ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡಿ ರೈತರ ಆದಾಯ ದ್ವಿಗುಣಗೊಳಿಸಬೇಕು – ಶೋಭಾ ಕರಂದ್ಲಾಜೆ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ರೈತರ ಬೆಳೆದ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ತಿಳಿಸಿದರು . ಇಂದು ಐ.ಸಿ.ಎ.ಆರ್ . ಕೃಷಿ ವಿಜ್ಞಾನ ಕೇಂದ್ರದಲ್ಲಿ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ , ಬಾಗಲಕೋಟೆ , ಭಾರತೀಯ ಕೃಷಿ ಅನುಸಂಧಾನ ಪರಿಷತ್ತು , ನವದೆಹಲಿ , ಐ.ಸಿ.ಎ.ಆರ್ . ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ಕೆವಿಕೆ ನೂತನ ಆಡಳಿತ ಭವನದ ಉದ್ಘಾಟನೆ ಮಾಡಿ ಮಾತನಾಡಿ , ನೀರು ಹಾಗೂ ಮಣ್ಣಿನ ಗುಣಮಟ್ಟದ ಪರೀಕ್ಷೆಗಳನ್ನು ಕೃಷಿ ವಿಜ್ಞಾನ ಕಟ್ಟಡಗಳಲ್ಲಿ ನಡೆಸಲಾಗುತ್ತದೆ . ಮಣ್ಣಿನ ಪರೀಕ್ಷೆ ಮಾಡಿ ಯಾವ ಮಣ್ಣಿನಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎಂದು ಪರೀಕ್ಷಿಸಿ ಬೆಳೆಯುವುದರಿಂದ ಉತ್ತಮ ಬೆಳೆ ಬೆಳೆಯಬಹುದು ಎಂದು ಅವರು ತಿಳಿಸಿದರು . ಸಸ್ಯಗಳಿಗೆ ಬರುವ ರೋಗದ ಮೂಲವನ್ನು ಕಂಡುಹಿಡಿದು ಪರಿಹರಿಸಬೇಕು . ಮಣ್ಣಿನ ಆರೋಗ್ಯ ಪರೀಕ್ಷೆ ಕಾರ್ಡ್ ಗಳನ್ನು ರೈತರಿಗೆ ನೀಡಲಾಗುತ್ತಿದೆ . ಕೋಲಾರದಲ್ಲಿ ಫ್ಲೋರೈಡ್ ಇರುವ ನೀರು ಹೆಚ್ಚಾಗಿದೆ . ಜಿಲ್ಲೆಯ ರೈತರು ಮಳೆ ಆಧಾರಿತ ಕೃಷಿಯನ್ನು ಅವಲಂಬಿಸಿದ್ದಾರೆ . ಮಳೆ ನೀರನ್ನು ಕೃಷಿ ಹೊಂಡಗಳಲ್ಲಿ ಸಂಗ್ರಹಿಸಿ ಬಳಸುತ್ತಾರೆ . ಇಸ್ರೇಲ್ ತಂತ್ರಜ್ಞಾನವನ್ನು ಬಳಸಿ ಜಿಲ್ಲೆಗಳಲ್ಲಿ ಕೃಷಿಯನ್ನು ಮಾಡುತ್ತಾರೆ . ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಡಿಮೆ ಪ್ರದೇಶದಲ್ಲಿ ಹೆಚ್ಚು ಉತ್ಪಾದನೆಯನ್ನು ಮಾಡಬೇಕು ಎಂದು ತಿಳಿಸಿದರು .
ಈ ವರ್ಷ ಕೇಂದ್ರ ಸರ್ಕಾರ 1.31 ಲಕ್ಷ ಕೋಟಿಯನ್ನು ಬಜೆಟ್ ನಲ್ಲಿ ಕೃಷಿಗೆ ನೀಡಲಾಗಿದೆ . ಟೋಮೆಟೊ ಬೆಳೆಯನ್ನು ದೇಶ – ವಿದೇಶಗಳಲ್ಲಿ ರಫ್ತು ಮಾಡಬೇಕು . ದೇಶದಲ್ಲಿ 305 ಮೆಟ್ರಿಕ್ ಮಿಲಿಯನ್ ಟನ್ ದವಸದಾನ್ಯ , 325 ಮೆಟ್ರಿಕ್ ಮಿಲಿಯನ್ ಟನ್ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುತ್ತಿದ್ದೇವೆ . ಎಣ್ಣೆಕಾಳುಗಳ ಉತ್ಪಾದನೆಯಲ್ಲಿ ನಾವು ಸ್ವಾವಲಂಬನೆಯನ್ನು ಸಾಧಿಸಬೇಕಿದೆ . 2023 ರನ್ನು ವಿಶ್ವ ಸಂಸ್ಥೆಯು ಭಾರತದ ಕೋರಿಕೆಯ ಮೇರೆಗೆ ಸಿರಿಧಾನ್ಯಗಳ ವರ್ಷ ಎಂದು ಆಚರಿಸಲಾಗುತ್ತಿದೆ . ರೈತರು ತಮ್ಮ ಕೃಷಿಯ ಜೊತೆಗೆ ಜೇನು , ಮೀನು , ಜಾನುವಾರುಗಳ ಸಾಕಾಣಿಕೆಯನ್ನು ಮಾಡಬೇಕು . ಬೆಳೆ ವಿಮೆ ಯೋಜನೆ ಮತ್ತು ಇತರೆ ಎಲ್ಲಾ ಯೋಜನೆಗಳನ್ನು ರೈತರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಮುನಿಸ್ವಾಮಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ , ಜಿಲ್ಲೆಯ ರೈತರು ಶ್ರಮ ಜೀವಿಗಳು . ದೇಶದ ಬೆನ್ನೆಲುಬು ರೈತ . ಅವರ ಆದಾಯ ದ್ವಿಗುಣಗೊಳಿಸಲು ಪ್ರಧಾನಮಂತ್ರಿಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ . ಇಸ್ರೇಲ್ ಪ್ರಪಂಚಕ್ಕೆ ಮಾದರಿಯಾಗಿದ್ದರೆ , ಕೃಷಿಯಲ್ಲಿ ಕೋಲಾರ ದೇಶಕ್ಕೆ ಮಾದರಿಯಾಗಿದೆ . ಅಧಿಕಾರಿಗಳು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು . ಮಾವು ಮತ್ತು ಇತರೆ ಬೆಳೆಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ದೆಹಲಿಗೆ ಕಳುಹಿಸಲು ಕಿಸಾನ್ ರೈಲುನ್ನು ದೆಹಲಿಗೆ ಬಿಡಲಾಯಿತು . 40 ಎಕರೆ ಪ್ರದೇಶದಲ್ಲಿ ಎ.ಪಿ.ಎಂ.ಸಿ. ಯನ್ನು ಹೊಸದಾಗಿ ಮಾಡಿ ಕೋಲ್ಡ್ ಸ್ಟೋರೇಜ್ ಗಳನ್ನು ಸ್ಥಾಪಿಸಲಾಗುವುದು . ಪಂಚಾಯಿತಿಗೊಂದು , ಎಫ್ ಪಿಓ ಅನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು . ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಶ್ರೀನಿವಾಸಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ,, ರೈತರ ಪ್ರತಿ ಬೆಳೆಗೂ ಕನಿಷ್ಠ ಬೆಲೆಯನ್ನು ನಿಗದಿಪಡಿಸಬೇಕು . ರೈತರಿಗೆ ಉತ್ತಮ ಆದಾಯ ತಂದುಕೊಡುವ ಯೋಜನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ತಿಳಿಸಿದರು . ವಿಧಾನಪರಿಷತ್ ಶಾಸಕರಾದ ವೈ ಎ ನಾರಾಯಣಸ್ವಾಮಿ ಅವರು ಮಾತನಾಡಿ , ಎರಡು ಮೂರು ರಾಜ್ಯಕ್ಕೆ ಆಗುವಷ್ಟು ಹಣ್ಣು – ತರಕಾರಿಗಳನ್ನು ಕೋಲಾರ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ . 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತೇವೆ . ಒಂದು ಬೆಳೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಯ ಟೊಮೊಟೊ ಬೆಳೆಯನ್ನು ಆಯ್ಕೆ ಮಾಡಲಾಗಿದೆ . ಹನಿ ನೀರಾವರಿ ಪದ್ಧತಿಯನ್ನು ಕೋಲಾರ ಜಿಲ್ಲೆಯಲ್ಲಿ ಹೆಚ್ಚು ಅಳವಡಿಸಿಕೊಳ್ಳಲಾಗಿದೆ . ಪಿಎಂ ಕಿಸಾನ್ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು . ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಗೋವಿಂದರಾಜು , ಐ.ಸಿ.ಎ.ಆರ್ ಕಾರ್ಯದರ್ಶಿಗಳು , ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ ಮತ್ತು ಮಹಾನಿರ್ದೇಶಕರಾದ ಡಾ . ತ್ರಿಲೋಚನ ಮೊಹಪಾತ್ರ , ಜಿಲ್ಲಾಧಿಕಾರಿಗಳಾದ ಡಾ.ಆರ್ ಸೆಲ್ವಮಣಿ , ಜಿಲ್ಲಾ ಪಂಚಾಯತ್ ಮುಖ್ ಕಾರ್ಯನಿರ್ವಹಣಾಧಿಕಾರಿಗಳಾದ ಉಕೇಶ್‌ ಕುಮಾರ್‌ , ನಗರಸಭಾ ಅಧ್ಯಕ್ಷರಾದ ಶ್ವೇತಾ ಆರ್ ಶಬರೀಶ್ , ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಓಂ ಶಕ್ತಿ ಚಲಪತಿ , ಸೇರಿದಂತೆ ಕೃಷಿ , ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮತ್ತು ರೈತರು ಉಪಸ್ಥಿತರಿದ್ದರು .