ಶ್ರೀನಿವಾಸಪುರ: ಶುಕ್ರವಾರ ಸುರಿದ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಶುಕ್ರವಾರ ಸುರಿದ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯ ಹೊಡೆತಕ್ಕೆ ಶ್ರೀನಿವಾಸಪುರ ಸೇರಿದಂತೆ ಸಮೀಪದ ಹೆಬ್ಬಟ, ಚಲ್ದಿಗಾನಹಳ್ಳಿ, ಪನಸಮಾಕನಹಳ್ಳಿ ಗ್ರಾಮಗಳಲ್ಲಿ, ಮಳೆ ನೀರು ಮನೆಗಳಿಗೆ ನುಗ್ಗಿದೆ. ಶಾಲೆ ಹಾಗೂ ಕೆಲವು ಮನೆಗಳು ಬಿದ್ದುಹೋಗಿವೆ. ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ.
ಹೆಬ್ಬಟ ಗ್ರಾಮದಲ್ಲಿ 6 ಮನೆಗಳು ಕುಸಿದು ಬಿದ್ದಿವೆ. ಕೆಲವು ಮನೆಗಳ ಗೋಡೆಗಳು ಕುಸಿದಿವೆ. ಶುಕ್ರವಾರ ರಾತ್ರಿ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮನೆ ಕಳೆದುಕೊಂಡ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
‘ಗ್ರಾಮದ ಕೆಲವರು ಕೆರೆಗೆ ಹೋಗುತ್ತಿದ್ದ ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮನೆಗಳನ್ನು ನಿರ್ಮಿಸಿರುವುದರ ಪರಿಣಾಮವಾಗಿ ಈ ಪರಿಸ್ಥಿತಿ ಉಂಟಾಗಿದೆ. ಅನಿರೀಕ್ಷಿತ ಭಾರಿ ಮಳೆಯಿಂದಾಗಿ 6 ಮನೆಗಳು ಬಿದ್ದುಹೋಗಿವೆ. ಸಂತ್ರಸ್ತ ಕುಟುಂಗಳ ಸದಸ್ಯರಿಗೆ ಗ್ರಾಮದ ಆಸ್ಪತ್ರೆ ಆವರಣ, ಅಂಬೇಡ್ಕರ್ ಹಾಗೂ ವಾಲ್ಮೀಕಿ ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಊಟದ ವ್ಯವಸ್ಥೆಯೂ ಇದೆ. ನಿಯಮಾನುಸಾರ ಪರಿಹಾರ ನೀಡಲಾಗುವುದು’ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದರು.
ಶ್ರೀನಿವಾಸಪುರದ ಜಾಕೀರ್ ಹುಸೇನ್ ಮೊಹಲ್ಲಾದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುರು ಕೊಠಡಿಗಳು ಮಳೆಯಿಂದಾಗಿ ಶುಕ್ರವಾರ ರಾತ್ರಿ ಕುಸಿದು ಬಿದ್ದಿವೆ. ಶನಿವಾರ ಶಾಲೆ ತೆರೆಯಲು ಹೋದಾಗಿ ಘಟನೆ ಬೆಳಕಿಗೆ ಬಂದಿದೆ. ಶಾಲೆ ನೆಡೆಯುತ್ತಿದ್ದಾಗ ಘಟನೆ ಸಂಭವಿಸಿದ್ದರೆ ಭಾರಿ ಅನಾಹುತ ಉಂಟಾಗುತ್ತಿತ್ತು. ಬಿಇಒ ವಿ.ಉಮಾದೇವಿ, ಅಧಿಕಾರಿಗಳಾದ ಕೆ.ಸಿ.ವಸಂತ, ನಾಗರಾಜ್, ಮಹಮದ್ ಸಾದಿಕ್, ರೋಹಿನಾ ತಾಜ್, ಮಖ್ಯ ಶಿಕ್ಷಕಿ ರಿಯಾಜಾ ಖಾನಂ ಸ್ಥಳಕ್ಕೆ ಭೇಟಿ ನೀಡಿದ್ದರು.