ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ 41 ಗ್ರಾಮ ಪಂಚಾಯಿತಿಗಳು ಆಯ್ಕೆ – ಮುನಿರತ್ನ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಕೋಲಾರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಜಿಲ್ಲೆಯ 41 ಗ್ರಾಮಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡಿದ್ದು , ಈ ಪಂಚಾಯಿತಿಗಳನ್ನು ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು . ಇಂದು 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ನೆಹರು ಯುವ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪ್ರೀಡಂ ರನ್ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು . ಪ್ರಪಂಚದಲ್ಲಿಯೇ ಭಾರತೀಯರು ಪುಣ್ಯವಂತರು . ಭಾರತ ದೇಶದಲ್ಲಿ ಹುಟ್ಟಿರುವುದೇ ಹೆಮ್ಮೆ . ಭಾರತ ಬಲಿಷ್ಟವಾಗಿದೆ ಎಂದು ಪ್ರಪಂಚಕ್ಕೆ ತಿಳಿದಿದೆ . ಹಲವಾರು ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ . ಅವರ ಸ್ಮರಣಾರ್ಥವಾಗಿ ಇಂದು ಪ್ರೀಡಂ ರನ್ 2.0 ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು . ಜಿಲ್ಲೆಯ ಎಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು . ಜಿಲ್ಲೆಯ ಆಸ್ಪತ್ರೆಗಳಲ್ಲಿಯೇ ಎಲ್ಲಾ ರೀತಿಯ ಚಿಕಿತ್ಸೆಗಳು ದೊರೆಯಬೇಕು . ಚಿಕತ್ಸೆಗಾಗಿ ಯಾರೊಬ್ಬರು ಬೆಂಗಳೂರಿಗೆ ಹೋಗಬಾರದು ಎಂಬುದು ನಮ್ಮ ಉದ್ದೇಶ . ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು , ಮಾಸ್ಟ್ ದರಿಸಿ ಕರೋನಾವನ್ನು ತಡೆಗಟ್ಟುವಲ್ಲಿ ಸಹಕರಿಸಿ ಎಂದು ತಿಳಿಸಿದರು . ಲೋಕಸಭಾ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ ಕರೋನಾ ಬಂದ ನಂತರ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು ಎಂದು ಜನರಿಗೆ ಅರಿವಾಗಿದೆ . ಪ್ರತಿಯೊಬ್ಬರು ಪ್ರತಿದಿನ ಕನಿಷ್ಟ ಅರ್ದ ಗಂಟೆ ವ್ಯಾಯಾಮ ಯೋಗ ಮಾಡುವ ಮೂಲಕ ದೇಹವನ್ನು ಪಿಟ್ ಆಗಿ ಇಟ್ಟುಕೊಳ್ಳಬೇಕು . ಯುವಕರು ತಮ್ಮ ತಮ್ಮ ಗ್ರಾಮಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ಬೆಳೆಸುವ ಕೆಲಸ ಮಾಡಬೇಕು ಎಂದು ತಿಳಿಸಿದರು . ನೆಹರು ಯುವ ಕೇಂದ್ರದ ಪ್ರಾದೇಶಿಕ ನಿರ್ದೇಶಕರಾದ ಎಸ್.ಪಿ. ಪಾಟ್ನಾಯಕ್ ಅವರು ಮಾತನಾಡಿ ಈ ಕಾರ್ಯಕ್ರಮದ ಉದ್ದೇಶ ದೇಶದ ಜನರನ್ನು ದೈಹಿಕವಾಗಿ ಮಾನಸಿಕವಾಗಿ ಸದೃಢರನ್ನಾಗಿ ಮಾಡುವುದು . ಪ್ರತಿ ದಿನ ಅರ್ಧಗಂಟೆ ವ್ಯಾಯಾಮ ಮಾಡುವ ಮೂಲಕ ದೇಹವನ್ನು ದಂಡಿಸಬೇಕು . ಆಕ್ಟೋಬರ್ 02 ರ ವರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ . ದೇಶದ ಪ್ರತಿ ಪ್ರಜೆಯ ಆರೋಗ್ಯಕರವಾಗಿ ಇರಬೇಕು ಎಂದು ತಿಳಿಸಿದರು . ಪಿಟ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ಆರ್.ಸೆಲ್ವಮಣಿ ಅವರು ಇಂಡಿಯಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು . ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡೆಕ್ಕಾ ಕಿಶೋರ್ ಬಾಬು , ಕುಡಾ ಪ್ರಾಧಿಕಾರದ ಅಧ್ಯಕ್ಷರಾದ ಚಲಪತಿ , ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳಾದ ಸರಣ್ಯಾ ಸೇರಿದಂತೆ ಯುವಕ ಯುವತಿಯರು ಭಾಗವಸಿದ್ದರು .