ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ : ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳು ಹಾಗೂ ನೂತನ ತಂತ್ರಜ್ಞಾದ ಬಗ್ಗೆ ರೈತರಿಗೆ ಅರಿವು ಮೂಡಿಸಿ , ಗ್ರಾಮ ಪಂಚಾಯತಿ , ಗ್ರಾಮ ಸಭೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಿಳಿಸಿದರು .
ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೃಷಿ ಇಲಾಖೆ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ , ಕೀಟನಾಶಕಗಳು ಹಾಗೂ ರಸಗೊಬ್ಬರಗಳನ್ನು ಮಾರಾಟ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಜಿಲ್ಲೆಯಲ್ಲಿ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚು ಮಾಡಿ , ಪಾರಂಪರಿಕ ಸಾವಯವ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆಯಲು ಹೆಚ್ಚಿನ ಒತ್ತು ನೀಡಿ . ಸಾವಯವದ ಮೂಲಕ ಬೆಳೆದ ಬೆಳಗಳಿಗೆ ವಿಶ್ವ ಮಟ್ಟದಲ್ಲಿ ಹೆಚ್ಚಿನ ಬೇಡಿಕೆಯಿದೆ . ಬೇವಿನಸೊಪ್ಪಿನ ಬೆಳೆಯ ಬಗ್ಗೆ ರೈತರಿಗೆ ಅರಿವು ಮೂಡಿಸಿ ಎಂದು ಅವರು ತಿಳಿಸಿದರು . ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರೂಪದೇವಿ ಅವರು ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶ 2,09 566 ಹೆಕ್ಟರ್ ಪ್ರದೇಶ , ಕೃಷಿ ಬೆಳೆಗಳ ವಿಸ್ತೀರ್ಣ 97,900 ಹೆಕ್ಟೇರ್ , ತೋಟಗಾರಿಕೆ ಬೆಳೆಗಳ ವಿಸ್ತೀರ್ಣ 1 ಲಕ್ಷ ಹೆಕ್ಟರ್ ಹಾಗೂ ರೇಷ್ಮೆ ಬೆಳೆ ವಿಸ್ತಿರ್ಣ 19,329 ಹೆಕ್ಟೇರ್ ಪ್ರದೇಶವಿದೆ . ಜಿಲ್ಲೆಯಲ್ಲಿ ಒಟ್ಟು 8,19,509 ಜಾನುವಾರುಗಳಿವೆ . ಕಳೆದ 2 ವರ್ಷಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ . FRUITS ಯೋಜನೆಯಲ್ಲಿ ಜಿಲ್ಲೆಯ 1,94,343 ರೈತರು ನೊಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು FRUITS ನಲ್ಲಿ ಶೇಕಡಾ 100 ರಷ್ಟು ರೈತರನ್ನು ನೋಂದಾಯಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು . ಕೋಲಾರ ಲೋಕ ಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಕೃಷಿ ಯಂತ್ರೋಪಕರಣಗಳ ಸಹಾಯಧನ ಯೋಜನೆಯಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ನೀಡಿ , ಹೋಬಳಿಯ ಮಟ್ಟದಲ್ಲಿ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಬೇಕು . ದೇಶದಲ್ಲಿ ಯಾವ ರಾಜ್ಯದಲ್ಲಿ ಯಾವ ರೀತಿಯ ಬೆಳೆಯನ್ನು ಬೆಳೆಯುತ್ತಿದ್ದಾರೆ ಯಾವ ಬೆಳೆಗೆ ಬೇಡಿಕೆ ಹೆಚ್ಚಿದೆ ಎಂಬುವುದರ ಮಾಹಿತಿಯನ್ನು ರೈತರಿಗೆ ನೀಡಬೇಕು ಎಂದು ತಿಳಿಸಿದರು . ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ನೀರಿನಿಂದ ತುಂಬಾ ಕೆರೆಗಳು ತುಂಬಿವೆ . ಜಿಲ್ಲೆಯಲ್ಲಿ ಇದುವರೆಗೂ 200 ಎಕರೆ ಬೆಳೆ ಹೆಚ್ಚಿನ ಮಳೆಯಿಂದ ನಾಶವಾಗಿದೆ . ಎ.ಪಿ.ಎಂ.ಸಿ. ಮಾರುಕಟ್ಟೆಗೆ ಜಾಗವನ್ನು ಗುರುತಿಸಲಾಗಿದೆ ಎಂದು ತಿಳಿಸಿದರು . ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಉಕೇಶ್ ಕುಮಾರ್ , ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು .