ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ತಪ್ಪಿಸಲು ಜೀವನ ಶೈಲಿ ಬದಲಿಸಿಕೊಳ್ಳಬೇಕು- ಡಾ.ಪ್ರದೀಪ್ ಹಾರನಹಳ್ಳಿ

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

ಕೋಲಾರ:- ಭಾರತದಲ್ಲಿ ಇತ್ತೀಚೆಗೆ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತದಿಂದ ಪಾರಾಗಲು ಜೀವನ ಶೈಲಿ ಬದಲಿಸಿಕೊಳ್ಳಬೇಕೆಂದು ಮಣಿಪಾಲ್ ಆಸ್ಪತ್ರೆಯ ಇಂಟರ್ವೆನ್ಯನಲ್ ಕಾರ್ಡಿಯಾಲಜಿ ಡಾ.ಪ್ರದೀಪ್ ಹಾರನಹಳ್ಳಿ ಸಲಹೆ ನೀಡಿದರು.
ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಸಂಘದ ಅಧ್ಯಕ್ಷ ವಿ.ಮುನಿರಾಜು ಅಧ್ಯಕ್ಷತೆಯಲ್ಲಿ ನಡೆದ ಯುವ ಜನರಲ್ಲಿ ಹೃದಯಾಘಾತ ಹೆಚ್ಚಾಗುವುದರ ಹಿಂದೆ ಕಾರಣ ಏನಿದೆ ಎಂಬ ವಿಷಯದ ಬಗ್ಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬದಲಾದ ಜೀವನ ಶೈಲಿಯ ಜೊತೆಗೆ ತಾಂತ್ರಿಕತೆ ಹೆಚ್ಚಾದಂತೆ ದೈಹಿಕ ಶ್ರಮ ಕಡಿಮೆಯಾದ್ದರಿಂದ ಯುವ ಜನತೆಯಲಿ ಹೃದಯಾಘಾತಗಳು ಹೆಚ್ಚಾಗುತ್ತಿವೆಯೆಂದರು.
ಜಪಾನ್, ಇಟಲಿಯಂತಹ ಮುಂದುವರೆದ ದೇಶಗಳ ಕೆಲವು ಪ್ರಾಂತ್ಯಗಳಲ್ಲಿ ಇಂದಿಗೂ ಪೂರ್ವಜರ ಜೀವನ ಶೈಲಿಗಳಾದ ಮಿತ ಭೋಜನ, ಪ್ರತಿ ನಿತ್ಯ ವ್ಯಾಯಾಮ, ಅತಿ ವಿರಳದ ವಾಹನ ಬಳಕೆ,ಯೋಗ ಅಳವಡಿಸಿ ಕೊಂಡಿರುವುದರಿಂದ ನೂರು ವರ್ಷ ಬದಕುತ್ತಿದ್ದಾರೆಂದು ಉದಾಹರಣೆ ನೀಡಿದರು.
ತಂದೆ ತಾಯಂದಿರು ಸಣ್ಣ ಮಕ್ಕಳಿಗೆ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ತಯಾರು ಮಾಡಬೇಕೆಂದರಲ್ಲದೆ,ಅನಾರೋಗ್ಯಕರ ಆಹಾರಗಳಾದ ಸಂಸ್ಕರಿತ ಆಹಾರ,ಜಂಕ್ ಪುಡ್ ಗಳ ಸೇವನೆ,ಕೆಂಪು ಮಾಂಸ, ಉಪ್ಪು,ಸಕ್ಕರೆ ಹೆಚ್ಚು ಬಳಕೆ ಮಾಡದಂತೆ ಎಚ್ಚರ ವಹಿಸಬೇಕೆಂದರು.
ಬೊಜ್ಜು,ಮಧುಮೇಹ, ಅಧಿಕ ರಕ್ತದೊತ್ತಡ,ಅಧಿಕ ಕೊಲೆಸ್ಟ್ರಾಲ್,
ಧೂಮಪಾನ, ಮದ್ಯ, ಮಾದಕವಸ್ತುಗಳ ಬಳಕೆಯು ಹಾಗೂ ಅಧಿಕ ಮಾನಸಿಕ ಒತ್ತಡ,ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಲ್ಯಾಪ್‍ಟಾಪ್ ಮುಂದೆ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಸಮಯ ಕಳೆಯುವುದರಿಂದ ಭಾರತದ ಯುವಕರಲ್ಲಿ ಆರಂಭಿಕ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ ಎಂದರು.
ದೈಹಿಕವಾಗಿ ಸಕ್ರಿಯವಾಗಿರಲು ಕನಿಷ್ಠ ಲಿಫ್ಟ್ ಗಳ ಬದಲಿಗೆ ಮೆಟ್ಟಿಲುಗಳನ್ನು ಬಳಸಿ,ಪ್ರತಿದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನ, ಯೋಗ,ವಾರದಲ್ಲಿ ಒಂದು ದಿನ ವಿಶ್ರಾಂತಿಯಂತಹ ಸುಲಭ ಮತ್ತು ಸರಳ ಮಾರ್ಗಗಳನ್ನು ಅಳವಡಿಸಿಕೊಳ್ಳುವ ಮೂಲಕ ಶೇಕಡಾ 80 ರಷ್ಟು ಹೃದಯಾಘಾತವನ್ನು ತಡೆಗಟ್ಟಬಹುದೆಂದು ಸಲಹೆ ನೀಡಿದರು.
30 ವರ್ಷ ಮೇಲ್ಪಟ್ಟವರು ಕನಿಷ್ಟ 2 ವರ್ಷಕ್ಕೊಮ್ಮೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು ಪ್ರತಿ ವರ್ಷ ಹೃದಯ ಸಂಭಂದಿಸಿದ ಪರೀಕ್ಷೆ ಹಾಗೂ ವೈದ್ಯರ ಸಲಹೆ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಸ್ನೇಹ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ರಾಜ್ಯ ಸಂಘದ ಕಾರ್ಯಕಾರಣಿ ಸಮಿತಿ ಸದಸ್ಯರಾದ ಬಿ.ವಿ.ಗೋಪಿನಾಥ್, ಮಹಮದ್ ಯೂನುಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು.