ಭಾರತ ಸೇವಾದಳದಿಂದ ವಿಶ್ವ ಸಾಕ್ಷರತಾ ದಿನಾಚರಣೆ – ಶಾಲೆ ವಂಚಿತ ಮಕ್ಕಳ ವಿದ್ಯಾಭ್ಯಾಸ ಪ್ರತಿಯೊಬ್ಬರ ಜವಾಬ್ದಾರಿ-ಶ್ರೀನಾಥ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ:- ಶಿಕ್ಷಣ ವಂಚಿತ ಮಕ್ಕಳನ್ನು ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುವುದು ಪ್ರತಿಯೊಬ್ಬ ನಾಗರೀಕರ ಸಾಮಾಜಿಕ ಜವಾಬ್ದಾರಿಯಾಗಬೇಕೆಂದು ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮೀಣ ಗ್ರಂಥಾಲಯದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿಗಳು ಹಾಗೂ ಕೋಲಾರ ರೋಟರಿ ಸೆಂಟ್ರಲ್‍ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಯೋಮಾನ ಮೀರಿ ಕಲಿಕೆಯ ಆಸಕ್ತಿ ಇರುವರೆಲ್ಲರಿಗೂ ಕಲಿಯುವ ಅವಕಾಶ ಕಲ್ಪಿಸಿದಾಗ ದೇಶ ಸಂಪೂರ್ಣ ಸಾಕ್ಷರತೆ ಹೊಂದಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಕೋವಿಡ್‍ನಿಂದಾಗಿ ಕಲಿಕೆ ಕುಂಠಿತವಾಗಿದೆಯೆಂದರು.
ಸದಸ್ಯರು ಹಾಗೂ ಗ್ರಂಥಾಲಯಮೇಲ್ವಿಚಾರಕರ ಮನವಿ ಮೇರೆಗೆ ಕೊಂಡರಾಜನಹಳ್ಳಿ ಗ್ರಂಥಾಲಯಕ್ಕೆ ಟೈಲ್ಸ್ ಹಾಕಿಸುವ, ಗ್ರಂಥಾಲಯ ವಿಸ್ತರಣೆಗೆ ನೆರವಾಗುವ ಹಾಗೂ ಹೊಸ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಾಗಿ ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.
ಸಾಕ್ಷರತಾ ಕಾರ್ಯಕ್ರಮದ ರೂವಾರಿಯಾಗಿದ್ದ ಜಾನಪದ ಗಾಯಕ ಡಿ.ಆರ್.ರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮವು 1994 ರಿಂದ ಅಕ್ಷರತೆನೆ ಯೋಜನೆಯಡಿ ಆರಂಭವಾಯಿತು. 1981 ರಲ್ಲಿ ಶೇ.34 ರಷ್ಟಿದ್ದ ಸಾಕ್ಷರತಾ ಪ್ರಮಾಣ, 1991ರಲ್ಲಿ ಶೇ.51, 20011 ರಲ್ಲಿ ಶೇ.74.39 ಮತ್ತು 2021 ಗಣತಿ ನಡೆದಿದ್ದರೆ ಶೇ.83 ರಿಂದ 84 ರವರೆವಿಗೂ ದಾಖಲಾಗುತ್ತಿತ್ತು. ಈ ದೊಡ್ಡ ಪ್ರಯತ್ನದಲ್ಲಿ ಕಲಾವಿದರು, ಕವಿ, ಸಾಹಿತಿಗಳು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರಿಂದ ಪ್ರೇರಿತರಾಗಿ ಬಹಳಷ್ಟು ಮಂದಿ ಸಾಕ್ಷರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಭೂಸಂಪನ್ಮೂಲಗಳನ್ನು ಭವಿಷ್ಯಕ್ಕಾಗಿ ಉಳಿಸುವುದು, ಓದು ಬರಹ ಲೆಕ್ಕಾಚಾರಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದೇ ಸಾಕ್ಷರತೆ ಆಗಿದೆ, ಪೂರ್ಣ ಸಾಕ್ಷರರಾಗುವ ಪ್ರಯತ್ನ ನಿರಂತರವಾಗಿರಬೇಕೆಂದರು.
ಅಧ್ಯಕ್ಷತೆವಹಿಸಿದ್ದ ಗ್ರಾಪಂ ಅಧ್ಯಕ್ಷೆ ಪುಷ್ಪ ಮಾತನಾಡಿ, ದೇಶದ ಪ್ರಗತಿಗೆ ಸಾಕ್ಷರತೆ ಮುಖ್ಯವಾಗಿದ್ದು, ಇಂದಿಗೂ ಅನಕ್ಷರತೆ ಕಾಡುತ್ತಿರುವುದು ವಿಷಾದನೀಯ ಎಂದರು.
ಭಾರತ ಸೇವಾದಳದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಕಲಿಕೆ ಎನ್ನುವುದು ಮನುಷ್ಯನ ಹುಟ್ಟಿನಿಂದ ಸಾಯುವವರೆವಿಗೂ ಇರುತ್ತದೆ, ಮಾನವೀಯ ಮೌಲ್ಯಗಳ ಪ್ರತಿಪಾದನೆ ಕಲಿಕೆಯ ಮುಖ್ಯ ಅಂಶವಾಗಿರದಿದ್ದರೆ ಕಲಿತಿದ್ದೆಲ್ಲವೂ ವ್ಯರ್ಥ ಎಂದರು.
ಗ್ರಾಪಂ ಉಪಾಧ್ಯಕ್ಷ ನಾಗೇಶ್ ಮಾತನಾಡಿ, ಸಾಕ್ಷರತೆ ಸಹಬಾಳ್ವೆಗೆ ನಾಂದಿಹಾಡಲಿ ಎಂದರು.
ಸೇವಾದಳ ಹಾಗೂ ರೋಟರಿ ಸೆಂಟ್ರಲ್ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಪಂಚಾಯ್ತಿವತಿಯಿಂದ ಭಾರತ ಸೇವಾದಳಕ್ಕೆ ಎರಡು ಎಕರೆ ಜಾಗ ನೀಡಿದರೆ ಸುಸಜ್ಜಿತ ಸೇವಾದಳ ಭವನ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆಯೆಂದರು.


ಶಿಕ್ಷಣ ಸಂಯೋಜಕ ಆರ್.ಶ್ರೀನಿವಾಸನ್ ಮಾತನಾಡಿ, ಯುವಕರು ಮಾದಕ ವ್ಯಸನಿಗಳಾಗದಂತೆ ತಡೆಯುವುದು ಸಾಕ್ಷರತೆ ಕಾರ್ಯಕ್ರಮದ ಭಾಗವಾಗಬೇಕಿದೆ ಎಂದರು.
ಗ್ರಾಪಂ ಸದಸ್ಯ ಶ್ರೀನಿವಾಸ್ ಯಾದವ್ ಮಾತನಾಡಿ, ಸಾಕ್ಷರ ಕಾರ್ಯಕ್ರಮ ಸಂಪೂರ್ಣ ಸಾಕ್ಷರತೆ ಸಾಧಿಸುವವರೆವಿಗೂ ಅರ್ಥಪೂರ್ಣವಾಗಿ ಸಾಗಬೇಕಾಗಿದೆಯೆಂದರು.
ಇದೇ ಸಂದರ್ಭದಲ್ಲಿ ಸಾಕ್ಷರತೆಗೆ ಶ್ರಮಿಸಿದ ಪ್ರೇರಕರಾದ ಸುಜಾತಾ, ಮಂಜುಳ, ರಾಮಚಂದ್ರ, ಗೋವಿಂದ, ಶುಭ ಮತ್ತು ಪದ್ಮರನ್ನು ಮತ್ತು ನವ ಕಲಿಕಾರ್ಥಿಗಳಾದ ಅನಿತಾ, ದಿಲ್‍ಶಾದ್, ಪಾರ್ವತಮ್ಮ ಮತ್ತು ರಾಧಮ್ಮರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸೇವಾದಳ ಕೋಶಾಧ್ಯಕ್ಷ ರವಿಕುಮಾರ್, ಜಿಲ್ಲಾ ಸಂಘಟಕ ದಾನೇಶ್, ಗ್ರಾಪಂ ಸದಸ್ಯರಾದ ನಾರಾಯಣಮ್ಮ, ಖಾದ್ರಿಪುರ ಗೋವಿಂದ್, ಗ್ರಾಪಂ ಶ್ರೀನಿವಾಸ್ ಇತರರು ಹಾಜರಿದ್ದರು.
ಕೊಂಡರಾಜನಹಳ್ಳಿ ಗ್ರಾಮೀಣ ಗ್ರಂಥಾಲಯದ ಮೇಲ್ವಿಚಾರಕಿ ಮಂಜುಳ ನಿರೂಪಿಸಿ, ರಾಮಚಂದ್ರ ಸಾಕ್ಷರ ಗೀತೆ ಗಾಯನ, ಭಾರತ ಸೇವಾದಳ ತಾಲೂಕು ಸಮಿತಿ ಕಾರ್ಯದರ್ಶಿ ಶ್ರೀರಾಮ್ ಸ್ವಾಗತಿಸಿ, ಶ್ರೀಕಾಂತ್ ಯಾದವ್ ವಂದಿಸಿದರು.
ಸರ್ವಧರ್ಮ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.