ಪರಿಹಾರ ಚೆಕ್ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿ ಮಾಡಬೇಕು:ಎನ್.ಹನುಮೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಪರಿಹಾರ ಚೆಕ್ ಪಡೆದ ಫಲಾನುಭವಿಗಳು ಕಡ್ಡಾಯವಾಗಿ ರಾಸುಗಳನ್ನು ಖರೀದಿ ಮಾಡಬೇಕು. ನಿಗದಿತ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಉತ್ತಮ ಗುಣಮಟ್ಟದ ಹಾಲು ಪೂರೈಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಕೋಚಿಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಫಲಾನುಭವಿಗಳಿಗೆ ಮೃತಪಟ್ಟ ರಾಸುಗಳ ವಿಮಾ ಚೆಕ್ ವಿತರಿಸಿ ಮಾತನಾಡಿ, ಕೋಚಿಮುಲ್ ವತಿಯಿಂದ ಹಾಲು ಉತ್ಪಾದಕರಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹಾಲು ಒಕ್ಕೂಟದ ಸಹಕಾರ ಸಂಘಗಳಿಗೆ ಹಾಲು ಹಾಕುವ ಫಲಾನುಭವಿಗಳಿಗೆ ಮಾತ್ರ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಹಾಲು ಉತ್ಪಾದಕರು, ಹಾಲಿನ ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಹಸಿರು ಹಾಗೂ ಒಣ ಮೇವಿನ ಜತೆಗೆ ಪಶು ಆಹಾರ, ಖನಿಜ ಮಿಶ್ರಣ, ಗೋಧಾರ ಶಕ್ತಿ ಹಾಗೂ ಟ್ರಿಯೋ ಎನ್ ಬಿ ಸ್ಯಾಕ್ ಪುಡಿ ನೀಡಬೇಕು. ಕೆಚ್ಚಲು ಬಾವು ಬರದಂತೆ ನೋಡಿಕೊಳ್ಳಬೆಕು. ರಾಸುಗಳ ಆರೋಗ್ಯ ರಕ್ಷಣೆಯತ್ತ ನಿಗಾ ವಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಸುಗಳ ವಿಮಾ ಪರಿಹಾರವಾಗಿ ಏಳು ಮಂದಿ ಫಲಾನುಭವಿಗಳಿಗೆ ರೂ. 4.20 ಲಕ್ಷ, ವಯೋ ನಿವೃತ್ತಿ ಹೊಂದಿರುವ ಕಲ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಹಾಗೂ ಆಲವಟ್ಟ ಗ್ರಾಮದ ಸಹಕಾರ ಸಂಘದ ಸಹಾಯಕಿಗೆ ರೂ.2.75 ಲಕ್ಷ, ಕರ್ನಾಟಕ ಹಾಲು ಮಹಾ ಮಂಡಳಿಯಿಂದ ಹರಳುಕುಂಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಿಸಲು ರೂ.1.50 ಲಕ್ಷ ಮೌಲ್ಯದ ಚೆಕ್‍ಗಳನ್ನು ವಿತರಿಸಲಾಯಿತು.