ಟೈಗರ್‌ ಬ್ಯಾಚ್‌ನಿಂದ ಮುಸ್ಸಂಜೆ ಮನ ವಯೋವೃದ್ಧರಿಗೆ ಹಾಸಿಗೆ ದಿಂಬು ವಿತರಿಸಿ ಶುಭ ಹಾರೈಕೆ – ಸೋಮಶಂಕರ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಕೋಲಾರ ನಾಗರಿಕ ಪೊಲೀಸ್ ಇಲಾಖೆಗೆ ೧೯೯೪ ಅ . ೫ ರಂದು ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾದ ಟೈಗರ್ ಬ್ಯಾಚ್ ಸವಿನೆನಪಿಗಾಗಿ ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮಕ್ಕೆ ಹಾಸಿಗೆ – ದಿಂಬು , ಜಮಖಾನ ಕೊಡುಗೆಯಾಗಿ ನೀಡಲಾಗಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಪಿಎಸ್‌ಐ ಸೋಮಶಂಕರ್‌ ತಿಳಿಸಿದರು . ಭಾನುವಾರ ನಗರದ ಪಿಸಿ ಬಡಾವಣೆಯ ಮುಸ್ಸಂಜೆ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಗರ್ ಬ್ಯಾಚ್‌ನ ಎಲ್ಲಾ ಪೊಲೀಸ್ ಸಿಬ್ಬಂದಿ ಪ್ರತಿವರ್ಷದಂತೆ ಈ ವರ್ಷವೂ ತಮ್ಮ ಸಂಭ್ರಮವನ್ನು ವೃದ್ಧರಿಗೆ ನೆರವಾಗುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿ ಮಾದರಿಯಾದರು . ಖುದ್ದು ಪೊಲೀಸ್ ಸಿಬ್ಬಂದಿಯೇ ಹಾಸಿಗೆ , ದಿಂಬು , ಜಮಖಾನ , ಹಾಸಿಗೆ ಹೊದಿಕೆಗಳನ್ನು ಕೋಲಾರ ನಗರದ ಮುಸ್ಸಂಜೆ ಮನ ವಯೋವೃದ್ಧರಿಗೆ ವಿತರಿಸಿ , ಅವರ ಅಶೀರ್ವಾದ ಪಡೆದರು . ಈ ಸಮಾಗಮದಲ್ಲಿ ಅವಿಭಜಿತ ಕೋಲಾರ ಜಿಲ್ಲೆ ವ್ಯಾಪ್ತಿಯ ಕೋಲಾರ , ಚಿಕ್ಕಬಳ್ಳಾಪುರ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ವೃದ್ಧರಿಗೆ ನೆರವಾದರು . ಕೆಲವು ಸಿಬ್ಬಂದಿ ತನ್ನ ನೆರವನ್ನು ಒದಗಿಸಿದ್ದರೂ , ಕರ್ತವ್ಯದ ಒತ್ತಡದಿಂದ ಬರಲಾಗಿಲ್ಲ ಎಂದು ಪಿಎಸ್‌ಐ ಸೋಮಶಂಕರ್‌ ತಿಳಿಸಿದರು . ಕೋಲಾರದ ಮುಸ್ಸಂಜೆ ಮನೆಯ ಮುಖ್ಯಸ್ಥರಾದ ಶಾಂತಕುಮಾರಿ ಅವರನ್ನು ಭೇಟಿ ಮಾಡಿ ಆಶ್ರಮಕ್ಕೆ ಅಗತ್ಯವಿರುವ ಮಾಹಿತಿ ಕೇಳಿದಾಗ ಅಲ್ಲಿರುವ ಮಕ್ಕಳು , ವಯೋವೃದ್ಧರಿಗೆ ಹಾಸಿಗೆ ದಿಂಬು ಅಗತ್ಯವಿರುವ ವಿಷಯ ತಿಳಿದು ಈ ನೆರವು ಒದಗಿಸಿದ್ದಾಗಿ ತಿಳಿಸಿದರು . ಸಂಭ್ರಮ ಸಡಗರವನ್ನು ದುಂದುವೆಚ್ಚದಿಂದ ಆಚರಿಸಿ ಹಣ ಪೋಲು ಮಾಡುವ ಬದಲಿಗೆ ಇಂತಹ ಅಗತ್ಯವಿರುವ ವೃದ್ಧಾಶ್ರಮ , ಅನಾಥಾಶ್ರಮಗಳಿಗೆ ನೆರವಾಗುವ ಸಾಮಾಜಿಕ ಕಾಳಜಿ ಎಲ್ಲರಲ್ಲೂ ಬರಲಿ ಎಂದು ಅವರು ಆಶಿಸಿದರು .
ಹಾಸಿಗೆ , ದಿಂಬು , ಜಮಖಾನ , ಹೊದಿಕೆ ಪಡೆದು ವಯೋ ವೃದ್ಧರು ಕೃತಜ್ಞತೆಯಿಂದ ಜನೀಡಿದ ಆಶೀರ್ವಾದ ಕಂಡು ಟೈಗರ್‌ ಬ್ಯಾಚ್ ಪೊಲೀಸ್ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದರು . ಈ ಸಂದರ್ಭದಲ್ಲಿ ೧೯೯೪ ಟೈಗರ್‌ ಬ್ಯಾಚ್ ಪೊಲೀಸ್ ಸ್ನೇಹಿತರು , ಮುಸ್ಸಂಜೆ ಮನಯ ವ್ಯವಸ್ಥಾಪಕರಾದ ವಕೀಲ ಕೆ.ಆರ್‌ . ಧನರಾಜ್ , ಶಾಂತಕುಮಾರಿ ಮತ್ತಿತರರು ಉಪಸ್ಥಿತರಿದ್ದರು .