ಕೋಲಾರ“ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ”

ವರದಿ:ಶಬ್ಬೀರ್ಅಹಮ್ಮದ್,ಶ್ರೀನಿವಾಸಪುರ

“ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ”
ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆಯ ಪ್ರಾಮುಖ್ಯತೆ
ಕೋಲಾರ ; ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರ, ಆತ್ಮ ಯೋಜನೆ, ಕೃಷಿ ಇಲಾಖೆ, ಕೋಲಾರ ಹಾಗೂ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ಸ್ ಕೋ-ಆಪರೇಟಿವ್ ಸಂಸ್ಥೆ (Iಈಈಅಔ) ಇವರ ಸಂಯುಕ್ತಾಶ್ರಯದಲ್ಲಿ ಭಾರತದ ಅಮೃತ ಮಹೋತ್ಸವ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ರೈತರಿಗಾಗಿ “ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023” ಹಾಗೂ “ಪೋಷಣ ಮತ್ತು ವೃಕ್ಷಾರೋಹಣ ಅಭಿಯಾನ” ವನ್ನು ದಿನಾಂಕ 17.09.2021 ರಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಟಮಕ, ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಆಚರಿಸಲು ಕಾರಣ, ನಮ್ಮ ಪೂರ್ವಿಕರು ಹಿಂದಿನ ಕಾಲದಲ್ಲಿ ಮನೆಗೆ ಬೇಕಾದ ಸಿರಿಧಾನ್ಯಗಳನ್ನು, ತರಕಾರಿಗಳನ್ನು ಮತ್ತು ಹಣ್ಣುಗಳನ್ನು ತಮ್ಮ ತೋಟಗಳಲ್ಲಿ ಬೆಳೆದುಕೊಳ್ಳುತ್ತಿದ್ದರು. ಆದರೆ ಜನಸಂಖ್ಯೆ ಹೆಚ್ಚಳ, ಜಾಗತೀಕರಣ, ನಗರೀಕರಣ ಮತ್ತು ಕೈಗಾರೀಕರಣದಿಂದ ಜನರು ಆರೋಗ್ಯದ ಕಡೆಗೆ ಗಮನ ಕೊಡದೆ ಸಮತೋಲಿತ ಆಹಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ದೇಶದಲ್ಲಿ ಶೇ.42 ರಷ್ಟು ಜನರು ಗುಪ್ತ ಹಸಿವಿನಿಂದ ಅಂದರೆ ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾರೆ. ಮತ್ತೊಂದು ಕಡೆಗೆ, ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸಲು ಬಳಸುವ ರಾಸಾಯನಿಕ ಬಳಕೆ ಹೆಚ್ಚಾಗಿದ್ದು ಇದು ಮಾನವನ ಆರೋಗ್ಯದ ಮೇಲೆ ದುಷ್ಟಪರಿಣಾಮ ಬೀರುವುದರ ಜೊತೆಗೆ ರೋಗಗಳು ಹೆಚ್ಚಾಗುತ್ತವೆ. ಇದನ್ನೆಲ್ಲಾ ಮನಗಂಡು ವಿಶ್ವ ಸಂಸ್ಥೆ, 2023ನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ಗುರುತಿಸಿವೆ. ಕೆಲ ದಿನಗಳ ಹಿಂದೆ ಈ ಧಾನ್ಯಗಳು ಅಂದರೆ ಉದಲು, ಆರಕ, ಸಾಮೆ, ನವಣೆ, ಕೊರಲು, ರಾಗಿ, ಬರಗು, ಸಜ್ಜೆ, ಜೋಳ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ಜನರ ಆಹಾರ ಎಂದು ಗುರುತಿಸಲಾಗುತ್ತಿತ್ತು. ಆದರೆ ಈಗ ಇವುಗಳ ಪ್ರಾಮುಖ್ಯತೆ ತಿಳಿದು ಅಭಿವೃದ್ಧಿ ಹೊಂದಿದ ಹಾಗೂ ಉಳ್ಳವರ ಆಹಾರವಾಗುತ್ತಿದೆ. ಮತ್ತೊಂದೆಡೆ ನೀರಿನ ಅಭಾವ ಮತ್ತು ಏರುತ್ತಿರುವ ಉಷ್ಣತೆ ಹಾಗೂ ಕುಂದುತ್ತಿರುವ ಮಣ್ಣಿನ ಫಲವತ್ತತೆಯಲ್ಲೂ ಬೆಳೆಯಬಹುದಾದ ಈ ಬೆಳೆಗಳ ಕುರಿತು ಜನರಿಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮವಾಗಿದೆ. ಈ ವರ್ಷದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 2023ಕ್ಕೆ ವಿಶ್ವದ ಪ್ರತಿಯೊಬ್ಬರಿಗೂ ಈ ಧಾನ್ಯಗಳ ಮಹತ್ವ ತಿಳಿಯಬೇಕು ಮತ್ತು ಅದನ್ನು ಉಪಯೋಗಿಸಬೇಕು. ಇದನ್ನು ತಿನ್ನುವವರಿಗೆ ಆರೋಗ್ಯ ಲಭಿಸುತ್ತೇ ಮತ್ತು ಬೆಳೆ ಬೆಳೆಯುವವರಿಗೆ ಆರ್ಥಿಕ ಪ್ರಗತಿಯಾಗುತ್ತದೆ ಎನ್ನುವುದೇ ಈ ಕಾರ್ಯಕ್ರಮದ ಉದ್ದೇಶ.
ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕರಾದ ಡಾ. ಟಿ.ಬಿ. ಬಸವರಾಜುರವರು ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿ, ಮೊದಲು ಉದಲು, ಆರಕ, ಸಾಮೆ, ನವಣೆ, ಕೊರಲು, ರಾಗಿ, ಬರಗು, ಸಜ್ಜೆ, ಜೋಳಗಳನ್ನು ಕಿರುಧಾನ್ಯಗಳೆಂದು ಕರೆಯುತ್ತಿದ್ದು, ಅವುಗಳ ಪ್ರಾಮುಖ್ಯತೆಯನ್ನು ಕಂಡುಕೊಂಡು ಈಗ ಸಿರಿಧಾನ್ಯಗಳೆಂದು ಕರೆಯುತ್ತಾರೆ. ಹಲವು ಪ್ರದೇಶಗಳಲ್ಲಿ ಹೆಚ್ಚಾಗಿ ಭತ್ತ ಗೋಧಿಯನ್ನು ಬೆಳೆಯುತ್ತಿದ್ದು, ಒಣಪ್ರದೇಶಗಳಲ್ಲಿ ಭತ್ತ, ಗೋಧಿಯನ್ನು ಬೆಳೆಯಲು ಆಗುವುದಿಲ್ಲ ಆದರೆ ಕಿರುಧಾನ್ಯಗಳನ್ನು ಬೆಳೆದು ರೈತರು ತಮ್ಮ ಆದಾಯವನ್ನು ವೃದ್ಧಿಸಿಕೊಳ್ಳಬಹುದು.
ಸಿರಿಧಾನ್ಯಗಳಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ರಂಜಕ, ಪೊಟ್ಯಾಷ್, ಮೆಗ್ನಿಷಿಯಂ ಪ್ರೋಟಿನ್‍ನಂತಹ ಪೋಷಕಾಂಶಗಳಿರುತ್ತವೆ. ರಾಗಿಯು ಹೆಚ್ಚು ಕ್ಯಾಲ್ಸಿಯಂ, ಕಬ್ಬಿಣದ ಅಂಶ ಹೊಂದಿದೆ. ರಾಗಿಯು ನಿಧಾನವಾಗಿ ಜೀರ್ಣವಾಗುತ್ತದೆ. ಸಕ್ಕರೆ ಖಾಯಿಲೆಗೆ ರಾಗಿ ಉತ್ತಮ ಆಹಾರ. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ಒಣಪ್ರದೇಶದಲ್ಲಿ ಆಹಾರ ಭದ್ರತೆಯನ್ನು ಒದಗಿಸುತ್ತದೆ. ನಮಗೆ ಬೇಕಾದ ಆಹಾರ ಬೆಳೆದರೆ, ಆಹಾರ ಭದ್ರತೆ ದೊರಕುತ್ತದೆ. ಸಾವಯವ ಪದ್ಧತಿಯಿಂದ ಸಿರಿಧಾನ್ಯ ಉತ್ಪಾದನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾರಕವು ಬರನಿರೋಧಕ ಶಕ್ತಿ ಇದ್ದು, ಒಳ್ಳೆಯ ಇಳುವರಿ ಕೊಡುತ್ತದೆ. ಆದುದರಿಂದ ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜನ ಕೊಡಬೇಕು ಎಂದು ತಿಳಿಸಿದರು.
