ಸ್ಪರ್ಧಾರ್ಥಿಗಳು ಆತ್ಮವಿಶ್ವಾಸ, ಅರ್ಥಗ್ರಹಿಕೆ ಹಾಗೂ ಅಭ್ಯಾಸ ಈ ಮೂರೂ ಸೂತ್ರಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ:- ಸ್ಪರ್ಧಾರ್ಥಿಗಳು ಆತ್ಮವಿಶ್ವಾಸ, ಅರ್ಥಗ್ರಹಿಕೆ ಹಾಗೂ ಅಭ್ಯಾಸ ಈ ಮೂರೂ ಸೂತ್ರಗಳನ್ನು ಪಾಲಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುವುದರಲ್ಲಿ ಯಾವುದೇ ಸಂಶವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಪಲ್ಲವಿಮಣಿ ಅವರು ತಿಳಿಸಿದರು.
ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನವಚೇತನ ವಿದ್ಯಾಸಂಸ್ಥೆಯಲ್ಲಿ ಕೋಲಾರದ ವಿವೇಕ್ ಇನ್ಫೋಟೆಕ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಒಂದು ದಿನದ ಉಚಿತ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಈ ಹುದ್ದೆಗಳನ್ನು ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತೂ ಅಲ್ಲ. ಇದಕ್ಕೆ ಶ್ರದ್ಧೆ, ಆಸಕ್ತಿ ಮತ್ತು ಸಮಯ ಪ್ರಜ್ಞೆ ಅವಶ್ಯಕ. ಇವುಗಳನ್ನು ಎಲ್ಲಾ ವಿದ್ಯಾರ್ಥಿಗಳು ತಪ್ಪದೆ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಚಲನಚಿತ್ರಕ್ಕೆ, ಹೋಟೆಲ್‌ಗೆ ಅಥವಾ ಪ್ರವಾಸಿ ತಾಣಗಳಿಗೆ ಹೋದಾಗ ಅಲ್ಲಿನ ಮಾಹಿತಿಗಳನ್ನು ಹೇಗೆ ಗಮನವಿಟ್ಟು ತಿಳಿದುಕೊಳ್ಳುತ್ತೀರೋ ಅದೇ ರೀತಿ ನಮ್ಮ ಜೀವನಕ್ಕೆ ಅವಶ್ಯಕವಾದ ಶಿಕ್ಷಣದ ಬಗ್ಗೆಯೂ ಸಹ ಹೆಚ್ಚಿನ ಗಮನಹರಿಸಿ ಉತ್ತಮ ವ್ಯಾಸಂಗ ಮಾಡಬೇಕು. ಆ ಮೂಲಕ ಎಲ್ಲಾ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗುವಂತಾಗಬೇಕು ಎಂದು ಕಿವಿಮಾತು ಹೇಳಿದರು.
ನವಚೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಲ್. ರಾಮಕೃಷ್ಣಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಎಂದರೆ ಅಷ್ಟು ಸುಲಭದ ವಿಚಾರವಲ್ಲ. ಅದಕ್ಕೆ ಸೂಕ್ತ ಸಿದ್ಧತೆ, ಶ್ರಮ ಮತ್ತು ಮಾರ್ಗದರ್ಶನ ಅವಶ್ಯಕ. ಮುಂದೆ ನಿರ್ದಿಷ್ಟ ಗುರಿ ಮತ್ತು ಹಿಂದೆ ಗುರು ಇದ್ದಿದ್ದೇ ಆದರೆ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದ ಹೇಳಿದರು.
ವಿವೇಕ್ ಇನ್ಪೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎ. ಪ್ರಮೋದ್ ಕುಮಾರ್ ಮಾತನಾಡಿ, ಕೋಲಾರ ಜಿಲ್ಲೆ ಮಾತ್ರವೇ ಅಲ್ಲದೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿಯನ್ನು ತಲುಪಿಸಬೇಕೆಂಬ ದೃಷ್ಠಿಯಿಂದ ಉಚಿತ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯದ ಯಾವುದೇ ಕಾಲೇಜಿನವರು ಸಂಸ್ಥೆಗೆ ಆಹ್ವಾನ ನೀಡಿದರೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಕಾರ್ಯಾಗಾರಗಳನ್ನು ನಡೆಸಿಕೊಡಲಾಗುವುದು ಎಂದರು.
ಸಂಸ್ಥೆಯಲ್ಲಿ ಇದುವರೆಗೂ ಸಾಕಷ್ಟು ಮಂದಿ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದು ಈ ಬಾರಿ ಎಸ್.ಡಿ.ಎ ಪರೀಕ್ಷೆಯಲ್ಲಿಯೂ ಕೆಲವು ವಿದ್ಯಾರ್ಥಿಗಳು ಆಯ್ಕೆಯಾಗುವ ದೃಢ ನಂಬಿಕೆ ಇದೆ. ಪಿ.ಎಸ್.ಐ ಹುದ್ದೆಗಳಿಗೂ ಸಹ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸೂಕ್ತ ಮಾರ್ಗದರ್ಶನ ಪಡೆದು ನಿರಂತರ ಅಭ್ಯಾಸ ಮಾಡುತ್ತಿದ್ದು ಈ ಬಾರಿ ಪಿ.ಎಸ್.ಐ ಗಳಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಎಸ್.ಆರ್.ರಾಕೇಶ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬರುವ ವಿಷಯಗಳು ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವೇಕ್ ಇನ್ಫೋಟೆಕ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಜಿ.ಮುರಳಿ, ಸಂಪನ್ಮೂಲ ವ್ಯಕ್ತಿಗಳಾದ ಎನ್.ಯು.ಸುಜಯ್, ಕೆ.ವಿ.ಶಶಿಕುಮಾರ್, ಸಂಸ್ಥೆಯ ವಿದ್ಯಾರ್ಥಿ ಸುನೀಲ್ ಕುಮಾರ್, ನವಚೇತನ ವಿದ್ಯಾಸಂಸ್ಥೆಯ ಉಪನ್ಯಾಸಕಿ ಮಧುಶ್ರೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.