ಡಾ. ರಾಜ್ ಸಂಘಟನೆಯಿಂದ ಅಜೇಂದ್ರ ಶೆಟ್ಟಿ ಶ್ರದ್ಧಾಂಜಲಿ ಸಭೆ

ವರದಿ : ಮಝರ್, ಕುಂದಾಪುರ


ಕುಂದಾಪುರ : ನಮ್ಮ ಸಂಘದಲ್ಲಿ ಸಕ್ರಿಯರಾಗಿದ್ದ ಕೂಡಾಲು ಅಜೇಂದ್ರ ಶೆಟ್ಟಿಯವರ ವಿದ್ರಾವಕ ನಿರ್ಗಮನ ಊಹಿಸಲೂ ಅಸಾಧ್ಯವಾದುದು, ವಿಶಾಲ ಹ್ರದಯಿಯಾಗಿದ್ದ ಅವರಿಂದ ಸಮಾಜ ಬಹಳಷ್ಟು ನಿರೀಕ್ಷಿಸುತ್ತಿತ್ತು. ಆದರೆ ಕ್ರೂರ ಕಾಲನ ತೆಕ್ಕೆಯಲ್ಲಿ ಆಕಸ್ಮಿಕವಾಗಿ ಲೀನರಾದ ಅವರ ದಿವ್ಯಾತ್ಮಕ್ಕೆ ಶಾಂತಿ ಲಭಿಸಲಿ,ಅವರ ಮನೆಯವರಿಗೆ ದು:ಖವನ್ನು ಸಹಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಕುಂದಾಪುರ ಡಾ. ರಾಜ್ ಸಂಘಟನೆಯ ಅಧ್ಯಕ್ಷರಾದ ರತ್ನಾಕರ ಪೂಜಾರಿ ಅವರು ಹೇಳಿದರು.


ಅವರು ಇತ್ತೀಚೆಗೆ ದುಷ್ಕರ್ಮಿಯೋರ್ವನಿಂದ ತನ್ನ ಫೈನಾನ್ಸ್ ಕಛೇರಿಯಲ್ಲಿಯೇ ದಾರುಣವಾಗಿ ಹತ್ಯೆಗೀಡಾದ ಕೂಡಲು ಅಜೇಂದ್ರ ಶೆಟ್ಟಿ ಅವರಿಗೆ ಸಂಘದ ವತಿಯಿಂದ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಭಾಗವಹಿಸಿದ ಅಜೇಂದ್ರ ಅವರ ನಿಕಟ ಸಂಬಂಧಿ ಅಜಿತ್ ಶೆಟ್ಟಿ ಅವರು ಮಾತನಾಡುತ್ತಾ ಶಿಕ್ಷಣಕ್ಕೆ,ಸಹನೆಗೆ ಹೆಸರಾದ ಕರಾವಳಿ ಜಿಲ್ಲೆಗಳು ಹತ್ಯೆಗಳಿಗೆ ಕುಖ್ಯಾತಿಗೊಳ್ಳುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ, ಅಜೇಂದ್ರ ಶೆಟ್ಟಿ ಪ್ರಕರಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಪಡೆ 24 ಗಂಟೆಯೊಳಕ್ಕೆ ಹತ್ಯಾ ಆರೋಪಿಯನ್ನು ವಶಕ್ಕೆ ಪಡೆದಿರುವುದು ಶ್ಲಾಘನೀಯ, ಮುಂದೆ ಇಂತಹ ಪ್ರಕರಣಗಳನ್ನು ತಡೆ ಹಾಕುವ ನಿಟ್ಟಿನಲ್ಲೂ ಇಲಾಖೆಯು ಗಮನ ಹರಿಸಬೇಕಿದೆ ಎಂದು ಹೇಳಿದರು .

ಶಿಕ್ಷಕಿ ಜಸ್ಸಿ ಎಲಿಜಬೆತ್ ನುಡಿ ನಮನಗಳನ್ನು ವಾಚಿಸಿದರು,ಸಭೆಯಲ್ಲಿ ಅಜೇಂದ್ರ ಶೆಟ್ಟಿ ಅವರ ಸಹೋದರ ಕೂಡಾಲ್ ಮಹೇಂದ್ರ ಶೆಟ್ಟಿ, ಸಂಬಂಧಿಗಳಾದ ಬೆನಕ ಎಂಟರ್ಪ್ರೈಸಸ್ ನ ಪ್ರಭಾಕರ ಶೆಟ್ಟಿ, ಅಮಿತ್ ಶೆಟ್ಟಿ, ಹಾಗೂ ಡಾ. ರಾಜ್ ಕುಮಾರ್ ಕನ್ನಡಾಭಿಮಾನಿ ಸಂಘದ ಸದಸ್ಯರು, ಅಜೇಂದ್ರ ಶೆಟ್ಟಿ ಅವರ ಅಭಿಮಾನಿ ಗಳು ಉಪಸ್ಥಿತರಿದ್ದರು. ಅಗಸ್ಟಿನ್ ಸ್ವಾಗತಿಸಿ,ಹುಸೇನ್ ಹೈಕಾಡಿ ಕಾರ್ಯಕ್ರಮವನ್ನು ನಿರೂಪಿಸಿದ್ದರು, ಸುನೀಲ್ ಖಾರ್ವಿ ತಲ್ಲೂರು ಧನ್ಯವಾದ ಅರ್ಪಿಸಿದರು.