ಡಾ. ಬಿ.ಎಫ್. ಹುಲಗೂರು, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ನಬಾರ್ಡ್‍ರವರು, ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಾತನಾಡಿ, ಬಡವರ ಬಂಧು ಸಿರಿಧಾನ್ಯಗಳು. ಬರಗಾಲದಲ್ಲಿ ರೈತರಿಗೆ ಇಳುವರಿ ಕೊಡುತ್ತದೆ. ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಬೇಕು. ಸಿರಿಧಾನ್ಯಗಳಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ನಾರಿನ ಅಂಶವು ಸಹ ಇದ್ದು ಇದು, ಸಕ್ಕರೆ ಖಾಯಿಲೆಗೆ ತುಂಬಾ ಒಳ್ಳೆಯದು. ಸಾವಯವ ಪದ್ಧತಿ ಮೂಲಕ ಬೇಸಾಯ ಮಾಡಿ ಮನೆಯ ಬಳಕೆಗೆ ಬಳಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕೆ. ತುಳಸಿರಾಮ್, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಹಿಂದೆ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಇತ್ತೀಚೆಗೆ ಬೆಳೆಯುವುದನ್ನು ಕಡಿಮೆ ಮಾಡಿದ್ದು, ಮತ್ತೇ ಸಿರಿಧಾನ್ಯಗಳನ್ನು ಬೆಳೆಯುವ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಸಿರಿಧಾನ್ಯಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾಗಿದ್ದರಿಂದ ರೈತರು ಇದರತ್ತ ಒಲವು ತೋರಿಸಬೇಕೆಂದು ತಿಳಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಸಿರಿಧಾನ್ಯಗಳೆಂದರೆ ಸಾಮೆ, ನವಣೆ, ಊದಲು, ರಾಗಿ, ಬರಗು, ಸಜ್ಜೆ, ಅರ್ಕಾ, ಜೋಳ ಇವು ಪೋಷಕಾಂಶಭರಿತವಾಗಿದ್ದು, ಒಣಬೇಸಾಯಕ್ಕೆ ಸೂಕ್ತವಾಗಿದ್ದು, ಅಲ್ಲದೇ ಇತ್ತೀಚಿನ ವರ್ಷಗಳಲ್ಲಿ ಆಗುತ್ತಿರುವ ಜಾಗತಿಕ ಹವಾಮಾನ ವೈಪರಿತ್ಯದಲ್ಲಿ ಕೂಡ ಯಾವುದೇ ನಷ್ಟ ಇಲ್ಲದೇ ರೈತರು ಬೆಳೆಯಬಹುದಾದ ಬೆಳೆಗಳಾಗಿದ್ದು, ಇದರ ಪ್ರಾಮುಖ್ಯತೆಯನ್ನು ಜನಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕ ಸರ್ಕಾರದ ಕೃಷಿ ಸಚಿವರಾಗಿದ್ದ ಶ್ರೀ. ಕೃಷ್ಣ ಬೈರೆಗೌಡರವರು ‘ಅಂತರಾಷ್ಟ್ರೀಯ ಸಿರಿಧಾನ್ಯಗಳ ಮೇಳ’ ಆಯೋಜಿಸಿದ್ದು, ಇದರ ಪ್ರಾಮುಖ್ಯತೆಯನ್ನು ಅರಿತ ಭಾರತ ಸರ್ಕಾರ ಇದನ್ನು ಕೃಷಿ ಮತ್ತು ಆಹಾರ ಸಂಸ್ಥೆಗೆ ಪ್ರಸ್ತಾವನೆಯನ್ನು ಇಟ್ಟಾಗ ಭಾರತ ದೇಶದೊಂದಿಗೆ ಸುಮಾರು 70 ದೇಶಗಳು ಇದರಲ್ಲಿ ಪಾಲ್ಗೊಂಡು ‘2023ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ’ ವರ್ಷವೆಂದು ಆಚರಿಸಲು ನಿರ್ಧರಿಸಿದವು ಎಂದು ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ) ಇವರು ವಿವರಿಸಿದರು.
ನಂತರ, ಎಲ್ಲ ರೈತ ಮತ್ತು ರೈತಮಹಿಳೆಯರಿಗೆ ಸೀಡ್ ಕಿಟ್ ಹಾಗೂ ಸಸಿಗಳನ್ನು ವಿತರಣೆ ಮಾಡಲಾಯಿತು.
ತದನಂತರ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಗೃಹ ವಿಜ್ಞಾನದ ವಿಜ್ಞಾನಿಗಳಾದ ಡಾ. ಚಿಕ್ಕಣ್ಣ ಜಿ.ಎಸ್ ರವರು ಮಾನವನ ಆರೋಗ್ಯ ಕಾಪಾಡುವಲ್ಲಿ ಸಿರಿಧಾನ್ಯಗಳ ಪಾತ್ರದ ಕುರಿತು ರೈತರಿಗೆ ವಿವರಿಸಿದರು. ಡಾ. ಬಿ.ಎಫ್. ಹುಲಗೂರು, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ನಬಾರ್ಡ್‍ರವರು ಸುಸ್ಥಿರ ಕೃಷಿಯ ಪ್ರಾಮುಖ್ಯತೆ ಕುರಿತು ವಿವರಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ಡಾ. ಅನಿಲಕುಮಾರ್ ಎಸ್, ತೋಟಗಾರಿಕೆಯ ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ, ಸಸ್ಯರೋಗ ಸಂರಕ್ಷಣೆ ವಿಜ್ಞಾನಿ ಡಾ. ಡಿ. ಎಸ್. ಅಂಬಿಕಾ, ಡಾ. ಶಶಿಧರ್ ಕೆ.ಆರ್, ಶ್ರೀ. ಉಮೇಶ್ ನಾಯ್ಕ, ಕ್ಷೇತ್ರ ವ್ಯವಸ್ಥಾಪಕರು ಮತ್ತು ಕೆವಿಕೆಯ ಬೋಧಕೇತರ ಸಿಬ್ಬಂದಿಗಳು, ಶ್ರೀ. ಮೋಹನÀ, ಕ್ಷೇತ್ರ ನಿರ್ವಹಣಾ ಅಧಿಕಾರಿ, ಇಫ್ಕೋ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 72 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.