ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿ, ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಗಳನ್ನು ಸರಿಪಡಿಸಿ-ರೈತಸಂಘ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ: ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿ, ಸರಕಾರಿ ಆಸ್ಪತ್ರೆಗಳ ಅವ್ಯವಸ್ಥೆಗಳನ್ನು ಸರಿಪಡಿಸಿ, ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ, ಜಿಲ್ಲೆಯಲ್ಲಿನ ನಕಲಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕೆಂದು ಒತ್ತಾಯಿಸಿ ರೈತಸಂಘದಿಂದ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಬಯಲುಸೀಮೆಯ ಜಿಲ್ಲೆಯಲ್ಲಿ ಖಾಸಗಿ ಮೆಡಿಕಲ್ ಕಾಲೇಜು, ಇದೆ. ಆದರೆ ಸರ್ಕಾರಿ ಮೆಡಿಕಲ್ ಕಾಲೇಜು ಇಲ್ಲ. ಅನೇಕ ಬಾರಿ ಈ ವಿಚಾರವು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದರೂ ಈವರೆಗೆ ಯಾವುದೇ ರೀತಿಯಲ್ಲಿಯೂ ಪ್ರಯೋಜನವಾಗಿಲ್ಲ. ಸರ್ಕಾರಿ ಮೆಡಿಕಲ್ ಕಾಲೇಜು ಆರಂಭದಿಂದಾಗಿ ಜಿಲ್ಲೆಗೆ ಸಾಕಷ್ಟು ಅನುಕೂಲವಾಗಲಿದ್ದು, ತಾವು ಇದಕ್ಕೆ ಹೆಚ್ಚಿನ ಒತ್ತು ನೀಡಿ ಮಂಜೂರು ಮಾಡಿಕೊಟ್ಟರೆ ಅನುಕೂಲವಾಗಲಿದೆ ಎಂದು ಹೇಳಿದರು.
ಸರ್ಕಾರದಿಂದ ಆರೋಗ್ಯ ಇಲಾಖೆಗೆ ಕೋಟ್ಯಂತರರೂಪಾಯಿ ಅನುದಾನ ನೀಡಲಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿಯೇ ಇದೆ. ಹೆಸರಿಗಷ್ಟೇ ಎಲ್ಲ ಸೌಲಭ್ಯಗಳು ಲಭ್ಯ ಎಂದು ಫಲಕ ಹಾಕಲಾಗಿರುತ್ತದೆ. ಆದರೆ ಯಾವುದೇ ರೀತಿಯ ಸಮರ್ಪಕ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.
ಕೊರೊನಾ ನಡುವೆಯೂ ಎಚ್ಚೆತ್ತುಕೊಂಡು ಸೌಲಭ್ಯಗಳನ್ನು ಕಲ್ಪಿಸದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗಳು ಮಿತಿಮೀರಿದ್ದು, ಯಾವುದೇ ಚಿಕಿತ್ಸೆಗೆ ತೆರಳಿದರೂ ಖಾಸಗಿ ಆಸ್ಪತ್ರೆಗಳಿಗೆ ಚೀಟಿ ಬರೆದುಕೊಡುವ ವ್ಯವಸ್ಥೆ ಜಿಲ್ಲೆಯಲ್ಲಿದೆ. ಹೀಗಾಗಿ ಸಚಿವರು ಕೂಡಲೇ ಅವ್ಯವಸ್ಥೆಗಳನ್ನು ಸರಿಪಡಿಸಿ ಉತ್ತಮ ಆರೋಗ್ಯ ಸೌಲಭ್ಯವನ್ನು ಕಲ್ಪಿಸಿಕೊಡಬೇಕಿದೆ ಎಂದು ಆಗ್ರಹಿಸಿದರು.
ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಆರೋಗ್ಯ ಇಲಾಖೆಯಲ್ಲಿ ಪ್ರಮುಖವಾಗಿ ತಜ್ಞ ವೈದ್ಯರು ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇದ್ದು, ಜನರಿಗೆ ಉತ್ತಮ ಸೇವೆ ದೊರೆಯದಿರುವುದಕ್ಕೆ ಇದೂ ಸಹ ಒಂದು ಕಾರಣವಾಗಿದೆ. ಹೀಗಾಗಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು.
ಇನ್ನು ಗಡಿ ಜಿಲ್ಲೆಯಾಗಿರುವ ಕೋಲಾರದಲ್ಲಿ ನಕಲಿ ಕ್ಲಿನಿಕ್‍ಗಳ ಹಾವಳಿ ಮಿತಿ ಮೀರಿದ್ದು, ಹೇಳುವವರು, ಕೇಳುವವರು ಇಲ್ಲದಾಗಿದೆ. ಜಿಲ್ಲೆಯ ಮುಳಬಾಗಿಲು, ಕೆಜಿಎಫ್ ತಾಲೂಕುಗಳ ಗಡಿಗಳಲ್ಲಿ ಆಂಧ್ರದ ವೈದ್ಯರ ಹಾವಳಿ ಹೆಚ್ಚಾಗಿದ್ದು, ಗ್ರಾಮೀಣ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದು, ಕೂಡಲೇ ತಾವು ನಕಲಿ ಕ್ಲಿನಿಕ್‍ಗಳಿಗೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡಬೇಕಿದೆ.
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿ ಉತ್ತಮ ಆರೋಗ್ಯ ಸೇವೆಯು ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗುವಂತಾಗಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಮಾನ್ಯರಲ್ಲಿ ಮನವಿ ಮಾಡುತ್ತಿದ್ದೇವೆ.
ಮನವಿ ಸ್ವೀಕರಿಸಿ ಮಾತನಾಡಿದ ಆರೋಗ್ಯ ಸಚಿವರು, ಮೆಡಿಕಲ್ ಕಾಲೇಜು ಆರಂಭ ಸಂಬಂಧ ಶೀಘ್ರ ಕ್ರಮಕೈಗೊಳ್ಳಲಾಗುವುದು ಹಾಗೂ ಹುದ್ದೆಗಳ ಭರ್ತಿಗೂ ಆದ್ಯತೆ ನೀಡಲಾಗುವುದಾಗಿ ಭರವಸೆ ನೀಡಿದರು.
ಮನವಿ ನೀಡುವಾಗ ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ತೆರ್ನಹಳ್ಳಿ ಆಂಜಿನಪ್ಪ, ಲೋಕೇಶ್, ರವಿಕುಮಾರ್ ಮುಂತಾದವರಿದ್ದರು.