ಕೋಲಾರ : ಲಿಂಗ , ಜಾತಿ , ಅಂತಸ್ತಿನ ಆದಾರದ ಮೇಲೆ ತಾರತಮ್ಯ ಮಾಡಬಾರದು . ಪ್ರತಿಯೊಬ್ಬರು ಸಮಾನರು : ಕೆ . ಆರ್ . ನಾಗರಾಜ್

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ : ಲಿಂಗ , ಜಾತಿ , ಅಂತಸ್ತಿನ ಆದಾರದ ಮೇಲೆ ತಾರತಮ್ಯ ಮಾಡಬಾರದು . ಪ್ರತಿಯೊಬ್ಬರು ಸಮಾನರಾಗಿದ್ದು , ಸಮಾನತೆ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ದಿವ್ಯ ಮಂತ್ರ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ . ಆರ್ . ನಾಗರಾಜ್ ಅವರು ತಿಳಿಸಿದರು . ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ವಿಕಲಚೇತನರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಆರೋಗ್ಯ ಇಲಾಖೆ , ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ , ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಹಿರಿಯ ನಾಗರಿಕರಲ್ಲಿ ವಿದ್ವತ್ತು ತುಂಬಿರುತ್ತದೆ . ಅನೇಕರು ತಮ್ಮ ಅನುಭವದಲ್ಲಿ ನೈಪುಣ್ಯತೆಯನ್ನು , ನಾವಿನ್ಯತೆಯನ್ನು ಹೊಂದಿರುತ್ತಾರೆ . ಇದರ ಸದುಪಯೋಗ ಸಮಾಜಕ್ಕೆ ದೊರೆಯಬೇಕು . ಎಲ್ಲಾ ನಾಗರಿಕರು ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳು ನಿಭಾಯಿಸಬೇಕು . ಕಾನೂನಿನಲ್ಲಿ ಸರ್ವರಿಗೂ ಸಮಪಾಲು ಸಮಬಾಳು ದೊರೆಯಬೇಕು . ಕಾನೂನಿನಲ್ಲಿ ಇರುವ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗಗಳು ತಮ್ಮದೇ ಆದ ಕರ್ತವ್ಯಗಳನ್ನು ನಿರ್ವಹಿಸುತ್ತವೆ ಎಂದು ತಿಳಿಸಿದರು . ಜಾತಿ , ಲಿಂಗ ಅಂತಸ್ತಿನ ಆಧಾರದ ಮೇಲೆ ಅವರ ಹಕ್ಕನ್ನು ನಿರಾಕರಿಸುವಂತಿಲ್ಲ . ಪ್ರತಿಯೊಬ್ಬ ನಾಗರೀಕರಿಗೆ ಸಾಮಾಜಿಕವಾಗಿ , ಆರ್ಥಿಕವಾಗಿ ಸಮಾನತೆಯನ್ನು ತರಲು ಮೀಸಲಾತಿಯನ್ನು ನೀಡಲಾಗಿದೆ . ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡಲು ಪ್ರಯತ್ನಿಸುತ್ತಿದ್ದಾರೆ . ಆದರೆ ಮಕ್ಕಳನ್ನೆ ಆಸ್ತಿಯಾಗಿ ಮಾಡಬೇಕು . ಕೆಲವರ ಬಳಿ ದುಡ್ಡು ಇದೆ , ಆದರೆ ಸಂತೋಷ ಇಲ್ಲ . ಸಂತೋಷ ನಮ್ಮ ಮನಸ್ಥಿತಿಯನ್ನು ಅವಲಂಬಿಸಿರುತ್ತದೆ . ಸಕಾರಾತ್ಮಕವಾಗಿ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿಗಳಾದ ಡಾ || ಆರ್ . ಸೆಲ್ವಮಣಿ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪೋಷಕರನ್ನು ನೋಡಿಕೊಳ್ಳದೇ ಇರುವುದು ನಡೆಯುತ್ತಿವೆ . ಆದ್ದರಿಂದ ಪೋಷಕರನ್ನು ರಕ್ಷಿಸಲು ಸರ್ಕಾರವು ಕಾನೂನನ್ನು ರೂಪಿಸಿದೆ . ಕೆಲವು ವಿದೇಶಗಳಲ್ಲಿ ಆಸ್ಪತ್ರೆಗಳಲ್ಲಿ ಹಿರಿಯ ನಾಗರಿಕರಿಗೆ ಶೇ . 20 ರಷ್ಟು ಬೆಡ್‌ಗಳನ್ನು ಮೀಸಲಾಗಿರಿಸಲಾಗಿದೆ ಎಂದರು . ಹಿರಿಯ ನಾಗರಿಕರಿಗೆ ಬರುವ ಕಾಯಿಲೆಗಳನ್ನು ನೋಡಲು ಪ್ರತ್ಯೇಕ ವೈದ್ಯರನ್ನು ನೇಮಿಸಲಾಗಿದೆ . ಹಿರಿಯ ನಾಗರೀಕರಿಗೆ ಹೋಮ್ ನರ್ಸಿಗ್ ಕೋರ್ಸ್‌ಗಳನ್ನು ಎಸ್.ಎನ್.ಆರ್ . ಆಸ್ಪತ್ರೆಯಲ್ಲಿ ನೀಡಲಾಗುತ್ತದೆ . 60 ವರ್ಷ ಆದ ನಂತರವು ನಾವು ಹೇಗೆ ಇರಬೇಕು ಎಂದು ಯೋಜನೆಯನ್ನು ರೂಪಿಸಿಕೊಳ್ಳಬೇಕು ಎಂದರು .
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ . ಶ್ರೀಧರ್ ಅವರು ಮಾತನಾಡಿ ಹಿರಿಯ ನಾಗರೀಕರು ತಮ್ಮ ಮಕ್ಕಳಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಇದು ವಿಷಾದನೀಯ ಸಂಗತಿ . ಎಷ್ಟೋ ಮಕ್ಕಳು ತಮ್ಮ ತಂದೆ ತಾಯಿಯನ್ನು ಪೋಷಿಸುವುದಿಲ್ಲ . ಮಕ್ಕಳು ತಮ್ಮನ್ನು ಪೋಷಿಸುತ್ತಿಲ್ಲವೆಂದು ಸಹಾಯಕ ಕಮಿಷನರ್ ಅವರಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು . ಕಾರ್ಯಕ್ರಮದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು . ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎಂ.ಎನ್ . ನಾಗರಾಜ್ , ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ.ಹೆಚ್ , ಗಂಗಾಧರ್ , ವಿಕಲಚೇತನರು ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಾದ ಮುನಿರಾಜಪ್ಪ ಬಿ . ಎಂ . , ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಘುಪತಿ ಗೌಡ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಎಂ.ಜಿ.ಪಾಲಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ | ಜಗದೀಶ್ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಚಂದನ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು .