ್ಟಾಚಾರ ನಡೆಯದಿದ್ದ ಮೇಲೆ ತನಿಖೆ ನಡೆಸದಂತೆ ವ್ಯಾಯಾಲಯದಿಂದ ತಡೆಯಾಜ್ಞೆ ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.
ತಾಲ್ಲೂಕಿನ ಗೌನಿಪಲ್ಲಿ ಸಹಕಾರ ಸಂಘದಲ್ಲಿ ₹ 5.85 ಕೋಟಿ ಸಲ ಮನ್ನಾ ಮಾಡಲಾಗಿದೆ. ಆದರೆ ₹ 1.69 ಕೋಟಿ ಮಾತ್ರ ರೈತರಿಗೆ ಸೇರಿದೆ. ಉಳಿದ ಹಣ ಏನಾಯಿತು ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಅಲ್ಲಿ ಸುಮಾರು ₹ 4 ಕೋಟಿ ಅವ್ಯವಹಾರ ನಡೆದಿದೆ. ಸಂಘದಲ್ಲಿ ನಡೆದಿರುವ ಅವ್ಯವಹಾರ ಬಯಲಿಗೆ ಬರುವ ಭಯದಿಂದ 2013 ರಲ್ಲಿ ಸಂಘದ ಕಾರ್ಯದರ್ಶಿಯಾಗಿದ್ದ ಶಂಕರರೆಡ್ಡಿ ಹಾಗೂ 2018 ರಲ್ಲಿ ಕಾರ್ಯದರ್ಶಿಯಾಗಿದ್ದ ಜಯರಾಮ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದರು.
ಜಯರಾಮ್ ಕೊಲೆಯಾಗುವುದಕ್ಕೆ ಮೊದಲು ಕೆಲವು ವ್ಯಕ್ತಿಗಳಿಂದ ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಡೆತ್ ನೋಟ್ ಬರೆದಿದ್ದಾರೆ. ಅದನ್ನು ಪೊಲೀಸರಿಗೆ ನೀಡಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಜೈಲು ಸೇರುವ ಸಂಭವ ಇದೆ ಎಂದು ಹೇಳಿದರು.
ಇದು ಒಂದು ಸಂಘದ ಕತೆಯಾದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 214 ಸಂಘಗಳಿವೆ. ಸಾಲ ಮನ್ನಾ ಯೋಜನೆಯಲ್ಲಿ ಶೇ 75 ರಷ್ಟು ದುರುಪಯೋಗ ನಡೆದಿದೆ. ಸಾಲದ ನಿಯಮಗಳನ್ನು ಗಾಳಿಗೆ ತೂರಿ, ಜಿಲ್ಲೆಯಲ್ಲಿ ಕೆಲವು ಮಾಜಿ ಹಾಗೂ ಹಾಲಿ ಶಾಸಕರ ಕುಟುಂಬಗಳು ನಡೆಸುವ ಸಹಕಾರ ಸಂಘಗಳಿಗೆ ₹ 8 ರಿಂದ 10 ಕೋಟಿ ಸಾಲ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದ್ಯಸರಾದ ಅಪೂರ್ ರಾಜು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತೂಪಲ್ಲಿ ನಾರಾಯಣಸ್ವಾಮಿ , ಜೆಡಿಎಸ್ ಮುಖಂಡರಾದ ಏಜಾಜ್ ಅಹ್ಮದ್, ನಾಸೀರ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.