ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ಉಪಕರಣಗಳನ್ನು ಮಂಗಳೂರಿನಲ್ಲಿ ಬೋಟಿಗೆ ಅಳವಡಿಕೆ ಮಾಡಲಾಗಿದೆ

JANANUDI.COM NETWORK


ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿನೂತನ ತಂತ್ರಜ್ಞಾನವನ್ನು ಮಂಗಳೂರಿನ ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಈ ಮೂಲಕ ವಾರಗಟ್ಟಲೆ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಹೋಗುವ ಮೀನುಗಾರರು ಇನ್ನು ಮುಂದೆ ತಮ್ಮ ನಿತ್ಯ ಬಳಕೆಯ ಅವಶ್ಯಕತೆಗೆ ಬೇಕಾದ ನೀರನ್ನು ಕೊಂಡೊಯ್ಯುವ ಪ್ರಮೇಯ ತಪ್ಪುತ್ತೆ
ಆಳ ಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ಸುಮಾರು ಹತ್ತಾರು ದಿನಗಳ ಕಾಲ ಸಮುದ್ರದ ನಡುವೆಯೇ ಮೀನುಗಾರಿಕೆ ನಡೆಸುತ್ತಿರುತ್ತಾರೆ. ಸಿಹಿ ನೀರು ಸಿಗುವುದಿಲ್ಲ. ಅದಕ್ಕಾಗಿ ಅವರು ಸಾವಿರ ಗಟ್ಟಲೆ ಲೀಟರ್ ಶುದ್ಧ ನೀರನ್ನು ತಮ್ಮೊಂದಿಗೆ ಕೊಂಡೊಯ್ಯಬೇಕಾಗುತ್ತದೆ. ಈಗ ಹಿನ್ನೆಲೆಯಲ್ಲಿ ವಿನೂತನ ತಂತ್ರಜ್ಞಾನದ ದಿಂದ ಸಮುದ್ರದ ಉಪ್ಪು ನೀರನ್ನು ಶುದ್ಧ ಕುಡಿಯುವ ನೀರಾಗಿ ಪರಿವರ್ತನೆ ಮಾಡುವ ಉಪಕರಣವನ್ನು ಬೋಟ್ ಗೆ ಅಳವಡಿಕೆ ಮಾಡಲಾಗಿದೆ.
ಆಸ್ಟ್ರೇಲಿಯಾದ ಮೆರೈನ್ ಕಂಪೆನಿಯಾದ ರೆಯಾನ್ಸ್ ನವರು ಈ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿಯೇ ಮೊಟ್ಟ ಮೊದಲಬಾರಿಗೆ ಮಂಗಳೂರಿನ ಮೀನುಗಾರಿಕಾ ಬೋಟ್ ಗೆ ಇದನ್ನು ಅಳವಡಿಕೆ ಮಾಡಲಾಗಿದೆ. ಈ ಉಪಕರಣದಲ್ಲಿ ದಿನಕ್ಕೆ 2 ಸಾವಿರ ಲೀಟರ್ ನೀರನ್ನು ಉತ್ಪಾದನೆ ಮಾಡಲು ಸಾಧ್ಯ. ಈ ಮೂಲಕ ತಿಂಗಳಿಗೆ 60 ಸಾವಿರ ಲೀಟರ್ ನೀರನ್ನು ಉಳಿಕೆ ಮಾಡಲು ಸಾಧ್ಯ. ಇದು ಮೀನುಗಾರರಿಗೆ ಲಾಭದಾಯಕವೂ, ಆರೋಗ್ಯಕರವೂ ಆಗಲಿದೆ ಎಂದು ತಿಳಿದು ಬಂದಿದೆ.
ಈ ಉಪಕರಣದಲ್ಲಿ ಎರಡು ಪೈಪ್ ಗಳಿದ್ದು, ಒಂದು ಪೈಪ್ ಸಮುದ್ರದಲ್ಲಿನ ನೀರನ್ನು ಎಳೆಯಲು ಆ ನೀರು ಯಂತ್ರದ ಒಳಗೆ ಹೋಗಿ ನೀರು ಶುದ್ಧೀಕರಣ ಪ್ರಕ್ರಿಯೆ ನಡೆದು ಮತ್ತೊಂದು ಪೈಪ್ ಮೂಲಕ ಶುದ್ಧ ನೀರು ಬರುತ್ತದೆ. ಈ ನೀರು ಸಿಹಿ ನೀರಿನಷ್ಟೇ ಶುದ್ಧವಾಗಿರುತ್ತದೆ. ಈ ಮೂಲಕ ಗಂಟೆಗೆ 160 ಲೀಟರ್ ಶುದ್ಧ ನೀರು ಉತ್ಪಾದನೆ ಆಗುತ್ತದೆ. ಈ ಉಪಕರಣ 4.60 ಲಕ್ಷ ರೂ.ಮೌಲ್ಯವಾಗಿದ್ದು. ಈ ಉಪಕರಣವನ್ನು ಮೀನುಗಾರರಿಗೆ 50% ಸಬ್ಸಿಡಿ ದರದಲ್ಲಿ ಕೇಂದ್ರ ಸರಕಾರ ಒದಗಿಸುವ ಭರವಸೆ ನೀಡಿದೆ.