ಜಿಲ್ಲೆಯಲ್ಲಿ ಸೀಬೆ ಪ್ರಮುಖ ಲಾಭದಾಯಕ ತೋಟಗಾರಿಕೆ ಬೆಳೆಗಳಲ್ಲಿ ಒಂದು, ಇನ್ನೂ ಹೆಚ್ಚಿನ ಇಳುವರಿಯನ್ನು ಪಡೆಯಲು ಸಾಧ್ಯ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ; ಜಿಲ್ಲೆಯಲ್ಲಿ ಸೀಬೆ ಪ್ರಮುಖ ಲಾಭದಾಯಕ ತೋಟಗಾರಿಕೆ ಬೆಳೆಗಳಲ್ಲಿ ಒಂದು ಜಿಲ್ಲೆಯಲ್ಲಿ ಸುಮಾರು ನಾಲ್ಕು 456 ಹೆಕ್ಟೇರ್ ಪ್ರದೇಶದಲ್ಲಿ ಈ ಬೆಳೆಯನ್ನು ಬೆಳೆಯುತ್ತಿದ್ದು ಸರಾಸರಿ ಇಳುವರಿಯು ಪ್ರತಿ ಹೆಕ್ಟೇರಿಗೆ 17 ಟನ್‍ನಷ್ಟಿದೆ. ಇನ್ನೂ ಹೆಚ್ಚಿನ ಇಳುವರಿಯನ್ನು ಪಡೆಯಲು ಸೀಬೆ ಬೆಳೆಯ ಸಮಗ್ರ ನಿರ್ವಹಣೆಯಿಂದ ಸಾಧ್ಯ ಎಂದು ರೈತರಿಗೆ ಮನವರಿಕೆ ಮಾಡಲು ಕೃಷಿ ವಿಜ್ಞಾನ ಕೇಂದ್ರ, ಕೋಲಾರ ಹಾಗೂ ಆತ್ಮ ಯೋಜನೆ ಕೃಷಿ ಇಲಾಖೆ, ಕೋಲಾರ ರವರ ಸಹಯೋಗದಲ್ಲಿ ದಿನಾಂಕ 16-8-2021 ರಂದು ‘ಸೀಬೆ ಬೆಳೆಯ ಸಮಗ್ರ ನಿರ್ವಹಣೆ’ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮವನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಂತರ್ಜಾಲದ ಮೂಲಕ ಹಮ್ಮಿಕೊಳ್ಳಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ರಾಜೇಂದ್ರ ಬಿ.ಎನ್ ರವರು ಮಾತನಾಡಿ ಸೀಬೆಯನ್ನು ನಾಟಿ ಮಾಡುವಾಗ ಮುಖ್ಯವಾಗಿ ಮಾರುಕಟ್ಟೆಯ ಸೌಲಭ್ಯಗಳು, ತಳಿಯ ಗುಣಧರ್ಮಗಳು, ಮಣ್ಣಿನ ಫಲವತ್ತತೆ ಹಾಗೂ ಅಧಿಕೃತ ಮೂಲಗಳಿಂದ ಸಸಿಗಳನ್ನು ಖರೀದಿಸುವುದರ ಕುರಿತು ಹೆಚ್ಚಿನ ಗಮನವನ್ನು ನೀಡಬೇಕು ಎಂದು ತಿಳಿಸಿದರು. ಅಧಿಕ ಸಾಂದ್ರತೆ ಬೇಸಾಯ ಮಾಡುವವರು ಬೆಳವಣಿಗೆಗೆ ಆಧಾರದ ಮೇಲೆ ಮೊದಲ ವರ್ಷ ಗಿಡಕ್ಕೆ ಆಕಾರವನ್ನು ಒದಗಿಸಬೇಕು ಮತ್ತು ತದನಂತರ ವರ್ಷಗಳಲ್ಲಿ ಕನಿಷ್ಠ ಎರಡು ಬಾರಿ ಸವರಿಕೆ ಮಾಡಿದ್ದಲ್ಲಿ ಸೀಬೆ ಬೆಳೆಯಲ್ಲಿ ಉತ್ತಮ ಗುಣಮಟ್ಟದ ಹೆಚ್ಚಿನ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು ಹಾಗೂ ಶ್ರೀ. ಕೆ. ತುಳಸಿರಾಮ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕೋಲಾರರವರು ಸೀಬೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಕೀಟಗಳ ಹಾವಳಿ ಕಂಡುಬರುತ್ತದೆ. ಅದರಲ್ಲಿ ನಮ್ಮ ಜಿಲ್ಲೆಯಲ್ಲಿ ಪ್ರಮುಖವಾಗಿ ಸೀಬೆಯ ಹಣ್ಣಿನ ನೋಣ, ಟೀ-ಸೊಳ್ಳೆ, ಹಿಟ್ಟು ತಿಗಣೆ, ಸುರಳಿ ಬಿಳಿನೋಣ, ಶಲ್ಕ ಕೀಟ, ತೊಗಟೆ ತಿನ್ನುವ ಹುಳ ಹಾಗೂ ಥ್ರಿಪ್ಸ್ ನುಸಿಗಳು ಕಂಡುಬರುತ್ತಿದ್ದು, ಈ ಕೀಟಗಳ ಹಾನಿಯ ಲಕ್ಷಣಗಳು ಜೀವನ ಚಕ್ರ ಮತ್ತು ಸಮಗ್ರ ಹತೋಟಿ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಿದರು. ಕೀಟಗಳ ನಿರ್ವಹಣೆಗೆ ರಾಸಾಯನಿಕಗಳನ್ನು ಅವಲಂಬಿಸದೆ ಸಮಗ್ರ ನಿರ್ವಹಣೆ ಮಾಡಿದಾಗ ಖರ್ಚು ಕಡಿಮೆ ಮಾಡಿ ಗುಣಮಟ್ಟದ ಕಾಯಿಗಳನ್ನು ಉತ್ಪಾದಿಸಬಹುದು ಎಂದು ತಿಳಿಸಿದರು. ನಂತರ ಡಾ. ಅಂಬಿಕಾ ಡಿ.ಎಸ್, ವಿಜ್ಞಾನಿ (ಸಸ್ಯ ಸಂರಕ್ಷಣೆ), ಕೃಷಿ ವಿಜ್ಞಾನ ಕೇಂದ್ರ, ಕೋಲಾರ ರವರು ಮಾತನಾಡಿ ಇಲ್ಲಿ ಮುಖ್ಯವಾಗಿ ಕಂಡುಬರುವ ಸೊರಗು ರೋಗ, ಚಿಬ್ಬ್ಪು ರೋಗ, ಕಜ್ಜಿ ರೋಗ, ಕಪ್ಪುಮಸಿ ರೋಗ, ಬೇರು ಗಂಟು ಜಂತು ರೋಗದ ಲಕ್ಷಣಗಳು, ಪ್ರಾರಂಭದಲ್ಲಿ ರೋಗಗಳ ಗುರುತಿಸುವಿಕೆ, ರೋಗಗಳು ಹರಡುವ ಬಗ್ಗೆ ಮತ್ತು ಸಮಗ್ರ ನಿರ್ವಹಣಾ ಕ್ರಮಗಳ ಕುರಿತು ವಿವರವಾಗಿ ಚರ್ಚಿಸಿದರು. ಈ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮದಲ್ಲಿ ಸುಮಾರು 65 ರೈತರು ಅಂತರ್ಜಾಲದ ಮೂಲಕ ಭಾಗವಹಿಸಿದ್ದರು ಮತ್ತು ವಿವಿಧ ರೈತ ಸಂಪರ್ಕ ಕೇಂದ್ರಗಳಾದ ಲಕ್ಕೂರು, ಟೇಕಲ್, ಕಸಬಾ, ದುಗ್ಗಸಂದ್ರ, ಬೈರಕೂರು, ಶ್ರೀನಿವಾಸಪುರ, ಕೋಲಾರ ಮತ್ತು ಬಂಗಾರಪೇಟೆಗಳಲ್ಲಿನ ರೈತರು ಭಾಗವಹಿಸಿ ಈ ಸಾಮಥ್ರ್ಯ ವೃದ್ಧಿ ಕಾರ್ಯಕ್ರಮದ ಪ್ರಯೋಜನ ಪಡೆದರು. ಸುಮಾರು 300 ಜನ ರೈತರು ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದರು ಹೆಚ್ಚಿನ ಮಾಹಿತಿಗಾಗಿ ಡಾ. ರಾಜೇಂದ್ರ ಬಿ.ಎನ್ (9945471222), ಶ್ರೀ. ಕೆ. ತುಳಸಿರಾಮ್ (9448633234) ಡಾ. ಅಂಬಿಕಾ ಡಿ.ಎಸ್ (9964877788) ಡಾ. ಜ್ಯೋತಿ ಕಟ್ಟೆಗೌಡರ (8904603263) ರವರಿಗೆ ಸಂಪರ್ಕಿಸಬಹುದು ಎಂದು ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೋಲಾರದಿಂದ ಮಾಹಿತಿ ಒದಗಿಸಲಾಯಿತು.